- ಅಂತರ ಜಿಲ್ಲಾ ಕಾರಿಡಾರ್ ಯೋಜನೆಗೆ ಸಿದ್ಧತೆ
- ವೆಚ್ಚ ಹಾಗೂ ವಿಸ್ತರಣೆಯಲ್ಲಿ ವ್ಯತ್ಯಯ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಅಂತರ ಜಿಲ್ಲಾ ಕಾರಿಡಾರ್ ಬೆಂಗಳೂರು-&ತುಮಕೂರು ಮೆಟ್ರೋ ಯೋಜನೆಯ ವಿಸತ ಯೋಜನಾ ವರದಿ (ಡಿಪಿಆರ್) ಈಗಾಗಲೇ ಸಿದ್ಧವಾಗಿದೆ. ಒಟ್ಟು 59.60 ಕಿ.ಮೀ ಉದ್ದ, 26 ನಿಲ್ದಾಣಗಳು ಸುಮಾರು 20,649 ಕೋಟಿ ರೂ.ಅಂದಾಜು ವೆಚ್ಚದಲ್ಲಿ ನಿಮಾರ್ಣವಾಗಲಿದ್ದು, ಕ್ಷೇತ್ರಮಟ್ಟದ ಅಧ್ಯಯನಗಳು ಪ್ರಗತಿಯಲ್ಲಿವೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ತುಮಕೂರು ಮೆಟ್ರೋ ನಿಮಾರ್ಣಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅಲ್ಲದೆ, ಯೋಜನೆಯ ವೆಚ್ಚ ಹಾಗೂ ವಿಸ್ತರಣೆ ಹೆಚ್ಚಿದೆ ಎಂದು ಎನ್ನಲಾಗುತ್ತಿದೆ.
ಬಿಎಂಆರ್ಸಿಎಲ್ ಇತ್ತೀಚೆಗೆ 1.2 ಕೋಟಿ ರೂ. ವೆಚ್ಚದಲ್ಲಿ 59.60 ಕಿ.ಮೀ.ಉದ್ದದ ಮೆಟ್ರೋ ಮಾರ್ಗಕ್ಕಾಗಿ ಡಿಪಿಆರ್ ಸಿದ್ಧಪಡಿಸಿತ್ತು. ಇದರ ಟೆಂಡರ್ಗಳನ್ನು 2025ರ ನವೆಂಬರ್ನಲ್ಲಿ ಕರೆಯಲಾಯಿತು. ಇದೀಗ ಈ ಅಂತರ ಜಿಲ್ಲಾ ಕಾರಿಡಾರ್ಗಾಗಿ ಅಧಿಕಾರಿಗಳು ಹಾಗೂ ತಜ್ಞರು ಕ್ಷೇತ್ರಮಟ್ಟದ ಅಧ್ಯಯನವನ್ನು ಪ್ರಾರಂಭಿಸಿದ್ದಾರೆ.
ನಮ್ಮ ಮೆಟ್ರೋದ 4ನೇ ಹಂತದ ವಿಸ್ತರಣೆಯ ಭಾಗವಾಗಿರುವ ಈ ಯೋಜನೆಯು 20,649 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ ಎಂದು ಬಿಎಂಆರ್ಸಿಎಲ್ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಪ್ರಗತಿಯಲ್ಲಿ ಇರುವ ಕಾಮಗಾರಿಯ ಬಗ್ಗೆ ಸಮೀಕ್ಷೆಗಳು ನಡೆಯುತ್ತಿದೆ. ಇದರಲ್ಲಿ ಸಂಚಾರ ಮತ್ತು ಪ್ರಯಾಣದ ಮಾದರಿಗಳ ಕುರಿತು ದತ್ತಾಂಶ ಸಂಗ್ರಹಣೆ, ಪ್ರಾಥಮಿಕ ಜೋಡಣೆ ಪರಿಶೀಲನೆಗಳು, ವಿವಿಧ ಮೌಲ್ಯಮಾಪನಗಳು ಮತ್ತು ಆರಂಭಿಕ ಭೂತಾಂತ್ರಿಕ ತನಿಖೆಗಳನ್ನು ಒಳಗೊಂಡಿದೆ. ಜತೆಗೆ ಮುಂದಿನ ದಿನಗಳಲ್ಲಿ ಇದರ ವಿಸ್ತರಣೆ ಬಗ್ಗೆಯೂ ಚರ್ಚೆಗಳು ಆಗಿದೆ ಎಂದು ಹೇಳಿದ್ದಾರೆ.
ತುಮಕೂರು ಬೆಂಗಳೂರಿನ ಕೈಗಾರಿಕಾ ಉಪನಗರವಾಗಿ ರೂಪುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮೆಟ್ರೋ ಸಂಪರ್ಕಕ್ಕೆ ಬೇಡಿಕೆ ಹೆಚ್ಚಾಗಿದೆ. ಕೈಗಾರಿಕಾ ಸಂಘಟನೆಗಳು, ರಾಜಕೀಯ ನಾಯಕರು ಹಾಗೂ ಸರ್ಕಾರಿ ಅಧಿಕಾರಿಗಳು, ಮೆಟ್ರೋ ವಿಸ್ತರಣೆ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದರ ಜತೆಗೆ ಪ್ರಯಾಣಿಕರ ಸಂಚಾರವನ್ನು ಗಮನಾರ್ಹವಾಗಿ ಸುಲಭಗೊಳಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ನಮ್ಮ ಮೆಟ್ರೋ ಹಸಿರು ಮಾರ್ಗವು ಮಾದವರದಿಂದ ರೇಷ್ಮೆ ಸಂಸ್ಥೆ ವರೆಗೆ 33.4 ಕಿಮೀ ವ್ಯಾಪ್ತಿಯಲ್ಲಿ 31 ನಿಲ್ದಾಣಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತಾವಿತ ವಿಸ್ತರಣೆಯು ಮಾದಾವರದಿಂದ ಆರಂಭವಾಗಿ ಮಾಕಳಿ, ದಾಸನಪುರ, ನೆಲಮಂಗಲ, ನೆಲಮಂಗಲ ವೀವರ್ಸ್ ಕಾಲನಿ, ನೆಲಮಂಗಲ ಬಸ್ ನಿಲ್ದಾಣ, ನೆಲಮಂಗಲ ವಿಶ್ವೇಶ್ವರಪುರ, ನೆಲಮಂಗಲ ಟೋಲ್ಗೇಟ್, ಬೂದಿಹಾಳ್, ತಿಪ್ಪಗೊಂಡನಹಳ್ಳಿ, ಟಿ. ಬೇಗೂರು, ಕುಲವನಹಳ್ಳಿ, ಬಿಲ್ಲನ್ಕೋಟೆ, ಸೋಂಪುರ ಕೈಗಾರಿಕಾ ಪ್ರದೇಶ, ದಾಬಸ್ಪೇಟೆ, ಚಿಕ್ಕಹಳ್ಳಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಪಂಡಿತನಹಳ್ಳಿ, ಕ್ಯಾತ್ಸಂದ್ರ ಬೈಪಾಸ್, ಕ್ಯಾತ್ಸಂದ್ರ, ಎಸ್ಐಟಿ ಕಾಲೇಜು, ತುಮಕೂರು ವಿವಿ, ಸಿದ್ದಗಂಗಾ ವೈದ್ಯಕಿಯ ಕಾಲೇಜು, ತುಮಕೂರು ಬಸ್ ನಿಲ್ದಾಣ, ಟುಡಾ ಲೇಔಟ್ ಮತ್ತು ಶಿರಾ ಗೇಟ್ನಲ್ಲಿ ಅಂತ್ಯವಾಗಲಿದೆ. ಎಲ್ಲೆಡೆ ಎತ್ತರಿಸಿದ ಮಾರ್ಗದಲ್ಲೀ ನಿಲ್ದಾಣ ಇರಲಿದೆ. ಮೊದಲ ಹಂತ ನೆಲಮಂಗಲದವರೆಗೂ ಮೆಟ್ರೋ ಮಾರ್ಗ ವಿಸ್ತರಣೆಯಾಗಲಿದೆ ಎನ್ನಲಾಗಿದ್ದು, ಬಳಿಕ ಹಂತ ಹಂತವಾಗಿ ತುಮಕೂರುವರೆಗೂ ವಿಸ್ತರಣೆಯಾಗಲಿದೆ.
ಮೆಟ್ರೋ ವ್ಯವಸ್ಥೆ ಸಾಮಾನ್ಯವಾಗಿ ನಗರದೊಳಗಿನ ಸಂಚಾರಕ್ಕೆಂದು ರೂಪಿಸಲಾಗುತ್ತದೆ. ಉಪನಗರ ಮಾರ್ಗಗಳಿಗೆ ಅಲ್ಲ ಎಂಬ ಅಸಮಾಧಾನವನ್ನು ಕೆಲ ಸಾರಿಗೆ ತಜ್ಞರು ವ್ಯಕ್ತಪಡಿಸಿದ್ದಾರೆ.