ಜಿಬಿಎ 
ಬೆಂಗಳೂರು

ಕಟ್ಟಡ ತ್ಯಾಜ್ಯ ಮಾತ್ರ ವಿಲೇವಾರಿ!

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ
  • ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನಕ್ಕೆ ನಾಳೆ ಚಾಲನೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಗ್ರೇಟರ್​ ಬೆಂಗಳೂರು ವ್ಯಾಪ್ತಿಯಲ್ಲಿ ಆ.1ರಿಂದ ಕೈಗೊಂಡಿರುವ 'ತ್ಯಾಜ್ಯದಿಂದ ಸ್ವಾತಂತ್ರ್ಯ' ಅಭಿಯಾನದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಂಗ್ರಹವಾಗಿರುವ ಮಣ್ಣು, ಕಟ್ಟಡ ತ್ಯಾಜ್ಯ ಸೇರಿ ಪಾರಂಪರಿಕ ತ್ಯಾಜ್ಯವನ್ನು ಮಾತ್ರ ತೆರವುಗೊಳಿಸಲಾಗುತ್ತದೆ. ಗೃಹ ತ್ಯಾಜ್ಯದಿಂದ ಉಂಟಾಗಿರುವ ಬ್ಲಾಕ್​ಸ್ಪಾಟ್​ಗಳನ್ನು ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಜಿಬಿಎ ಕೇಂದ್ರ ಕಚೇರಿಯಲ್ಲಿ "ತ್ಯಾಜ್ಯದಿಂದ ಸ್ವಾತಂತ್ರ್ಯ' ಅಭಿಯಾನಕ್ಕೆ ಸಂಬಂಧಿಸಿದಂತೆ ಗುರುವಾರ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ನಗರದಾದ್ಯಂತ ಹಲವು ವರ್ಷಗಳಿಂದ ರಸ್ತೆ ಬದಿ, ಸಾರ್ವಜನಿಕ ಸ್ಥಳಗಳು ಹಾಗೂ ಖಾಲಿ ಜಾಗಗಳಲ್ಲಿ ಸಂಗ್ರಹವಾಗಿರುವ ಮಣ್ಣು, ಕಟ್ಟಡ ಭಗ್ನಾವಶೇಷಗಳು (ಸಿ&ಡಿ ವೇಸ್ಟ್​), ಪೈಪ್​ಗಳು, ವಿದ್ಯುತ್​ ಕಂಬಗಳು ಸೇರಿ ವಿವಿಧ ಪಾರಂಪರಿಕ ತ್ಯಾಜ್ಯವನ್ನಷ್ಟೇ ಈ ಅಭಿಯಾನದಡಿ ತೆರವುಗೊಳಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ನಗರದ ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಮತ್ತು ವಿವಿಧ ಸಾಮಗ್ರಿಗಳನ್ನು ಸುರಿಯುತ್ತಿರುವುದರಿಂದ ಅವುಗಳ ಮೇಲೆ ಗಿಡಗಂಟಿಗಳು ಬೆಳೆದು, ಇಲಿ, ಹಾವು ಹಾಗೂ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದರ ಜತೆಗೆ, ತ್ಯಾಜ್ಯ ಬಿದ್ದಿರುವ ಸ್ಥಳಗಳಲ್ಲಿ ಮತ್ತಷ್ಟು ಕಸವನ್ನು ಎಸೆಯುವ ಪ್ರವೃತ್ತಿ ಹೆಚ್ಚಾಗಿ ನಗರದ ಸೌಂದರ್ಯಕ್ಕೂ ಧಕ್ಕೆ ಉಂಟಾಗುತ್ತಿದೆ ಎಂದು ಹೇಳಿದರು.
ನಗರದಲ್ಲಿರುವ ಅನೇಕ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೆ ಮಣ್ಣು, ತ್ಯಾಜ್ಯ ಹಾಗೂ ಕಳೆ-ಗಿಡಗಳು ಬೆಳೆದು ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಈ ಕುರಿತು ನಾಗರಿಕರಿಂದ ನೂರಾರು ದೂರುಗಳು ಬಂದಿವೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿ ತುಷಾರ್​ ಗಿರಿನಾಥ್​, ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್​, ಜಲಮಂಡಳಿ ಅಧ್ಯಕ್ಷೆ ಮಂಜುಳಾ, ವಿಶೇಷ ಆಯುಕ್ತ ನಿತೀಶ್​, ನಗರ ಪಾಲಿಕೆ ಆಯುಕ್ತರಾದ ಡಿ.ಎಸ್​. ರಮೇಶ್​, ಪಿ. ಸುನೀಲ್​ ಕುಮಾರ್​, ಕೆ.ಎನ್​. ರಮೇಶ್​, ಜಿ. ಜಗದೀಶ್​, ಡಾ.ಕೆ.ವಿ. ರಾಜೇಂದ್ರ, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ ನಿಯಮಿತದ ಸಿಇಒ ಕರೀಗೌಡ, ಇದ್ದರು.
ಅಭಿಯಾನಕ್ಕೆ ಸಿಎಂ ಚಾಲನೆ
ಆ.1ರಂದು ಆರಂಭವಾಗಲಿರುವ "ತ್ಯಾಜ್ಯದಿಂದ ಸ್ವಾತಂತ್ರ್ಯ' ಅಭಿಯಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಚಾಲನೆ ನೀಡಲಿದ್ದಾರೆ. ಆಗಸ್ಟ್​ ಪೂರ್ತಿ ಅಭಿಯಾನ ನಡೆಯಲಿದ್ದು, ಸಾರ್ವಜನಿಕ ಸ್ಥಳಗಳಲ್ಲಿರುವ ಬೃಹತ್​ ತ್ಯಾಜ್ಯವನ್ನು ಸಂಬಂಧಿಸಿದ ಇಲಾಖೆಗಳು ಹಾಗೂ ಸಂಸ್ಥೆಗಳು ತೆರವುಗೊಳಿಸುವಂತೆ ಆಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
1,616 ಸ್ಥಳ ಗುರುತು
ರಸ್ತೆ ಬದಿ, ಪಾದಚಾರಿ ಮಾರ್ಗ, ಸಾರ್ವಜನಿಕ ಸ್ಥಳಗಳು, ಖಾಲಿ ನಿವೇಶನಗಳು ಮಾತ್ರವಲ್ಲದೆ ವಿವಿಧ ಇಲಾಖೆಗಳ ಖಾಲಿ ಜಾಗಗಳಲ್ಲಿಯೂ ಪಾರಂಪರಿಕ ತ್ಯಾಜ್ಯ ಸಂಗ್ರಹವಾಗಿದ್ದು, ಇದರಿಂದ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಪ್ರಸ್ತುತ 1,616 ಸ್ಥಳಗಳಲ್ಲಿ ಸುಮಾರು 22 ಸಾವಿರ ಟನ್​ ಪಾರಂಪರಿಕ ತ್ಯಾಜ್ಯವನ್ನು ಗುರುತಿಸಲಾಗಿದೆ. ನಗರದಾದ್ಯಂತ ಒಟ್ಟು 1 ಲಕ್ಷ ಟನ್​ಗಿಂತ ಹೆಚ್ಚು ತ್ಯಾಜ್ಯ ಇರಬಹುದೆಂದು ಸಚಿವರು ಅಂದಾಜಿಸಿದ್ದಾರೆ.
ವಿವಿಧ ಇಲಾಖೆಗಳ ಸಮನ್ವಯ
ಐದು ನಗರ ಪಾಲಿಕೆಗಳು, ಮೆಟ್ರೋ, ರೈಲ್ವೆ, ಬಿಡಿಎ, ಜಲಮಂಡಳಿ, ಬೆಸ್ಕಾಂ, ಕೆ-&ರೈಡ್​, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಪಾರಂಪರಿಕ ತ್ಯಾಜ್ಯ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಬೃಹತ್​ ತ್ಯಾಜ್ಯ ತೆರವು ಕಾರ್ಯಕ್ಕಾಗಿ ಸುಮಾರು 100 ವಾಹನಗಳನ್ನು ನಿಯೋಜಿಸಲಾಗುತ್ತಿದ್ದು, ಅಗತ್ಯವಿದ್ದಲ್ಲಿ ಇನ್ನಷ್ಟು ವಾಹನಗಳನ್ನು ನಿಯೋಜಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.