ದಸರಾ, ದೀಪಾವಳಿ ಹಬ್ಬಕ್ಕೂ ಮುನ್ನವೇ ಬೆಂಗಳೂರಿಗರಿಗೆ ತರಕಾರಿ ಬೆಲೆ ಏರಿಕೆ ಬಿಸಿ
ಇನ್ಮುದೆ ಪ್ಲಾನ್ ಬಿ ಇಟ್ಕೊಂಡು, ಮನೆಯಲ್ಲಿಯೇ ತರಕಾರಿ ಬೆಳಿಬೇಕು ಎಂದ ಬೆಂಗಳೂರಿಗರು
ಟೊಮ್ಯಾಟೋ ದರ 60, ಈರುಳ್ಳಿ ದರ 70 ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ ತರಕಾರಿ ರೇಟು
ದಿನ ಬಳಕೆ ವಸ್ತುಗಳ ಬೆಲೆಯು ಏರಿಕೆಯಾಗಿರುವ ಹೊತ್ತಿನಲ್ಲಿ ಹಾಗೂ ಹಾಲಿನ ಬೆಲೆ ಏರಿಕೆ ಆತಂಕದಲ್ಲಿರುವ ಗ್ರಾಹಕರಿಗೆ ಹಬ್ಬಕ್ಕೂ ಮುನ್ನವೇ ದರ ಏರಿಕೆ ಶಾಕ್ ತಟ್ಟಿದೆ. ಬೆಂಗಳೂರಿನಲ್ಲಿ ತರಕಾರಿಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.
ದಸರಾ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಅಲ್ಲದೇ ದೀಪಾವಳಿ ಹಬ್ಬಕ್ಕೂ ವಾರಗಣನೆ ಶುರುವಾಗಿದೆ. ಈ ಹಬ್ಬದ ಸಂಭ್ರದಲ್ಲಿರುವ ಗ್ರಾಹಕರಿಗೆ ಹಾಲು, ತರಕಾರಿ, ದಿನಸಿ ಸಾಮಾಗ್ರಿಗಳ ಏರಿಕೆಯು ಮನೆಯ ಬಜೆಟ್ ಮೇಲೆ ನೇರವಾಗಿ ಪರಿಣಾಮ ಬೀರಿದಂತಾಗಿದೆ. ಸಂಭ್ರಮದಿಂದ ಹಬ್ಬ ಆಚರಿಸುವುದು ಈಬಾರಿ ಡೌಟೇ ಎನ್ನುತ್ತಿದ್ದಾರೆ ಗ್ರಾಹಕರು.
ರಾಜ್ಯದ ಹಲವು ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಪರಿಣಾಮ ನೇರವಾಗಿ ಬೆಳೆ ಮೇಲೆ ಬಿದ್ದಿದೆ. ಮಾರುಕಟ್ಟೆಗೆ ಬರುವ ತರಕಾರಿಗಳ ಪ್ರಮಾಣದಲ್ಲಿ ಅಡಚಣೆ ಉಂಟಾಗಿದೆ. ಅಲ್ಲದೆ ಇನ್ನೂ ಕೆಲವಡೆ ಕಾಣಿಸಿಕೊಂಡಿರುವ ಹಿನ್ನೆಲೆ ಇಳುವರಿ ಬಾರದೆ ಸಂಕಷ್ಟಕ್ಕೀಡಾಗಿದ್ದಾರೆ.
ಮಾರುಕಟ್ಟೆ ಹಾಗೂ ಸಣ್ಣ ಮಳಿಗೆಯಲ್ಲಿ ತರಕಾರಿಗಳ ಬೆಲೆಯು ಹಠಾತ್ತನೇ ನೂರರ ಗಡಿ ದಾಟಿದೆ. ಬೀನ್ಸ್, ಈರುಳ್ಳಿ, ಸೌತೆಕಾಯಿ, ಟೊಮ್ಯಾಟೋ, ಹೀರೇಕಾಯಿ, ಬೀಟ್ರೂಟ್, ನಾಟಿ ಕೊತ್ತಂಬರಿ, ಮೆಣಸಿನಕಾಯಿ ಹಾಗೂ ಸಬ್ಬಕ್ಕಿ, ಪಾಲಕ್ ಸೊಪ್ಪು ಸೇರಿದಂತೆ ಹಲವಾರು ತರಕಾರಿಗಳ ಬೆಲೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ.
ಕಳೆದ ವಾರ ಕೆಜಿಗೆ 25 ರೂ.ಗೆ ಮಾರಾಟವಾಗುತ್ತಿದ್ದ ಟೊಮ್ಯಾಟೋ ದರ ಸದ್ಯ 60ರೂ. ಆಗಿದೆ. ಬೀನ್ಸ್ ಕೆಜಿಗೆ 70 ರೂ.ನಿಂದ 96 ರೂ.ಗೆ ಏರಿಕೆಯಾಗಿದೆ. ಮೂಲಂಗಿ 50, ಸೌತೆಕಾಯಿ40-45, ನವಿಲು ಕೋಸು 50 ರೂ, ದಂಟು 50 ರೂ, ಪಾಲಾಕ್ 70 ರೂ. ನಾಟಿ ಕೊತ್ತಂಬರಿ ಸೊಪ್ಪು 100 ರೂ., ತೊಂಡೆಕಾಯಿ -40 ರೂಪಾಯಿಯಾದರೆ, ಕ್ಯಾಪ್ಸಿಕಂ ಬೆಲೆ 60 ರೂಪಾಯಿಗೆ ಏರಿಕೆಯಾಗಿದೆ. ಬಿಳಿ ಬದನೆಕಾಯಿ, , ಕ್ಲಸ್ಟರ್ ಬೀನ್ಸ್, ಸೌತೆಕಾಯಿ, ಬೆಂಡೆಕಾಯಿ, ಹೀರೇಕಾಯಿ, ಸೊಪ್ಪುಗಳು ಮತ್ತು ಬೀಟ್ರೂಟ್ ಬೆಲೆಗಳು ಕೂಡ ಏರಿಕೆಯಾಗಿವೆ.
ಮಳೆಗಾಲ ಆರಂಭವಾದ ದಿನದಿಂದಲೂ ಈರುಳ್ಳಿ ಬೆಲೆ ಏರಿಕೆಯಾಗುತ್ತಲೇ ಇದೆ. ಮೇ-ಜೂನ್ನಲ್ಲಿ 30 ರೂ.ಯಿದ್ದ ಈರುಳ್ಳಿ ಬೆಲೆ 70 ರೂ.ವರೆಗೆ ದಾಟಿದೆ. ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ, ರಾಯಚೂರು ಭಾಗದಲ್ಲಿ ಬರ ಕಾಡುತ್ತಿರುವ ಹಿನ್ನೆಲೆ ದೀಪಾವಳಿ ವೇಳೆಗೆ ಈರುಳ್ಳಿ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತರಕಾರಿ ಮಾರಾಟಗಾರರು ಹೇಳಿದ್ದಾರೆ.
ಬೆಳೆ ಹಾನಿಯಿಂದಾಗಿ ಪಾಲಕ್, ಕೊತ್ತಂಬರಿ, ಪುದೀನ, ಸಬ್ಬಸಿಗೆ, ಸೋರೆಲ್ ಮತ್ತು ಇತರ ಸೊಪ್ಪುಗಳ ಬೆಲೆ ದುಪ್ಪಟ್ಟಾಗಿದೆ. 8-10 ರೂ. ಬೆಲೆಯ ಸೊಪ್ಪು ಈಗ 25-30 ರೂ.ಗೆ ಮಾರಾಟವಾಗುತ್ತಿದ್ದರೆ, ಪಾಲಕ್ ಸೊಪ್ಪು ಒಂದು ಗೊಂಚಲು 10 ರೂ.ನಿಂದ 25 ರೂ.ಗೆ ಏರಿದೆ.
ಬೆಂಗಳೂರಿನ ವಿಜಯನಗರ ನಿವಾಸಿಯಾದ ಅಕ್ಷತಾ ಅವರು ಮಾತನಾಡಿ, 'ತರಕಾರಿ ಕೊಂಡುಕೊಳ್ಳುವ ಬದಲಾಗಿ, ನಾನ್ವೆಜ್ ಮಾಡಿಬಿಡಬಹುದು. ಅದೇ ಹಣಕ್ಕೆ ಸಾಕಷ್ಟು ಚಿಕನ್, ಮಟನ್ ಮಾಂಸ ಕೊಂಡುಕೊಳ್ಳಬಹುದು. ತರಕಾರಿಯನ್ನು ಮುಟ್ಟೋಕೆ ಸಾಧ್ಯವಿಲ್ಲ ಅಷ್ಟು ಬೆಲೆ ಹೆಚ್ಚಾಗಿದೆ. ಹೀಗೆ ಮುಂದುವರೆದರೆ, ಹಬ್ಬಕ್ಕೆ ರಸಂ, ಅನ್ನ ಖಾಯಂ ಆಗ್ಬೋದು. ಈ ಬಾರಿ ಹಬ್ಬ ಬಲು ಬೋರಾಗಿರುತ್ತದೆ' ಎಂದು ಬೇಸರ ವ್ಯಕ್ತಪಡಿಸಿದರು.
ಮಲ್ಲೇಶ್ವರಂ ನಿವಾಸಿ ಕೀರ್ತನಾ ಮಾತನಾಡಿ, 'ನಾನು ಸಸ್ಯಹಾರಿ. ಜೊತೆಗೆ ನಿತ್ಯ ಜಿಮ್ ವರ್ಕ್ ಮಾಡಿದ ನಂತರ ತರಕಾರಿ ಬೇಯಿಸಿ ತಿನ್ನುವುದು ನನ್ನ ಹವ್ಯಾಸ. ತರಕಾರಿ ಇರಲಿ ಸೊಪ್ಪಿನ ಬೆಲೆಯೂ ಹೀಗೆ ಏರಿಕೆಯಾದರೆ ಏನನ್ನು ತಿನ್ನಬೇಕು ಯಾವ ತರಕಾರಿ ಬದಲಿಗೆ ಬೇರೆ ಯಾವ ಆಹಾರ ತಿನ್ನಬೇಕು ಅನ್ನೋದೆ ತಿಳಿಯೋದಿಲ್ಲ. ಈ ಬಗ್ಗೆ ಸರ್ಕಾರ ಏನಾದ್ರು ಕ್ರಮ ಕೈಗೊಳ್ಳಬೇಕು. ನಾವೇ ನಮ್ಮ ಬಾಲ್ಕನಿಯಲ್ಲಿ ಕೈದೋಟ ಮಾಡಿಕೊಳ್ಳುವುದು ಸರಿಯಾದ ಕ್ರಮ' ಎಂದು ಸಲಹೆ ಕೊಟ್ಟರು, (ಏಜೆನ್ಸೀಸ್).