iirf-rankings 
ಬೆಂಗಳೂರು

ಐಐಆರ್‌ಎಫ್​​ ಶ್ರೇಯಾಂಕದಲ್ಲಿ ‘ಯುಎಎಸ್-ಬಿ’ಗೆ 7ನೇ ಸ್ಥಾನ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಮಟ್ಟದಲ್ಲಿ ಮೊದಲ ಸ್ಥಾನ ಅಬಾಧಿತ
ಬೆಂಗಳೂರು: ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ವ್ಯವಸ್ಥೆಯಾದ ಇಂಡಿಯನ್ ಇನ್‌ಸ್ಟಿಟ್ಯೂಷನಲ್ ರಾಂಕಿಂಗ್ ಫ್ರೇಮ್‌ವರ್ಕ್ (ಐಐಆರ್‌ಎಫ್​​) 2026ರ ಪಟ್ಟಿಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು (ಯುಎಎಸ್-ಬಿ) ಕೃಷಿ ಮತ್ತು ತೋಟಗಾರಿಕೆ ವಿವಿಗಳ ಸಾಲಿನಲ್ಲಿ 7ನೇ ಸ್ಥಾನವನ್ನು ಪಡೆದುಕೊಂಡಿದೆ. ರಾಜ್ಯದ ಕೃಷಿ ವಿವಿಗಳಲ್ಲಿ ಯುಎಎಸ್-ಬಿ ಅಗ್ರಸ್ಥಾನವನ್ನು ಈ ವರ್ಷವೂ ತನ್ನದಾಗಿಸಿಕೊಂಡಿದೆ.
ಐಐಆರ್‌ಎಫ್​ ದೇಶದಾದ್ಯಂತ 5,000ಕ್ಕೂ ಅಧಿಕ ಸಂಖ್ಯೆಯ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮೌಲ್ಯಮಾಪನ ಮಾಡುವ, ರಾಷ್ಟ್ರೀಯ ಮಟ್ಟದ ಶ್ರೇಯಾಂಕ ನೀಡುವ ಸಂಸ್ಥೆಯಾಗಿದೆ. ವಿಶ್ವವಿದ್ಯಾಲಯ, ಮಹಾವಿದ್ಯಾಲಯ ಹಾಗೂ ನಿರ್ವಹಣಾ ಸಂಸ್ಥೆಗಳನ್ನು ವೈಜ್ಞಾನಿಕವಾಗಿ ಅವಲೋಕಿಸಿ ಸಂಶೋಧನಾ ಸಾಧನೆ, ಬೋಧಕ ಸಿಬ್ಬಂದಿಯ ಗುಣಮಟ್ಟ, ಉದ್ಯೋಗಾವಕಾಶ, ಉದ್ಯಮಗಳೊಂದಿಗೆ ಸಹಭಾಗಿತ್ವ, ನವೋದ್ಯಮ ಪ್ರೋತ್ಸಾಹ ಚಟುವಟಿಕೆ ಹಾಗೂ ಇತರ ಮಾನದಂಡ ಆಧರಿಸಿ ಈ ಮೌಲ್ಯಮಾಪನ ಮಾಡಲಾಗುತ್ತದೆ.
ಕಳೆದ ವರ್ಷ ವಿವಿಗೆ ದೊರೆತಿದ್ದ ನ್ಯಾಕ್ ಎ ಪ್ಲಸ್​​ ಶ್ರೇಯಾಂಕದ ಮುಂದುವರೆದ ಭಾಗವಾಗಿರುವ ಈ ಹಿರಿಮೆಯು ಬೆಂಗಳೂರು ಕೃಷಿ ವಿವಿಯ ಗುಣಮಟ್ಟದ ಶಿಕ್ಷಣ, ಉತ್ಕೃಷ್ಟ ಸಂಶೋಧನೆ, ಕೃಷಿ ತಂತ್ರಜ್ಞಾನಗಳ ಅಭಿವೃದ್ಧಿ, ರೈತಪರ ವಿಸ್ತರಣಾ ಸೇವೆ ಹಾಗೂ ಸಮಾಜಮುಖಿ ಕಾರ್ಯಯೋಜನೆಗಳಿಗೆ ದೊರೆತಿರುವ ರಾಷ್ಟ್ರೀಯ ಮಟ್ಟದ ಮಾನ್ಯತೆಯಾಗಿದೆ ಎಂದು ವಿವಿಯ ಕುಲಪತಿಯವರು ತಿಳಿಸಿದ್ದಾರೆ.
"

ವಿಶ್ವವಿದ್ಯಾನಿಲಯದ ವಿಜ್ಞಾನಿಗಳು, ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಮರ್ಪಿತ ಸೇವೆಯ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡುವ ಸಂಕಲ್ಪದೊಂದಿಗೆ ವಿವಿಯ ಕೃಷಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣಾ ಕ್ಷೇತ್ರಗಳಲ್ಲಿ ಸೇವೆಯನ್ನು ಮುಂದುವರಿಸಲಾಗುವುದು.

- ಡಾ. ಎಸ್.ವಿ. ಸುರೇಶ್, ಕುಲಪತಿ, ಬೆಂಗಳೂರು ಕೃಷಿ ವಿವಿ