ಬೆಂಗಳೂರು: ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದ ಅಸಹಜ ಸಾವಿನ ಪ್ರಕರಣವೊಂದು ಇದೀಗ ಭೀಕರ ಹತ್ಯೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಶ್ರೀರಾಮ್ ಕೊಲೆಯಾದ ದುರ್ದೈವಿ. ಆಟೋ ಬಾಡಿಗೆ ವಿಚಾರವಾಗಿ ನಡೆದ ಸಣ್ಣ ಗಲಾಟೆ ಹತ್ಯೆಗೆ ಕಾರಣವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆಟೋ ಚಾಲಕ ಪೃಥ್ವಿರಾಜ್ ಎಂಬಾತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆಟೋ ಬಾಡಿಗೆ ವಿಚಾರಕ್ಕೆ ಕೆಲ ದಿನಗಳ ಹಿಂದೆ ನಡೆದಿದ್ದ ಗಲಾಟೆಯಲ್ಲಿ ಮೃತಪಟ್ಟಿದ್ದ ವ್ಯಕ್ತಿಯೋರ್ವನ ಸಾವಿನ ಕುರಿತು ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಹತ್ಯೆ ಮಾಡಲಾಗಿದೆ ಎಂಬುದು ದೃಢಪಟ್ಟಿದೆ.
ಮಾಗಡಿ ರಸ್ತೆಯ ಗೊಲ್ಲರಹಟ್ಟಿ ನಿವಾಸಿ ಪೃಥ್ವಿರಾಜ್ (31)ನನ್ನು ಅನ್ನಪೂಣೇರ್ಶರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅ.9ರಂದು ವಕೀಲ ಶ್ರೀರಾಮ್ ಮೃತಪಟ್ಟಿದ್ದರು. ಆಟೋ ಚಾಲಕನ ಜತೆ ನಡೆದ ಗಲಾಟೆಯಲ್ಲಿ ಹಲ್ಲೆಗೊಳಗಾಗಿದ್ದ ಶ್ರೀರಾಮ್ ನಾಗರಬಾವಿ ರಿಂಗ್ ರೋಡ್ ಬಳಿ ಏಕಾಏಕಿ ರಸ್ತೆ ಬದಿಯಲ್ಲಿ ಅಸ್ವಸ್ಥರಾಗಿ ಬಿದ್ದಿದ್ದರು. ಸಾರ್ವಜನಿಕರ ಮಾಹಿತಿ ಮೇರೆಗೆ ತಕ್ಷಣ ಸ್ಥಳಕ್ಕೆ ಆಗಮಿಸಿದ್ದ ಹೊಯ್ಸಳ ಗಸ್ತು ಸಿಬ್ಬಂದಿ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಶ್ರೀರಾಮ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆರಂಭದಲ್ಲಿ ಇದನ್ನು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಶ್ರೀರಾಮ್ ಅವರ ದೇಹದ ಮೇಲಿದ್ದ ಕೆಲವು ಗಾಯದ ಗುರುತುಗಳನ್ನು ಕಂಡು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು.
ತನಿಖೆ ಕೈಗೊಂಡಾಗ ಘಟನೆಗೂ ಮೊದಲು ಆಟೋ ಚಾಲಕನೊಬ್ಬನ ಜತೆ ಗಲಾಟೆ ನಡೆದಿರುವ ವಿಚಾರ ಬಯಲಿಗೆ ಬಂದಿತ್ತು. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ತಕ್ಷಣವೇ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತ ಹೆಪ್ಪುಗಟ್ಟಿದ್ದ ಕಾರಣದಿಂದಲೇ ಸಾವು ಸಂಭವಿಸಿದೆ ಎಂದು ತಿಳಿದು ಬಂದಿತ್ತು. ಸದ್ಯ ಆಟೋ ಚಾಲಕ ಪೃಥ್ವಿರಾಜ್ನನ್ನು ಬಂಧಿಸಿ ಹೆಚ್ಚುವರಿ ತನಿಖೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.