ಈ 3 ವಿಧಾನ ಅನುಸರಿಸಿ ಅಂತಿಮ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಒಮ್ಮೆ ಚೆಕ್ ಮಾಡಿಕೊಳ್ಳಿ!  
ಬೆಂಗಳೂರು

ಈ 3 ವಿಧಾನ ಅನುಸರಿಸಿ ಅಂತಿಮ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಒಮ್ಮೆ ಚೆಕ್ ಮಾಡಿಕೊಳ್ಳಿ! ಇಲ್ಲದಿದ್ರೆ ಏನ್​ ಮಾಡ್ಬೇಕು? Voter List Status Check

Voter List Status Check : ಕರ್ನಾಟಕದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ 'ವಿಶೇಷ ತೀವ್ರ ಪರಿಷ್ಕರಣೆ' ಪ್ರಕ್ರಿಯೆಯು ಮುಕ್ತಾಯಗೊಂಡಿದ್ದು, ಆಯೋಗವು ಇಂದು ರಾಜ್ಯದ ನವೀಕೃತ ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ವಿ. ಅನ್ಬುಕುಮಾರ್ ಅವರು, ಪರಿಷ್ಕೃತ ಮಾಹಿತಿಯ ಪ್ರಕಾರ ಪ್ರಸ್ತುತ ರಾಜ್ಯದಲ್ಲಿ ಒಟ್ಟು 4,54,55,689 ನೊಂದಾಯಿತ ಮತದಾರರಿದ್ದಾರೆ. ರಾಜ್ಯದ ಒಟ್ಟು ಮತದಾರರಲ್ಲಿ ಮಹಿಳೆಯರೇ ಮೇಲುಗೈ ಸಾಧಿಸಿದ್ದು, ಅವರ ಸಂಖ್ಯೆ 2,29,12,355 ತಲುಪಿದೆ. ಇನ್ನು ಪುರುಷ ಮತದಾರರ ಸಂಖ್ಯೆ 2,24,40,493 ಆಗಿದ್ದರೆ, ತೃತೀಯ ಲಿಂಗಿ ಸಮುದಾಯದಿಂದ ಒಟ್ಟು 2,841 ಮತದಾರರು ಪಟ್ಟಿಯಲ್ಲಿ ನೊಂದಾಯಿಸಿಕೊಂಡಿದ್ದಾರೆ.

ತೀವ್ರ ಪರಿಷ್ಕರಣಾ ಅಭಿಯಾನದ ಸಮಯದಲ್ಲಿ ಬೃಹತ್ ಮಟ್ಟದ ಶುದ್ಧೀಕರಣ ಪ್ರಕ್ರಿಯೆ ನಡೆದಿದ್ದು, ನಕಲಿ, ಅನರ್ಹ ಹಾಗೂ ದ್ವಿಪ್ರತಿಯಾಗಿದ್ದ ಒಟ್ಟು 99,76,625 ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.

ಅಂತಿಮ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಆನ್‌ಲೈನ್ ಮೂಲಕ ಸುಲಭವಾಗಿ ಪರಿಶೀಲಿಸಬಹುದು. ಇದಕ್ಕೆ ಸಂಬಂಧಿಸಿದ ಹಂತಗಳು ಕೆಳಗಿನಂತಿವೆ:

ವಿಧಾನ 1: ವೆಬ್‌ಸೈಟ್ ಮೂಲಕ ಪರಿಶೀಲನೆ (NVSP / ECI Portal)

ಹಂತ 1: ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ https://voters.eci.gov.in, electoralsearch.eci.gov.in ಅಥವಾ https://electoralsearch.eci.gov.in ಗೆ ಭೇಟಿ ನೀಡಿ.

ಹಂತ 2: ಹೋಮ್ ಪೇಜ್‌ನಲ್ಲಿರುವ "Search in Electoral Roll" (ಮತದಾರರ ಪಟ್ಟಿಯಲ್ಲಿ ಹುಡುಕಿ) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 3: ಅಲ್ಲಿ ನಿಮಗೆ ಮೂರು ರೀತಿಯಲ್ಲಿ ಪರಿಶೀಲಿಸಲು ಅವಕಾಶ ಸಿಗುತ್ತದೆ:

1. EPIC ಸಂಖ್ಯೆ ಮೂಲಕ : ನಿಮ್ಮ ಮತದಾರರ ಗುರುತಿನ ಚೀಟಿ (Voter ID) ಸಂಖ್ಯೆಯನ್ನು ನಮೂದಿಸಿ, ರಾಜ್ಯವನ್ನು ಆಯ್ಕೆ ಮಾಡಿ ಪರಿಶೀಲಿಸಬಹುದು.

2. ವೈಯಕ್ತಿಕ ವಿವರಗಳ ಮೂಲಕ : ನಿಮ್ಮ ಹೆಸರು, ತಂದೆ/ಗಂಡನ ಹೆಸರು, ವಯಸ್ಸು, ಲಿಂಗ, ರಾಜ್ಯ, ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿ ಹುಡುಕಬಹುದು.

3. ಮೊಬೈಲ್ ಸಂಖ್ಯೆ ಮೂಲಕ : ನೊಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಿ ಪರಿಶೀಲಿಸಬಹುದು.

ಹಂತ 4: 'Captcha' ಕೋಡ್ ಅನ್ನು ಸರಿಯಾಗಿ ನಮೂದಿಸಿ 'Search'** ಬಟನ್ ಕ್ಲಿಕ್ ಮಾಡಿ.

ಹಂತ 5: ನಿಮ್ಮ ಹೆಸರು ಪಟ್ಟಿಯಲ್ಲಿದ್ದರೆ, ನಿಮ್ಮ ಮತಗಟ್ಟೆ ಹಾಗೂ ವಿವರಗಳು ಪರದೆಯ ಮೇಲೆ ಕಾಣಿಸುತ್ತವೆ. ಅಲ್ಲಿಯೇ ನೀವು 'Voter Information Slip' ಡೌನ್‌ಲೋಡ್ ಮಾಡಿಕೊಳ್ಳಬಹುದು

ವಿಧಾನ 2: 'ವೋಟರ್ ಹೆಲ್ಪ್‌ಲೈನ್' ಆ್ಯಪ್ ಮೂಲಕ

ಹಂತ 1: ನಿಮ್ಮ ಮೊಬೈಲ್‌ನಲ್ಲಿ 'Voter Helpline' ಆ್ಯಪ್‌ ಅನ್ನು (Google Play Store / App Store ನಿಂದ) ಡೌನ್‌ಲೋಡ್ ಮಾಡಿ.

ಹಂತ 2: ಆ್ಯಪ್ ಓಪನ್ ಮಾಡಿ, 'Search in Electoral Roll' ಮೇಲೆ ಕ್ಲಿಕ್ ಮಾಡಿ.

ಹಂತ 3: ನಿಮ್ಮ Voter ID ಕಾರ್ಡ್‌ನಲ್ಲಿರುವ QR ಕೋಡ್ ಸ್ಕ್ಯಾನ್ ಮಾಡಿ ಅಥವಾ EPIC ಸಂಖ್ಯೆ / ವಿವರಗಳನ್ನು ನಮೂದಿಸಿ ನಿಮ್ಮ ಹೆಸರು ಪರಿಶೀಲಿಸಿಕೊಳ್ಳಿ.

ವಿಧಾನ 3: ಹೆಲ್ಪ್‌ಲೈನ್ ಸಂಖ್ಯೆ ಅಥವಾ SMS ಮೂಲಕ

SMS ಮೂಲಕ: ನಿಮ್ಮ ಮೊಬೈಲ್‌ನಿಂದ `EPIC <ಖಾಲಿ ಜಾಗ> ನಿಮ್ಮ ವೋಟರ್ ಐಡಿ ಸಂಖ್ಯೆ`ಎಂದು ಟೈಪ್ ಮಾಡಿ 1950 ಸಂಖ್ಯೆಗೆ SMS ಕಳುಹಿಸಿ.

ಕಾಲ್ ಮೂಲಕ: ಉಚಿತ ಸಹಾಯವಾಣಿ ಸಂಖ್ಯೆ 1950 ಕ್ಕೆ ಕರೆ ಮಾಡಿ (ಮುಂದೆ ನಿಮ್ಮ ಜಿಲ್ಲೆಯ STD ಕೋಡ್ ಸೇರಿಸಿ) ನೇರವಾಗಿ ಮಾಹಿತಿ ಪಡೆಯಬಹುದು.

ಪ್ರಮುಖ ಸೂಚನೆ

ಒಂದು ವೇಳೆ ಪಟ್ಟಿಯಲ್ಲಿ ನಿಮ್ಮ ಹೆಸರು ಕಂಡುಬರದಿದ್ದರೆ, ತಕ್ಷಣವೇ 'Form 6' ಭರ್ತಿ ಮಾಡಿ ಹೊಸದಾಗಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು.