ಜಿಬಿಎ 
ಬೆಂಗಳೂರು

ನಗರದಲ್ಲಿನ ಅನಾಥ ವಾಹನಗಳನ್ನು ತೆರವುಗೊಳಿಸಿ

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಗ್ರೇಟರ್​ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರಿಂದ ಅಧಿಕಾರಿಗಳಿಗೆ ಸೂಚನೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜಧಾನಿಯ ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿಕೊಂಡಿರುವ ಅನಾಥ ವಾಹನಗಳ ತೆರವಿಗೆ ಗ್ರೇಟರ್​ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 
ಬೆಂಗಳೂರಿನ ಸೌಂದರ್ಯಕ್ಕೆ ಧಕ್ಕೆ ತರುತ್ತಿರುವ ರಸ್ತೆ ಬದಿಯ ಕಟ್ಟಡ ತ್ಯಾಜ್ಯ (ಡೆಬ್ರಿಸ್​), ಅನಧಿಕೃತವಾಗಿ ಬೆಳೆದಿರುವ ಕಳೆ ಹಾಗೂ ರಸ್ತೆಗಳಲ್ಲಿ ಅನಾಥವಾಗಿ ಬಿದ್ದಿರುವ ವಾಹನಗಳ ತೆರವಿಗೆ ಸಂಬಂಧಿಸಿದಂತೆ ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕೇಂದ್ರ ಕಚೇರಿಯಲ್ಲಿ ಅವರು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಮಾತನಾಡಿದರು.
ಈ ವಾಹನಗಳ ಮಾಲೀಕರಿಗೆ ಈಗಾಗಲೇ ನೋಟಿಸ್​ ಜಾರಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ನೋಟಿಸ್​ ನೀಡಿದ ಬಳಿಕವೂ ವಾಹನಗಳನ್ನು ತೆರವುಗೊಳಿಸದಿದ್ದರೆ, ಅವುಗಳನ್ನು ವಶಪಡಿಸಿಕೊಂಡು, ಎಲ್ಲಿ ಪಾರ್ಕ್​ ಮಾಡಬೇಕು ಹಾಗೂ ಹೇಗೆ ಕಾನೂನುಬದ್ಧವಾಗಿ ವಿಲೇವಾರಿ ಮಾಡಬೇಕು ಎಂಬ ಬಗ್ಗೆ ಸೂಕ್ತ ಶಿಷ್ಟಾಚಾರ ಸಿದ್ಧಪಡಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಒಳವರ್ತುಲ ರಸ್ತೆಗಳಿಗಿಂತ ಹೊರವರ್ತುಲ ರಸ್ತೆ ಹಾಗೂ ಹೊರವಲಯದ ರಸ್ತೆಗಳ ಬದಿಯಲ್ಲಿ ತ್ಯಾಜ್ಯ ಮತ್ತು ಕಳೆಗಳ ಸಮಸ್ಯೆ ತೀವ್ರವಾಗಿದೆ. ಮೆಟ್ರೋ, ಕೆ&ರೈಡ್​ ಹಾಗೂ ರೈಲ್ವೆ ಇಲಾಖೆಯ ನಿರ್ಮಾಣ ಕಾಮಗಾರಿಗಳು ನಡೆಯುವ ಜಾಗಗಳಲ್ಲಿ ಬ್ಯಾರಿಕೇಡ್​ಗಳು, ಮಣ್ಣು ಮತ್ತು ನಿರ್ಮಾಣ ತ್ಯಾಜ್ಯಗಳನ್ನು ಹಾಗೇ ಬಿಟ್ಟಿರುವುದರಿಂದ ನಗರದ ಸೌಂದರ್ಯ ಕೆಡುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರೈಲ್ವೆ ಹಳಿಗಳ ಪಕ್ಕದಲ್ಲಿರುವ ಕಳೆ ಹಾಗೂ ತ್ಯಾಜ್ಯವನ್ನು ತಮ್ಮದೇ ಸ್ವಂತ ವೆಚ್ಚದಲ್ಲಿ ಒಂದು ಬಾರಿಗೆ ಸಂಪೂರ್ಣವಾಗಿ ತೆರವುಗೊಳಿಸಲು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಇದಕ್ಕೆ ಪೂರಕವಾಗಿ ತ್ಯಾಜ್ಯ ವಿಲೇವಾರಿ ಮಾಡಲು ಜಿಬಿಎ ವತಿಯಿಂದ ಉಚಿತವಾಗಿ ಡಂಪಿಂಗ್​ ಸೈಟ್​ ಒದಗಿಸುವ ಕೆಲಸ ಮಾಡಬೇಕೆಂದು ಸಭೆಯಲ್ಲಿ ಸಚಿವರು ತಿಳಿಸಿದರು.
ರೈಲ್ವೆ, ಕೆ&ರೈಡ್​ ಹಾಗೂ ಜಿಬಿಎ ಮುಖ್ಯ ಇಂಜಿನಿಯರ್​ಗಳ ಸಮ್ಮುಖದಲ್ಲಿ ಶುಕ್ರವಾರ ಮತ್ತೊಂದು ಸಮನ್ವಯ ಸಭೆ ಕರೆಯಲಾಗಿದ್ದು, ಆಗ ಎಲ್ಲೆಲ್ಲಿ ತ್ಯಾಜ್ಯ ಹಾಗೂ ಕಳೆಗಳ ಸಮಸ್ಯೆ ಇದೆ ಎಂಬ ನಿಖರವಾದ ದತ್ತಾಂಶ ಹಾಗೂ ಸ್ಪಾಟ್​ ಗುರುತಿಸಿಕೊಂಡು ಸಭೆಗೆ ಹಾಜರಾಗುವಂತೆ ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ನಗರದಲ್ಲಿವೆ 1,518 ಅನಾಥ ವಾಹನಗಳು!
ನಗರದಲ್ಲಿ ಒಟ್ಟು 1,518 ಅನಾಥ ವಾಹನಗಳನ್ನು ಗುರುತಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದ್ದಾರೆ. ಕೇಂದ್ರ ಪಾಲಿಕೆಯಲ್ಲಿ 403 ವಾಹನಗಳು, ದಣ &383, ಉತ್ತರ &219, ಪೂರ್ವ &92 ಹಾಗೂ ಪಶ್ಚಿಮ ಪಾಲಿಕೆಯಲ್ಲಿ 421 ಅನಾಥ ವಾಹನಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.