medical-waste-disposal 
ಬೆಂಗಳೂರು

ಅವೈಜ್ಞಾನಿಕವಾಗಿ ವೈದ್ಯಕೀಯ ತ್ಯಾಜ್ಯ ವಿಲೇವಾರಿ: ಕ್ಲಿನಿಕ್‌ಗೆ 50 ಸಾವಿರ ರೂ. ದಂಡ

ಪ್ರಮುಖ ಮುಖ್ಯಾಂಶಗಳು

  • ಕಸದಲ್ಲಿ ಪ್ರಿಸ್ಕ್ರಿಪ್ಷನ್ ಪತ್ರ ಪತ್ತೆಯಿಂದ ತಪ್ಪು ದೃಢ
  • ಗುರಪ್ಪನಪಾಳ್ಯ ಬಳಿಯಿರುವ ಖಾಸಗಿ ಕ್ಲಿನಿಕ್‌ ವಿರುದ್ಧ ಶಿಸ್ತುಕ್ರಮ
ಬೆಂಗಳೂರು: ಜಯನಗರ ಬಳಿಯ ಗುರಪ್ಪನಪಾಳ್ಯದಲ್ಲಿ ರಸ್ತೆ ಬದಿ ಅವೈಜ್ಞಾನಿಕವಾಗಿ ವೈದ್ಯಕೀಯ ತ್ಯಾಜ್ಯವನ್ನು ಸುರಿದಿದ್ದ ಕ್ಲಿನಿಕ್‌ವೊಂದಕ್ಕೆ ದಕ್ಷಿಣ ನಗರ ಪಾಲಿಕೆಯು 50 ಸಾವಿರ ರೂ. ಮೊತ್ತದ ಭಾರೀ ದಂಡ ವಿಧಿಸಿದೆ.
ಗುರಪ್ಪನಪಾಳ್ಯ ವಾರ್ಡ್‌ನಲ್ಲಿ ಐಬಿಎಂ ಕಚೇರಿ ಬಳಿ ಗುರುವಾರ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಸೂಜಿ, ಸಿರಿಂಜ್, ಪ್ಲಾಸ್ಟರ್, ಮಾತ್ರೆ ಡಬ್ಬಿ ಹಾಗೂ ಇನ್ನಿತರ ಅಪಾಯಕಾರಿ ವೈದ್ಯಕೀಯ ತ್ಯಾಜ್ಯವನ್ನು ಸುರಿದಿರುವುದು ಪೌರಕಾರ್ಮಿಕರು ಗಮನಿಸಿದ್ದಾರೆ. ತಕ್ಷಣವೇ ಮಾರ್ಷಲ್​​ಗಳಿಗೆ ಸುದ್ದಿ ಮುಟ್ಟಿಸಿ ಸ್ಥಳಪರಿಶೀಲನೆ ಮಾಡಿದಾಗ ವೈದ್ಯಕೀಯ ತ್ಯಾಜ್ಯದೊಂದಿಗೆ ಪಲ್ಸ್ ಪಾಲಿ ಕ್ಲಿನಿಕ್ ಹೆಸರಿನ ಪ್ರಿಸ್ಕ್ರಿಪ್ಷನ್ ಪತ್ರಗಳು ಕಂಡುಬಂದು ನಿಯಮ ಉಲ್ಲಂಸಿರುವುದು ದೃಢಪಡಿಸಿಕೊಳ್ಳಲಾಯಿತು.
ಬಿಎಸ್‌ಡಬ್ಲ್ಯುಎಂಎಲ್ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಶ್ವೇತ ಹಾಗೂ ಮಾರ್ಷಲ್‌ಗಳ ತಂಡವು ಕಾರ್ಯಾಚರಣೆ ನಡೆಸಿ ಕ್ಲಿನಿಕ್‌ಗೆ 50 ಸಾವಿರ ರೂ. ದಂಡ ವಿಧಿಸಿ ಅಷ್ಟೂ ಮೊತ್ತವನ್ನು ಸ್ಥಳದಲ್ಲೇ ವಸೂಲು ಮಾಡಲಾಯಿತು. ಇದೇ ವೇಳೆ ಇನ್ನು ಮುಂದೆ ಇಂತಹ ಕೃತ್ಯ ಮಾಡದಂತೆ ಎಚ್ಚರಿಕೆ ನೀಡಿ, ವೈಜ್ಞಾನಿಕವಾಗಿ ವೈದ್ಯಕೀಯ ತ್ಯಾಜ್ಯವನ್ನು ವಿಲೇವಾರಿ ಮಾಡುವಂತೆ ಕ್ಲಿನಿಕ್ ವ್ಯವಸ್ಥಾಪಕರಿಗೆ ತಾಕೀತು ಮಾಡಿದ್ದಾರೆ.