ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ಗಲಾಟೆ, ಜಿಮ್ ಟ್ರೈನರ್ ನಂದನ್ ಸಾವು
ಶಿಷ್ಯ ಎಂದು ಕರೆದಿದ್ದಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ
ನಂದನ್ ತಾಯಿಯಿಂದ ನಾಲ್ವರ ವಿರುದ್ಧ ದೂರು ದಾಖಲು
ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳವೊಂದು ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ಸಹಕಾರ್ ನಗರದಲ್ಲಿನ ಅಪಾರ್ಟ್ಮೆಂಟ್ವೊಂದರಲ್ಲಿ ಬೆಳಕಿಗೆ ಬಂದಿದೆ.
ಜಿಮ್ ತರಬೇತುದಾರ ನಂದನ್(25) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಅ.3ರಂದು ಶನಿವಾರ ರಾತ್ರಿ ಜಿಮ್ ವಾರ್ಷಿಕೋತ್ಸವದ ಪಾರ್ಟಿಯಲ್ಲಿ ಸ್ನೇಹಿತರ ಮಧ್ಯೆ ಜಗಳ ನಡೆದಿತ್ತು. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಪೊಲೀಸರು ವಿಚಾರಣೆ ನಡೆಸಿದ ಆಧಾರದ ಮೇಲೆ, ಸಹಕಾರ ನಗರದಲ್ಲಿರುವ ಮ್ಯಾಸಿವ್ ಜಿಮ್ನಲ್ಲಿ ಅನುಶ್ ಎಂಬಾತನಿಗೆ ಜಿಮ್ ಟ್ರೈನರ್ ಆಗಿ ನಂದನ್ ಕೆಲಸ ಮಾಡುತ್ತಿದ್ದ. ಶನಿವಾರ ಜಿಮ್ನ ವಾರ್ಷಿಕೋತ್ಸವ ಆಚರಣೆ ಇತ್ತು. ಕಾರ್ಯಕ್ರಮದ ನಂತರ ಸಹಕಾರ್ ನಗರದ ಅಪಾರ್ಟ್ಮೆಂಟ್ನಲ್ಲಿರುವ 16ನೇ ಮಹಡಿಯಲ್ಲಿನ ಅನುಶ್ ಫ್ಲಾಟ್ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು.
ಹೀಗಾಗಿ ನಂದನ್ ಮನೆಗೆ ರಾತ್ರಿ ಬರೋದು ತಡವಾದರೆ ಮುಂಜಾನೆ ಬರುತ್ತೇನೆ ಎಂದು ಮಾಹಿತಿ ಕೊಟ್ಟಿದ್ದ. ಕಾರ್ಯಕ್ರಮ ಮುಗಿಸಿ ನಂದನ್, ವಿಶ್ವ, ಶರತ್ ಮತ್ತು ನಿಶಾಂತ್ ಸೇರಿ ಅನುಶ್ ವಾಸವಿದ್ದ ಅಪಾರ್ಟ್ಮೆಂಟ್ಗೆ ತೆರಳಿದರು. ಇಲ್ಲಿ ಶಿಷ್ಯ ಎಂದು ಕರೆದ ವಿಚಾರಕ್ಕೆ ನಂದನ್ ಮತ್ತು ವಿಶ್ವನಾಥ್ ಎಂಬುವವರ ನಡುವೆ ಗಲಾಟೆ ಜೋರಾಗಿತ್ತು.
ನಂದನ್ನನ್ನು ಶಿಷ್ಯ ಎಂದು ವಿಶ್ವನಾಥ್ ಕರೆದ. ಹೀಗೆಲ್ಲ ಕರಿಯಬೇಡ ಎಂದು ತಗಾದೆ ತೆಗೆದ. ಮಾತಿನ ಚಕಮಕಿ ದೈಹಿಕ ಮಾರಾಮಾರಿಗೆ ಕಾರಣವಾಯಿತು. ಫ್ಲಾಟ್‌ನ ಸ್ನಾನಗೃಹದಲ್ಲಿ ಈ ಜಗಳ ನಡೆದಿದ್ದು, ಅಲ್ಲಿ ಚೂಪಾದ ಗಾಜಿನ ವಸ್ತುವೊಂದು ಹೊಡೆದ ಪರಿಣಾಮ ನಂದನ್ ತಲೆಗೆ ಗಂಭೀರ ಗಾಯವಾಗಿ ರಕ್ತಸ್ರಾವವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಫುಟ್ಪಾತ್ ಅವ್ಯವಸ್ಥೆ ಬಗ್ಗೆ ಕೆನಡಾ ಪ್ರಜೆ ಮಾಡಿದ್ದ ವಿಡಿಯೋ ವೈರಲ್; ಇಂದಿರಾ ನಗರದಲ್ಲಿ ದುರಸ್ತಿ ಆರಂಭಿಸಿದ GBA
ಈ ಕೇಸ್ ಬಗ್ಗೆ ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಜಿಕೆ ,ಮಿಥುನ್ ಮಾತನಾಡಿದ್ದು, ಆರೋಪಿಗಳು ಮತ್ತು ನಂದನ್ ಒಂದೇ ಜಿಮ್ನಲ್ಲಿ ಕೆಲಸ ಮಾಡುತ್ತಿದ್ದರು. ವೈಯಕ್ತಿಕ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಗಿ, ವಿಕೋಪಕ್ಕ ತಿರುಗಿದೆ. ನಂದನ್ ಗಾಯಗೊಂಡ ನಂತರ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆದಿಲ್ಲ. ಆಸ್ಪತ್ರೆಗೆ ದಾಖಲಿಸಿದ್ದರೆ ಅವರು ಬದುಕುಳಿಯುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ನಂದನ್ ಅವರ ತಾಯಿ ನೀಡಿದ ದೂರಿನ ಮೇರೆಗೆ ನಾಲ್ವರನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದ್ದೇವೆ ಎಂದು ಹೇಳಿದರು.
ಈ ಬಗ್ಗೆ ನಂದನ್ ತಾಯಿ ಮಾತನಾಡಿದ್ದು, 'ನನ್ನ ಮಗನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಆತನ ದೇಹದ ಮೇಲೆ ಕಚ್ಚಿರುವ ಹಲ್ಲಿನ ಮಾರ್ಕ್, ತಲೆ ಮೇಲೆ ಗಾಯವಾಗಿದೆ. ಮನೆಗೆ ಆತನೇ ಆಧಾರ. ಕಷ್ಟಪಟ್ಟಿದ್ದು ಸಾಕು ಇನ್ನು ನಾನು ಕೆಲಸ ಮಾಡ್ತೀನಿ ಅಂತ ಜಿಮ್ಗೆ ಹೋಗ್ತಿದ್ದ. ಈಗ ಅವನೇ ಇಲ್ಲ ಎಂದು ಗೋಳಾಡಿದರು.
ಅವನಿಗೆ ಯಾವುದೇ ಕೆಟ್ಟ ಅಭ್ಯಾಸಗಳಿರಲಿಲ್ಲ. ಅವನು ಶರ್ಟ್ ಖರೀದಿಸಿದರು ನನ್ನ ಬಳಿ ಹೇಳುತ್ತಿದ್ದ. ಅವನು ಮಾಡುವ ಎಲ್ಲದರ ಬಗ್ಗೆ ನಮಗೆ ಮಾಹಿತಿ ನೀಡುತ್ತಿದ್ದನು. ಎಂದು ನಂದನ್ ಅವರ ಸಂಬಂಧಿ ಹೇಳಿದರು, (ಏಜೆನ್ಸೀಸ್).