- ಯೋಜನೆಗೆ ಟೆಂಡರ್ ಆಹ್ವಾನ
- ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾಹಿತಿ
ಬೆಂಗಳೂರು: ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಸಂಸ್ಕರಿಸಿದ ನೀರನ್ನು ಪೂರೈಸಲು ಬೆಂಗಳೂರು ಜಲಮಂಡಳಿ ಟೆಂಡರ್ ಕರೆದಿದೆ.
ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಈ ಕುರಿತು ಮಾಹಿತಿ ನೀಡಿ, ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿರುವ ಪೀಣ್ಯಕ್ಕೆ ಅಡೆತಡೆಯಿಲ್ಲದೆ ಗುಣಮಟ್ಟದ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. "ಮನೆಗಳಿಗೆ ಕಾವೇರಿ, ಕೈಗಾರಿಕೆಗಳಿಗೆ ಅಲ್ಟ್ರಾ ಪ್ಯೂರ್ ಸಂಸ್ಕರಿಸಿದ ನೀರು' ಎಂಬ ಧ್ಯೇಯದೊಂದಿಗೆ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಡಿಮೆ ದರದಲ್ಲಿ ನೀರು ಪೂರೈಸುವುದು ನಮ್ಮ ಗುರಿ ಎಂದರು.
ನಾಗಸಂದ್ರ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಪಡೆಯಲಾಗುವ 4 ಎಂಎಲ್ಡಿ ನೀರನ್ನು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಸಂಸ್ಕರಿಸಲಾಗುತ್ತದೆ. ಅಲ್ಲದೇ ಈ ತ್ಯಾಜ್ಯ ನೀರನ್ನು ಅಲ್ಟ್ರಾ ಪ್ಯೂರ್ ವಾಟರ್ ಗುಣಮಟ್ಟಕ್ಕೆ ಶುದ್ಧೀಕರಿಸಿ ಈ ನೀರು ಸರಬರಾಜು ಮಾಡಲಾಗುವುದು. ಈ ಭಾಗದಲ್ಲಿರುವ ಲಕ್ಷಾಂತರ ಕಾರ್ಮಿಕರ ದಿನನಿತ್ಯದ ಬಳಕೆಗಾಗಿ (ಫ್ಲಶಿಂಗ್ ಮತ್ತು ಇತರೆ ಸ್ವಚ್ಛತಾ ಕಾರ್ಯಗಳಿಗೆ) ಬಳಸಲಾಗುತ್ತಿರುವ ಕುಡಿಯುವ ನೀರನ್ನು ಉಳಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಉತ್ಪಾದನಾ ಪ್ರಕ್ರಿಯೆಯನ್ನು ಹೊರತುಪಡಿಸಿ, ಇತರೆ ಉದ್ದೇಶಗಳಿಗೆ ಈ ಗುಣಮಟ್ಟದ ಸಂಸ್ಕರಿಸಿದ ನೀರನ್ನು ಬಳಸುವುದರಿಂದ, ಲಕ್ಷಾಂತರ ಲೀಟರ್ ಶುದ್ಧ ಕಾವೇರಿ ನೀರನ್ನು ಉಳಿಸಿ, ಅದನ್ನು ಬೆಂಗಳೂರಿನ ಮನೆಗಳಿಗೆ ಒದಗಿಸಲು ಸಾಧ್ಯವಾಗುತ್ತದೆ ಎಂದರು.
ಸಂಸ್ಕರಿಸಿದ ನೀರು ಕಲುಷಿತಗೊಳ್ಳದಂತೆ ಮತ್ತು ಅದರ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮಂಡಳಿಯು ಪ್ರತ್ಯೇಕ ಮೂಲಸೌಕರ್ಯವನ್ನು ನಿರ್ಮಿಸುತ್ತಿದೆ. ಟೆಂಡರ್ ಅನ್ವಯ ಈ ಕೆಳಗಿನ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.
* ಪ್ರತ್ಯೇಕ ವಿತರಣಾ ಜಾಲ: ಕೈಗಾರಿಕೆಗಳಿಗೆ ನೀರು ತಲುಪಿಸಲು 27 ಕಿ.ಮೀ. ಉದ್ದದ ಪ್ರತ್ಯೇಕ ಎಚ್ಡಿಪಿಇ ಕೊಳವೆಮಾರ್ಗ ಜಾಲ
* ಶೇಖರಣೆ ಮತ್ತು ಪಂಪಿಂಗ್: ಸಂಪ್ ಮತ್ತು ಪಂಪ್ಹೌಸ್ ನಿಮಾರ್ಣ, ಪಂಪಿಂಗ್ ಯಂತ್ರೋಪಕರಣಗಳು, ಡಿಐ ರೈಸಿಂಗ್ ಮೇನ್ ಮತ್ತು 5 ಲಕ್ಷ ಲೀಟರ್ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಾಗಾರ ನಿಮಾರ್ಣ