ಬಿಎಂಟಿಸಿ 
ಬೆಂಗಳೂರು

ಯುಪಿಐ ಟಿಕೆಟ್​ ಸೇವೆಯಲ್ಲಿ ತಾತ್ಕಾಲಿಕ ವ್ಯತ್ಯಯ| BMTC

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಬಿಎಂಟಿಸಿ ಸ್ಪಷ್ಟನೆ
  • ಪಾವತಿ ಗೇಟ್​ವೇ ಸಮಸ್ಯೆಯಿಂದ ಕೆಲವರಿಗೆ ಟಿಕೆಟ್​ ಸಿಗದೆ ಹಣ ಕಡಿತ
  • ಸಮಸ್ಯೆ ಪರಿಹಾರ, ಆತಂಕ ಬೇಡ ಎಂದ ಸಂಸ್ಥೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬೆಂಗಳೂರು ಮಹಾನಗರ ಸಾರಿಗೆ (ಬಿಎಂಟಿಸಿ)ಯ ಯುಪಿಐ ಕ್ಯೂಆರ್​ ಕೋಡ್​ ಆಧಾರಿತ ಟಿಕೆಟ್​ ವಿತರಣಾ ಸೇವೆಯಲ್ಲಿ ಜು.15ರ ಸಂಜೆ ಉಂಟಾದ ತಾತ್ಕಾಲಿಕ ತಾಂತ್ರಿಕ ಸಮಸ್ಯೆಯಿಂದ ಕೆಲ ಪ್ರಯಾಣಿಕರಿಗೆ ಹಣ ಕಡಿತವಾಗಿದ್ದರೂ ಟಿಕೆಟ್​ ಸಿಗದ ಘಟನೆಗಳು ನಡೆದಿವೆ. ಆದರೆ, ಸಮಸ್ಯೆಯನ್ನು ಅದೇರಾತ್ರಿ ಸಂಪೂರ್ಣವಾಗಿ ಪರಿಹರಿಸಲಾಗಿದ್ದು, ಪ್ರಸ್ತುತ ಎಲ್ಲ ಬಸ್​ಗಳಲ್ಲಿ ಯುಪಿಐ ಮೂಲಕ ಟಿಕೆಟ್​ ವಿತರಣೆ ಯಾವುದೇ ಅಡಚಣೆಯಿಲ್ಲದೆ ನಡೆಯುತ್ತಿದೆ ಎಂದು ಬಿಎಂಟಿಸಿ ಸ್ಪಷ್ಟಪಡಿಸಿದೆ.
ಪಾವತಿ ಗೇಟ್​ವೇ ಸರ್ವರ್​ನಲ್ಲಿ ಉಂಟಾದ ಭಾಗಶ@ ತಾಂತ್ರಿಕ ದೋಷದಿಂದಾಗಿ ಕೆಲ ಪ್ರಯಾಣಿಕರ ಬ್ಯಾಂಕ್​ ಖಾತೆಯಿಂದ ಪ್ರಯಾಣ ದರ ಯಶಸ್ವಿಯಾಗಿ ಕಡಿತವಾಗಿದ್ದರೂ, ಪಾವತಿ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಟಿಕೆಟ್​ ಮುದ್ರಣವಾಗದೆ ಉಳಿದಿದೆ. ಇದು ತಾತ್ಕಾಲಿಕ ತಾಂತ್ರಿಕ ವ್ಯತ್ಯಯವಾಗಿದ್ದು, ಸೇವೆಯನ್ನು ತಕ್ಷಣವೇ ಮರುಸ್ಥಾಪಿಸಲಾಗಿದೆ ಎಂದು ತಿಳಿಸಿದೆ.
ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ನಗದುರಹಿತ ಪ್ರಯಾಣ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಬಿಎಂಟಿಸಿ 2023ರಲ್ಲಿ ಯುಪಿಐ ಆಧಾರಿತ ಡಿಜಿಟಲ್​ ಪಾವತಿ ವ್ಯವಸ್ಥೆ ಪರಿಚಯಿಸಿತ್ತು. ಬಳಿಕ 2026ರ ಫೆಬ್ರವರಿಯಿಂದ ಸಂಸ್ಥೆಯ ಎಲ್ಲ 50 ಡಿಪೋಗಳಲ್ಲಿನ ಎಲೆಕ್ಟ್ರಾನಿಕ್​ ಟಿಕೆಟಿಂಗ್​ ಯಂತ್ರಗಳ (ಇಟಿಎಂ) ಮೂಲಕ ಡೈನಾಮಿಕ್​ ಯುಪಿಐ ಕ್ಯೂಆರ್​ ಕೋಡ್​ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಡಿಜಿಟಲ್​ ಟಿಕೆಟಿಂಗ್​ಗೆ ಮತ್ತಷ್ಟು ವೇಗ ಮತ್ತು ಪಾರದರ್ಶಕತೆ ದೊರೆತಿದೆ.
ಪ್ರಸ್ತುತ ಬಿಎಂಟಿಸಿಯ ದಿನನಿತ್ಯದ ಟಿಕೆಟ್​ ಆದಾಯದಲ್ಲಿ ಶೇ.53 ಪಾಲು ಯುಪಿಐ ಆಧಾರಿತ ಡಿಜಿಟಲ್​ ಪಾವತಿಗಳಿಂದಲೇ ಸಂಗ್ರಹವಾಗುತ್ತಿದೆ. ಇದರಿಂದ ಪ್ರಯಾಣಿಕರು ಡಿಜಿಟಲ್​ ಟಿಕೆಟ್​ ವ್ಯವಸ್ಥೆಯನ್ನು ವ್ಯಾಪಕವಾಗಿ ಅಳವಡಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ ಎಂದು ಸಂಸ್ಥೆ ತಿಳಿದೆ.
ಆತಂಕ ಬೇಡ!
ತಾಂತ್ರಿಕ ದೋಷದ ಅವಧಿಯಲ್ಲಿ ಬ್ಯಾಂಕ್​ ಖಾತೆಯಿಂದ ಹಣ ಕಡಿತವಾಗಿ ಟಿಕೆಟ್​ ಸಿಗದ ಪ್ರಯಾಣಿಕರು ಆತಂಕಪಡಬೇಕಿಲ್ಲ. ಬ್ಯಾಂಕಿಂಗ್​ ವ್ಯವಸ್ಥೆ ಹಾಗೂ ಪಾವತಿ ಗೇಟ್​ವೇ ಸೇವಾ ಪೂರೈಕೆದಾರರ ಸಾಮಾನ್ಯ ಸೆಟಲ್ಮೆಂಟ್​ ಪ್ರಕ್ರಿಯೆಯಂತೆ ಕಡಿತಗೊಂಡ ಮೊತ್ತವು ಸಂಬಂಧಿತ ಬ್ಯಾಂಕ್​ ಖಾತೆಗೆ ಸ್ವಯಂಚಾಲಿತವಾಗಿ ಮರುಜಮೆಯಾಗಲಿದೆ. ನಿಗದಿತ ಅವಧಿಯ ಬಳಿಕವೂ ಹಣ ಮರುಪಾವತಿಯಾಗದಿದ್ದರೆ ಮಾತ್ರ ಸಂಬಂಧಿತ ಬ್ಯಾಂಕ್​ ಅಥವಾ ಬಿಎಂಟಿಸಿ ಸಹಾಯವಾಣಿಯನ್ನು ಸಂಪರ್ಕಿಸುವಂತೆ ಬಿಎಂಟಿಸಿ ಮನವಿ ಮಾಡಿದೆ.