ಟೆಕ್ ಶೃಂಗಸಭೆಯ ಮಳಿಗೆಗಳಲ್ಲಿ ವಿರಾಟ್ ಡ್ರೋನ್
- ಕಾಮ್ರೇಡೋ ಏರೋಸ್ಪೇಸ್'ನಿಂದ ವಿನೂತನ ಡ್ರೋನ್ ಅಭಿವೃದ್ಧಿ
- ಹೈಬ್ರಿಡ್ ಡ್ರೋನ್
- ನಿರ್ಮಾಣಕ್ಕೆ ಕಡಿಮೆ ಭಾರದ ವಸ್ತುಗಳ ಬಳಕೆ
> ಪವನ್ ಆಚಾರ್ಯ ನೀರ್ಚಾಲು ಬೆಂಗಳೂರು
ರಕ್ಷಣಾ ವಿಭಾಗದಲ್ಲಿ ತಂತ್ರಜ್ಞಾನಗಳ ಅಭಿವೃದ್ಧಿ ಯಾವಾಗಲೂ ಗೌಪ್ಯವೂ ನಿರಂತರವೂ ಆಗಿರುತ್ತದೆ. ಭಾರತೀಯ ಸೇನೆಯೂ ನೂತನ ತಂತ್ರಜ್ಞಾನಗಳ ಆವಿಷ್ಕಾರಗಳ ಜತೆಗೆ ಯುದ್ಧೋಪಕರಣಗಳ ಅಭಿವೃದ್ಧಿಯತ್ತವೂ ಚಿಂತನೆ ನಡೆಸುತ್ತಿರುತ್ತದೆ.
ಈ ಬಾರಿಯ ಟೆಕ್ ಶೃಂಗಸಭೆಯ ಮಳಿಗೆಗಳಲ್ಲಿ ಮಿಲಿಟರಿ ಉಪಯೋಗಿ ವಸ್ತುಗಳು ಹೆಚ್ಚಾಗಿ ಗಮನ ಸೆಳೆದಿದ್ದು, ವಿದ್ಯಾರ್ಥಿಗಳು, ವಿದೇಶಿಯರು ಸೇರಿ ವೀಕ್ಷಕರು ಬಹಳ ಕುತೂಹಲದಿಂದ ನೋಡುತ್ತಿದ್ದುದು ಕಂಡುಬಂತು. ಅದರಲ್ಲಿ ಆರ್ಟ್ಪಾರ್ಕ್ ಸಂಸ್ಥೆಯ "ಕಾಮ್ರೇಡೋ ಏರೋಸ್ಪೇಸ್'ನ ವಿರಾಟ್ ಡ್ರೋನ್ ಮಳಿಗೆಯ ಪ್ರಮುಖ ಆಕರ್ಷಣೆಯಲ್ಲಿ ಒಂದಾಗಿತ್ತು. ಸೇನಾ ಕಾರ್ಯಾಚರಣೆಗಳಿಗೆ ಹೈ ಆಲ್ಟಿಟ್ಯೂಡ್ನಲ್ಲಿ ಬಳಕೆಯಾಗಬಹುದಾದ ಹೈಬ್ರಿಡ್ ಡ್ರೋನ್ ಇದಾಗಿದ್ದು, ಏರ್ಡ್ರಾಪ್, ಕಣ್ಗಾವಲಿಗೆ ಮುಖ್ಯವಾಗಿ ಬಳಕೆಯಾಗುತ್ತದೆ. ಇದರಲ್ಲೇ ವಿವಿಧ ಮಾದರಿಯ ಡ್ರೋನ್ಗಳಿದ್ದು, ವಿರಾಟ್ ಒಂದು ಮಿಡಿಯಂ ಕ್ಲಾಸಿಕಲ್ ಡ್ರೋನ್ ಆಗಿದೆ. ಒಟ್ಟು ಭಾರ ಸುಮಾರು 70&80 ಕೆಜಿ, ಅದರಲ್ಲಿ 20 ಕೆಜಿ ಹೊರುವ ಸಾಮರ್ಥ್ಯವನ್ನು ಹೊಂದಿದೆ. 500 ಕಿ.ಮೀ. ವ್ಯಾಪ್ತಿಯಲ್ಲಿ 6 ಸಾವಿರ ಮೀಟರ್ ಎತ್ತರಕ್ಕೆ ಹಾರಬಲ್ಲದು. ಸತತ 6 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆಯನ್ನು ಮಾಡಬಹುದಾದ ಶಕ್ತಿಶಾಲಿ ಡ್ರೋನ್ ಇದಾಗಿದೆ. ಸೇನೆಗೆ ಗುಡ್ಡಗಾಡುಗಳಲ್ಲಿ ಪರಿಕರಗಳನ್ನು ಸಾಗಿಸಲು ಕೂಡ ಅತ್ಯಂತ ಉಪಯೋಗಿ ಡ್ರೋನ್ ಇದಾಗಿದೆ. ಡ್ರೋನ್ ಪರೀಕ್ಷಾ ಹಂತದಲ್ಲಿದ್ದು 6 ತಿಂಗಳಲ್ಲಿ ಸೇನೆಯ ಕೈಸೇರುವ ಸಾಧ್ಯತೆ ಇದೆ.
ವರ್ಟಿಕಲ್ ಟೇಕಾಫ್ ವಿಶೇಷ: ವಿರಾಟ್ ಡ್ರೋನ್ನ ಪ್ರಮುಖ ವಿಶೇಷತೆ ಎಂದರೆ, ವರ್ಟಿಕಲ್ ಟೇಕಾಫ್ . ಯಾವುದೇ ಪ್ರದೇಶದಿಂದ ಬೇಕಾದರೂ ಟೇಕಾಫ್ ಮಾಡಬಹುದಾಗಿದೆ. ಏರ್ಸ್ಟ್ರಿಪ್, ರನ್ವೇ ಅಥವಾ ಹೆಲಿಪ್ಯಾಡ್ನಲ್ಲಿ ಲ್ಯಾಂಡಿಂಗ್ ಸುಲಭವಾಗಿ ಆಗುತ್ತದೆ. ಹೈಬ್ರಿಡ್ ಡ್ರೋನ್ ಆಗಿರುವುದರಿಂದಲೇ ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ಎರಡನ್ನೂ ಬಳಸಬಹುದು. ಆರ್ಟ್ಪಾರ್ಕ್ ಸಂಸ್ಥೆಯ "ಕಾಮ್ರೇಡೋ ಏರೋಸ್ಪೇಸ್' ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಬೆಂಬಲದಿಂದ ರೂಪುಗೊಂಡ ಡ್ರೋನ್ ತಯಾರಿಕೆ ಮತ್ತು ಅಭಿವೃದ್ಧಿಯ ಸಂಸ್ಥೆಯಾಗಿದೆ. ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಆರಂಭಿಕ ನಿಧಿ ಈ ಸಂಸ್ಥೆಗೆ ದೊಡ್ಡ ಬೆಂಬಲವನ್ನು ನೀಡಿದೆ. ಸಂಸ್ಥೆಯು ವಾಣಿಜ್ಯ ಹಾಗೂ ಸೇನೆ ಕಾರ್ಯತಂತ್ರ ಅಗತ್ಯಗಳಿಗೆ ತಕ್ಕಂತೆ, ವಿವಿಧ ಕ್ಷೇತ್ರಗಳಿಗೆ ಹೊಂದುವ ಆಧುನಿಕ ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸುವುದು ಮತ್ತು ಅಭಿವೃದ್ಧಿಪಡಿಸುವ ಸಾಮರ್ಥ್ಯ ಹೊಂದಿದೆ.
ಟೆಕ್ಶೃಂಗದಲ್ಲಿ ವಿರಾಟ್ ಹೊರತಾಗಿ, ವಿರೋಧಿಗಳ ಶಸ್ತ್ರಾಸ್ತ್ರ ಪತ್ತೆಗೆ ರಾಡರ್, ಕೌಂಟರ್ ಡ್ರೋನ್ ಸಿಸ್ಟಂ ಇತ್ಯಾದಿ ವಿವಿಧ ಮಿಲಿಟರಿ ಸಂಬಂಧಿ ಪ್ರದರ್ಶನಗಳು ಕುತೂಹಲ ಕೆರಳಿಸಿತ್ತು.
* ಭಾರತೀಯ ಭೂ, ನೌಕಾ ಹಾಗೂ ವಾಯು ಸೇನೆಯು ಬಳಸಬಹುದು
* ನಿರ್ಮಾಣಕ್ಕೆ ಕಡಿಮೆ ಭಾರದ ವಸ್ತುಗಳ ಬಳಕೆ
* &20 ಡಿಗ್ರಿಯಿಂದ +55 ಡಿಗ್ರಿವರೆಗಿನ ವಾತಾವರಣದಲ್ಲಿ ಹಾರಾಟ ನಡೆಸಬಲ್ಲದು
ಕೃಷಿಗೆ ಪೂರಕ "ಭೂ ಪರೀಕ್ಷಕ್'
ಕೇವಲ 90 ಸೆಕೆಂಡಿನಲ್ಲಿ ಮಣ್ಣು ಪರೀಕ್ಷೆಯನ್ನು ನಡೆಸುವ ವಿಭಿನ್ನ ಪರಿಕರ ಟೆಕ್ಶೃಂಗದಲ್ಲಿ ಜನಾಕರ್ಷಣೆಗೆ ಪಾತ್ರವಾಗಿತ್ತು. "ಸ್ಕ್ಯಾನ್ನೆಕ್ಸ್ಟ್ ಭೂ ಪರಿಕ್ಷಕ್' ವಿನೂತನ ಮಣ್ಣಿನ ಪರೀಕ್ಷಾ ಸಾಧನವಾಗಿದ್ದು, ಐಐಟಿ ಕಾನ್ಪುರ್ ಅಭಿವೃದ್ಧಿಪಡಿಸಿದೆ. ಯಾವುದೇ ರಾಸಾಯನಿಕ ರಿಯಾಜೆಂಟ್ಗಳನ್ನು ಬಳಸದೆ ಕೇವಲ 90 ಸೆಕೆಂಡ್ಗಳಲ್ಲಿ ವೇಗ ಮತ್ತು ನಿಖರವಾದ ಫಲಿತಾಂಶಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಸುಧಾರಿತ ಇನ್ಫ್ರಾರೆಡ್ ಸ್ಪೆಕ್ಟ್ರೋಸ್ಕೋಪಿ, ಐಒಟಿ ತಂತ್ರಜ್ಞಾನ ಮತ್ತು ಎಐ/ಎಂಎಲ್ ಆಲ್ಗೋರಿದಮ್ಗಳ ಆಧಾರಿತವಾಗಿರುವ ಈ ಸಾಧನವು ಮಣ್ಣು ವಿಶ್ಲೇಷಣೆಗೆ ಆಧುನಿಕ ಮತ್ತು ಪರಿಣಾಮಕಾರಿ ಪರಿಹಾರವನ್ನು ಒದಗಿಸುತ್ತದೆ. ಸುಮಾರು 325 ಗ್ರಾಂ ತೂಕ ಹೊಂದಿರುವ ಇದು ರೈತರು, ಕ್ಷೇತ್ರ ಅಧಿಕಾರಿಗಳು ಮತ್ತು ಕೃಷಿ ಸೇವಾ ಸಂಸ್ಥೆಗಳು ದೂರದ ಪ್ರದೇಶಗಳಲ್ಲಿಯೂ ಸುಲಭವಾಗಿ ತೆಗೆದುಕೊಂಡು ಹೋಗಿ ಬಳಸಿಕೊಳ್ಳುವಂತೆ ಮಾಡುತ್ತದೆ. ನೈಜ-ಕಾಲದ ಮಣ್ಣಿನ ಮಾಹಿತಿಯನ್ನು ಆಧರಿಸಿ ಬೆಳೆ- ರ್ನಿದಿಷ್ಟ ಸಲಹೆಗಳನ್ನು ನೀಡುವ ಸಾಮರ್ಥ್ಯ ಇದಕ್ಕೆ ವಿಶೇಷ ಬಲ ನೀಡುತ್ತದೆ. ಇದರಿಂದ ಉತ್ಪಾದಕತೆ ಹೆಚ್ಚಿಸಲು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ. ಜತೆಗೆ, ಮಣ್ಣಿನ ಅಂಶಗಳನ್ನು ಸಂಗ್ರಹಿಸಲು ಮತ್ತು ವೀಕ್ಷಿಸಲು ಸಹಾಯ ಮಾಡುವ ಡಿಜಿಟಲ್ ಡ್ಯಾಶ್ಬೋರ್ಡ್ ಕೂಡ ಇದರಲ್ಲಿ ಅಳವಡಿಸಲಾಗಿದೆ. ಮಣ್ಣಿಗೆ ತಕ್ಕ ಉತ್ಪನ್ನ ಮತ್ತು ಪೋಷಕಾಂಶ ಸೂಚನೆಗಳನ್ನು ನೀಡುವ ಸಾಮರ್ಥ್ಯದಿಂದ, ಭೂ -ಪರೀಕ್ಷಕ್ ಕೃಷಿ ಚಟುವಟಿಕೆಗಳಿಗೆ ಪೂರಕವಾಗಲಿದೆ.