accused 
ಬೆಂಗಳೂರು

ದೇವಸ್ಥಾನ ಕಳ್ಳತನ ಮಾಡಿದ್ದ ಇಬ್ಬರ ಬಂಧನ

ಆರೋಪಿಗಳ ಸೆರೆಯಿಂದ 6 ಪ್ರಕರಣಗಳು ಬೆಳಕಿಗೆ, ತಲಘಟ್ಟಪುರ ಪೊಲೀಸರಿಂದ ಕಾರ್ಯಾಚರಣೆ

ಬೆಂಗಳೂರು: ದೇವಸ್ಥಾನಗಳನ್ನೇ ಗುರಿಯಾಗಿಸಿ ವಿಗ್ರಹ, ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆವಲಹಳ್ಳಿ ಸ್ಲಂ ನಿವಾಸಿ ದಸ್ತಗೀರ್ (24), ಅರ್ಬಾಜ್ (25) ಬಂಧಿತರು. ಇವರಿಂದ ಒಟ್ಟು 8.10 ಲಕ್ಷ ರೂ. ಮೌಲ್ಯದ 4 ದೇವರ ವಿಗ್ರಹಗಳು, ಚಿನ್ನದ ತಾಳಿ, ದೇವರ ಬೆಳ್ಳಿ ಮತ್ತು ಹಿತ್ತಾಳೆ ವಸ್ತುಗಳು ಸೇರಿ ಕೃತ್ಯಕ್ಕೆ ಬಳಸಿದ್ದ 3 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಆರೋಪಿಗಳಿಬ್ಬರು ಸೆ.19ರಂದು ರಾತ್ರಿ ಗಟ್ಟಿಗೆರೆಪಾಳ್ಯದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಬಾಗಿಲು ಒಡೆದು ಬೆಳ್ಳಿ ಮತ್ತು ಹಿತ್ತಾಳೆ ವಸ್ತುಗಳು ಮತ್ತು ಸ್ಟೀಲ್ ಹುಂಡಿ ಕಳ್ಳತನ ಮಾಡಿದ್ದರು. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು, ಒಬ್ಬ ಆರೋಪಿಯನ್ನು ಮಡಿವಾಳ ಬಸ್ ನಿಲ್ದಾಣದ ಬಳಿ, ಮತ್ತೊಬ್ಬನನ್ನು ಬನ್ನೇರುಘಟ್ಟ ರಸ್ತೆಯ ಮಸೀದಿ ಬಳಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದಾಗ ಒಟ್ಟು 6 ಕಳ್ಳತನ ಪ್ರಕರಣ ಬೆಳಕಿಗೆ ಬಂದಿವೆ. ಈ ಪೈಕಿ 5 ಪ್ರಕರಣಗಳು ದೇವಸ್ಥಾನ ಕಳ್ಳತನದ್ದೇ ಆಗಿದ್ದು, ಮೊತ್ತೊಂದು ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಆಗಿದೆ.

ತಲಘಟ್ಟಪುರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಆರ್.ಎಸ್ ಚೌದರಿ ಹಾಗೂ ಅಧಿಕಾರಿಗಳ ತಂಡವು ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿದ್ದು, 10 ದಿನಗಳ ವಿಚಾರಣೆ ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.