- ಕಸ ಎಸೆಯುವವರ ವಿರುದ್ಧ ದಂಡಾಸ್ತ್ರಕ್ಕೂ ಚಿಂತನೆ
- ಪ್ರತಿ ಪಾಲಿಕೆಗೊಬ್ಬ ರೈಲ್ವೆ ಅಧಿಕಾರಿಯ ಸಮನ್ವಯ
- ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿಕೆ
ಬೆಂಗಳೂರು: ರಾಜಧಾನಿ ವ್ಯಾಪ್ತಿಯ ರೈಲ್ವೆ ಜಾಗದಲ್ಲಿ ಬಿದ್ದಿರುವ ಎಲ್ಲ ಬಗೆಯ ತ್ಯಾಜ್ಯವನ್ನು ಎರಡು ತಿಂಗಳೊಳಗೆ ಸಂಪೂರ್ಣವಾಗಿ ವಿಲೇವಾರಿ ಮಾಡಿ ಸ್ವಚ್ಛ ಪರಿಸರ ಮೂಡಿಸಲಾಗವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.
ಜಿಬಿಎ ವ್ಯಾಪ್ತಿಯಲ್ಲಿ ಹಾಗೂ ರೈಲ್ವೆ ಜಾಗದಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನ’ದ ಭಾಗವಾಗಿ ಬೃಹತ್ ತ್ಯಾಜ್ಯ ಸ್ವಚ್ಛತಾ ಕಾರ್ಯಕ್ಕೆ ಸಂಬಂಧಿಸಿ ರೈಲ್ವೆ, ಪಂಚ ಪಾಲಿಕೆಗಳು ಹಾಗೂ ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಗರದ ರೈಲ್ವೆ ಹಳಿಗಳು ಸೇರಿ ವಿವಿಧ ಭಾಗಗಳಲ್ಲಿ ಕಸ ತುಂಬಿಕೊಂಡಿವೆ. ಕೆಲವೆಡೆ ಸಾರ್ವಜನಿಕರು ಹಳಿ ಬದಿಯೇ ತ್ಯಾಜ್ಯ ಎಸೆದು ಹೋಗುತ್ತಾರೆ. ಜತೆಗೆ ಇಲಾಖೆಗೆ ಸೇರಿದ ವಿವಿಧ ಸ್ಥಳಗಳಲ್ಲಿ ಕಸ ರಾಶಿ ಇದ್ದು, ಅವುಗಳನ್ನು ಹೊರಹಾಕಲಾಗುವುದು. ಪಾಲಿಕೆಗಳ ಸಕಾರದಲ್ಲಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಿದ್ದು, ಜಿಬಿಎ ಕೈಗೊಳ್ಳುವ ಅಭಿಯಾನವನ್ನು ರೈಲ್ವೆ ಬೆಂಬಲಿಸಲಿದೆ ಎಂದರು.
ದಂಡ ವಿಧಿಸಲು ಚಿಂತನೆ:
ಮುಂದಿನ 2-3 ತಿಂಗಳ ಬಳಿಕ ರೈಲ್ವೆಯ ಎಲ್ಲ ಪ್ರದೇಶಗಳಲ್ಲೂ ಸ್ವಚ್ಛಗೊಳಿಸಲಾಗುವುದು. ಆ ಬಳಿಕ ರೈಲ್ವೆ ಹಳಿ ಸೇರಿ ಇಲಾಖೆಯ ಇನ್ನಿತರ ಜಾಗಗಳಲ್ಲಿ ಕಸ ಹಾಕಿದರೆ ಅಂತಹವರ ವಿರುದ್ಧ ದಂಡಾಸ್ತ್ರ ಪ್ರಯೋಗಿಸಲಾಗುವುದು. ಇದನ್ನು ಜಿಬಿಎಯೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ದಂಡದ ಹಣ ನಿಗದಿ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಮಹಾನಗರದಲ್ಲಿ ಸರ್ಕಾರದ ವಿವಿಧ ಸಂಸ್ಥೆಗಳೊಂದಿಗೆ ಹಿಂದಿನಿಂದಲೂ ಸಮರ್ಪಕವಾದ ಸಮನ್ವಯ ಇಲ್ಲ. ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿದ್ದರೂ, ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ. ಈ ಬಾರಿ ಜಿಬಿಎ ಸಚಿವರೊಂದಿಗೆ ಸಮನ್ವಯದಿಂದಲೇ ಎಲ್ಲ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಸಹಮತ ವ್ಯಕ್ತಪಡಿಸಲಾಗಿದೆ. ಹಾಗಾಗಿ ಐದೂ ಪಾಲಿಕೆಗಳೊಂದಿಗೆ ನಿರಂತರವಾಗಿ ಸಮನ್ವಯ ಸಾಧಿಸಲು ಇಲಾಖೆಯ ತಲಾ ಒಬ್ಬ ಅಧಿಕಾರಿಯನ್ನು ನಿಯೋಜಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕೆಳಸೇತುವೆ ಕಾಮಗಾರಿ 3 ತಿಂಗಳಲ್ಲಿ ಪೂರ್ಣ:
ಓಕಳಿಪುರ ಕಾರಿಡಾರ್‌ನಲ್ಲಿ ಒಂದು ಕೆಳಸೇತುವೆಯ ಕಾಮಗಾರಿ ಬಾಕಿ ಇದ್ದು, ಮುಂದಿನ 2-3 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಇದಕ್ಕಾಗಿ ಪಾಲಿಕೆಯೊಂದಿಗೆ ಸಮನ್ವಯ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಿನ್ನಿಮಿಲ್‌ಗೆ ಸೇರಿದ ಜಾಗವನ್ನು ರೈಲ್ವೆಗೆ ಹಸ್ತಾಂತರಿಸುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.
ಸಭೆಯಲ್ಲಿ ಡಿಆರ್‌ಎಂ ಅಶುತೋಷ್‌ಕುಮಾರ್ ಸಿಂಗ್, ಕೆ-ರೈಡ್ ಎಂಡಿ ಲಕ್ಷ್ಮಣ್ ಸಿಂಗ್, ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್, ಜಲಮಂಡಳಿ ಅಧ್ಯಕ್ಷೆ ಎನ್.ಮಂಜುಳಾ, ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್, ಪಿ.ಸುನೀಲ್ ಕುಮಾರ್, ಜಿ.ಜಗದೀಶ್, ಡಾ. ಕೆ.ವಿ. ರಾಜೇಂದ್ರ, ಬಿಎಸ್‌ಡಬ್ಲುೃಎಂಎಲ್ ಸಿಇಒ ಕರಿಗೌಡ, ಬಿ-ಸ್ಮೈಲ್ ಪ್ರಧಾನ ಅಭಿಯಂತರ ಪ್ರಹ್ಲಾದ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.
"
ಆ.1ರಿಂದ ಜಿಬಿಎ ವ್ಯಾಪ್ತಿಯಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನ’ ಕೈಗೆತ್ತಿಕೊಳ್ಳಲಾಗುತ್ತಿದೆ. ಇದರ ಭಾಗವಾಗಿ ರೈಲ್ವೆ ಇಲಾಖೆಯನ್ನು ಸಹಭಾಗಿತ್ವಗೊಳಿಸಲು ರೈಲ್ವೆ ಮಂತ್ರಿಯೊಂದಿಗೆ ಸಭೆ ನಡೆಸಿ ಸಹಮತ ಗಳಿಸಲಾಗಿದೆ. ಪಾಲಿಕೆಗಳೊಂದಿಗೆ ಸಮನ್ವಯ ಸಾಧಿಸಲು ರೈಲ್ವೆ ನೋಡಲ್ ಅಧಿಕಾರಿಗಳನ್ನು ನೇಮಿಸುವ ಭರವಸೆ ಸಿಕ್ಕಿದೆ.
- ಕೃಷ್ಣಬೈರೇಗೌಡ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ