ಕಲಾ ದಿಗ್ಗಜಗಳಾದ ಬೇಗಂ ಪರ್ವೀನ್ ಸುಲ್ತಾನಾ, ರಂಜನಿ- ಗಾಯತ್ರಿ, ವಿಶ್ವಮೋಹನ ಭಟ್, ಪುರ್ಬಯನ್ ಚಟರ್ಜಿ ಅವರ ಕಲಾ ಪ್ರದರ್ಶನ
ಉಡುಪ ಪ್ರತಿಷ್ಠಾನದಿಂದ ಆಯೋಜನೆ
ಬೆಂಗಳೂರು: ಉಡುಪ ಪ್ರತಿಷ್ಠಾನದ ದಶಮಾನೋತ್ಸವ ಅಂಗವಾಗಿ ರಾಜಧಾನಿ ಬೆಂಗಳೂರಿನ ಸಂಗೀತ ಕಲಾ ರಸಿಕರಿಗೆ ‘ ಉಡುಪ ಸಂಗೀತೋತ್ಸವ’ ( ಮ್ಯೂಸಿಕಲ್ ಫೆಸ್ಟಿವಲ್ ) 3 ದಿನಗಳ ಕಾಲರಂಜಿಸಲಿದೆ. ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ಫೆ. 20, 21 ಮತ್ತು 22 ರಂದು ಸಂಜೆ 7ಕ್ಕೆ ಸಂಗೀತ ಸಮಾರಾಧನೆ ಆಯೋಜನೆಗೊಂಡಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿಖ್ಯಾತ ಕಲಾ ಸಾಧಕರು ಸಂಗೀತ ರಸ ಧಾರೆ ಹರಿಸಲಿದ್ದಾರೆ.
ಬೇಗಂ ಪರ್ವೀನ್ ಸುಲ್ತಾನಾ ಗಾನಸುಧೆ: ಫೆ. 20ರಂದು ಸಂಜೆ 7ಕ್ಕೆ ಖ್ಯಾತ ಹಿಂದೂಸ್ಥಾನಿ ಗಾಯಕಿ ಬೇಗಂ ಪರ್ವೀನ್ ಸುಲ್ತಾನಾ ಗಾನಸುಧೆ ರಂಜಿಸಲಿದೆ. ಪಂಡಿತ್ ಡಾ. ರವೀಂದ್ರ ಕಾಟೋಟಿ (ಹಾರ್ಮೋನಿಯಂ) ಮತ್ತು ಓಜಸ್ ಆದ್ಯ ( ತಬಲಾ) ಪಕ್ಕವಾದ್ಯ ಸಾಥ್ ನೀಡಲಿದ್ದಾರೆ. ನಂತರ ಪುರ್ಬಯನ್ ಚಟರ್ಜಿ ಅವರ ಸಿತಾರ್ ವಾದನವಿದೆ. ಓಜಸ್ ಆದ್ಯ ತಬಲಾ ಸಹಕಾರವಿದೆ.
ಫೆ. 21ರ ಸಂಜೆ 6ಕ್ಕೆ ತಾಳವಾದ್ಯ ಕಛೇರಿ ಕಳೆಗಟ್ಟಲಿದೆ. ಪದ್ಮಶ್ರೀ ಪುರಸ್ಕೃತ ವಿದ್ವಾನ್ ತಿರುವಾಯೂರು ಭಕ್ತವತ್ಸಲಂ ( ಮೃಗಂಗ) ನವೀನ್ ಶರ್ಮಾ (ಢೋಲಕ್) ಮತ್ತು ವಿಜಯ ಶ್ಯಾಮರಾವ್ ಚವ್ಹಾಣ್ ( ಡೋಲ್ಕಿ) ವಾದನದಲ್ಲಿ ಶ್ರೋತೃಗಳ ಮನಸೂರೆಗೊಳ್ಳಲಿದ್ದಾರೆ. ನಂತರ ಪದ್ಮಶ್ರೀ ಗೌರವಕ್ಕೆ ಭಾಜನರಾದ ವಿದುಷಿಯರಾದ ರಂಜನಿ ಮತ್ತು ಗಾಯತ್ರಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ವಿಜೃಂಭಿಸಲಿದೆ. ಪಕ್ಕವಾದ್ಯದಲ್ಲಿ ವಿದುಷಿ ಚಾರುಮತಿ ರಘುರಾಮನ್ ಪಿಟೀಲು, ವಿದ್ವಾನ್ ಸಾಯಿ ಗಿರಿಧರ ಮೃದಂಗ ಮತ್ತು ವಿದ್ವಾನ್ ವಾಝಪಲ್ಲಿ ಆರ್. ಕೃಷ್ಣಕುಮಾರ್ ಘಟಂ ಸಹಕಾರ ನೀಡಲಿರುವುದು ವಿಶೇಷವಾಗಿದೆ.
ಫೆ. 22ರ ಸಂಜೆ 7ಕ್ಕೆ ಪಂಡಿತ್ ವಿಶ್ವಮೋಹನ ಭಟ್ ಅವರ ಮೋಹನ ವೀಣಾವಾದನಕ್ಕೆ ವಿವಿಧ ವಾದ್ಯಗಳ ಲಹರಿಗಳು ಮೇಳೈಸಲಿವೆ. ವಿದ್ವಾಂಸರಾದ ಶಶಾಂಕ ಸುಬ್ರಹ್ಮಣ್ಯ ( ಕೊಳಲು), ವಿದ್ವಾನ್ ಹರೀಶ ಶಿವರಾಮ ಕೃಷ್ಣನ್ ( ಗಾಯನ), ದರ್ಶನ್ ದೋಷಿ ( ಡ್ರಮ್ಸ್),ಶೆಲ್ಡನ್ ಡಿಸಿಲ್ವಾ ( ಬಾಸ್ ಗಿಟಾರ್), ಮಂಜುನಾಥ ಸತ್ಯಶೀಲ್ (ಡ್ರಮ್ಸ್- ಪರ್ಕೂಶನ್ಸ್), ರಾಹುಲ್ ವಾಡ್ವಾಣಿ ( ಕೋ ಬೋರ್ಡ್ ಮತ್ತು ಹಿಮಾಂಶು ಮಹಾಂತ ಅವರು ತಬಲಾ ವಾದನ ಅನುರಣಿಸಲಿದೆ ಎಂದು ಪ್ರತಿಷ್ಠಾನದ ಟ್ರಸ್ಟಿ ವಿದ್ವಾನ್ ಗಿರಿಧರ ಉಡುಪ ತಿಳಿಸಿದ್ದಾರೆ.