cyber fraud 
ಬೆಂಗಳೂರು

ವಾರಣಾಸಿ ಮೂಲದ ಟೆಕ್ಕಿಗೆ ₹1.90 ಕೋಟಿ ಧೋಖಾ

ಬೆಂಗಳೂರು: ಹೂಡಿಕೆಯ ನೆಪದಲ್ಲಿ ವಾರಣಾಸಿ ಮೂಲದ ಟೆಕ್ಕಿಯೊಬ್ಬರಿಗೆ 1.90 ಕೋಟಿ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಲಾಭದ ಆಮೀಷಕ್ಕೆ 47 ವರ್ಷದ ಮಹೇಂದ್ರ (ಹೆಸರು ಬದಲಾಯಿಸಲಾಗಿದೆ) ಕೋಟ್ಯಂತರ ರೂ. ಕಳೆದುಕೊಂಡಿದ್ದಾರೆ. ಈ ಸಂಬಂಧ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಹಾಗೂ ಹಣದ ವರ್ಗಾವಣೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದೂರುದಾರರು, ಫೆಬ್ರವರಿಯಲ್ಲಿ ಫೇಸ್‌ಬುಕ್ ಬಳಕೆ ಮಾಡುತ್ತಿದ್ದ ವೇಳೆ ಆನ್‌ಲೈನ್ ಷೇರು ಮಾರುಕಟ್ಟೆಗೆ ಸಂಬಂಧಿಸಿದ ಜಾಹೀರಾತು ನೋಡಿದ್ದರು. ಜಾಹೀರಾತಿನಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ ಬಳಿಕ ಕೆಲವರು ಕರೆ ಮಾಡಿ ತಮ್ಮನ್ನು ಹೂಡಿಕೆ ಸಲಹೆಗಾರರು ಹಾಗೂ ಕಂಪನಿ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡಿದ್ದರು.

ಪ್ರಾಕ್ಸ್‌ಟ್ರೆಂಡ್ ಹೆಸರಿನ ವೇದಿಕೆಯಲ್ಲಿ ಷೇರು ಹಾಗೂ ಇತರೆ ಆನ್‌ಲೈನ್ ಷೇರು ನಡೆಸಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿದ್ದರು. ಅವರ ಮಾತನ್ನು ನಂಬಿದ ಟೆಕ್ಕಿ, ಆರೋಪಿಗಳು ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿ ಟ್ರೇಡಿಂಗ್ ಮಾಡುತ್ತಿದ್ದರು. ಪ್ರಾರಂಭದಲ್ಲಿ ಹೆಚ್ಚಿನ ಲಾಭ ನೀಡಿ ಸಂತ್ರಸ್ತರ ವಿಶ್ವಾಸ ಗಳಿಸಿದ್ದರು.

ಫೆ.27ರಿಂದ ಸೆ.9ರವರೆಗೆ ಆರೋಪಿಗಳ ಸೂಚನೆಯಂತೆ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ-ಹಂತವಾಗಿ ಒಟ್ಟು 1.90 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ನಂತರ ಹೂಡಿಕೆ ಮಾಡಿದ್ದ ಹಣ ಹಾಗೂ ಲಾಭ ಹಿಂಪಡೆಯಲು ಮುಂದಾದಾಗ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆಗ ತಾನು ಮೋಸಕ್ಕೆ ಹೋಗಿದ್ದೇನೆ ಎಂದು ಅರಿತು ಸೈಬರ್ ಕ್ರೈಮ್ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳ ಮಾಹಿತಿ ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳು ಬಳಸಿರುವ ಖಾತೆಗಳನ್ನು ಸ್ಥಗಿತಗೊಳಿಸುವ ಕ್ರಮ ಕೈಗೊಂಡಿದ್ದಾರೆ. ವಂಚಕರ ಪತ್ತೆ ಹಾಗೂ ಹಣದ ಜಾಡು ಹಿಡಿಯಲು ತನಿಖೆ ಮುಂದುವರಿದಿದೆ.