city-corporation-budget 
ಬೆಂಗಳೂರು

ನಾಳೆ ಪೂರ್ವ, ಕೇಂದ್ರ ಪಾಲಿಕೆಗಳ ಬಜೆಟ್ ಮಂಡನೆ

ಪ್ರಮುಖ ಮುಖ್ಯಾಂಶಗಳು

  • ಕುತೂಹಲ ಕೆರಳಿಸಿರುವ ಕಾರ್ಪೋರೇಷನ್ ಆಯವ್ಯಯ
  • ಮೂಲಸೌಕರ್ಯ ಯೋಜನೆಗಳಿಗೆ ಮಣೆ ಹಾಕುವ ನಿರೀಕ್ಷೆ
ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಪಂಚ ಪಾಲಿಕೆಗಳ ಚೊಚ್ಚಲ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ಶುಕ್ರವಾರ (ಮಾ.27) ಪೂರ್ವ ಪಾಲಿಕೆ ಹಾಗೂ ಕೇಂದ್ರ ಪಾಲಿಕೆಗಳ 2026-27ನೇ ಸಾಲಿನ ಆಯವ್ಯಯ ಆಯಾ ಕಾರ್ಪೋರೇಷನ್‌ಗಳ ವ್ಯಾಪ್ತಿಯಲ್ಲೇ ಪ್ರಸ್ತುತಿಯಾಗಲಿದೆ.
ಈ ಮೊದಲು ಪಾಲಿಕೆಗಳ ಲೆಕ್ಕಪತ್ರ ವಿಭಾಗದ ಮುಖ್ಯಸ್ಥರು ಬಜೆಟ್ ಮಂಡಿಸಲಿದ್ದಾರೆ ಎಂದು ಜಿಬಿಎ ತಿಳಿಸಿತ್ತು. ಆದರೀಗ ಆಯಾ ಕಾರ್ಪೋರೇಷನ್‌ಗಳ ಆಯುಕ್ತರೇ ಬಜೆಟ್ ಮಂಡಿಸಲು ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಪೂರ್ವ ಪಾಲಿಕೆಯ ಆಯುಕ್ತ ಡಿ.ಎಸ್. ರಮೇಶ್ ಶುಕ್ರವಾರ ಬೆಳಗ್ಗೆ 9.30ಕ್ಕೆ ಹಾಗೂ ಕೇಂದ್ರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಮಧ್ಯಾಹ್ನ 12.30ಕ್ಕೆ ತಮ್ಮ ಕಾರ್ಪೋರೇಷನ್‌ಗಳ ಆಯವ್ಯಯವನ್ನು ಪ್ರಸ್ತುತಿಪಡಿಸಲಿದ್ದಾರೆ.

ಕೊನೆ ಗಳಿಗೆಯಲ್ಲಿ ಕೆಲ ಯೋಜನೆಗಳ ಸೇರ್ಪಡೆ:

ಕಳೆದೊಂದು ವಾರದಿಂದ ವಿವಿಧ ಹಂತಗಳಲ್ಲಿ ಬಜೆಟ್ ಪೂರ್ವ ಸಿದ್ಧತಾ ಸಭೆಗಳಲ್ಲಿ ಅಧಿಕಾರಿಗಳು ಚಿಂತನ-ಮಂಥನ ನಡೆಸಿ ಯೋಜನೆಗಳ ಸಹಿತ ಆಯವ್ಯಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಗುರುವಾರ ಬೆಂಗಳೂರು ಅಭಿವೃದ್ಧಿ ಸಚಿವರು ಕೆಲವೊಂದು ಸಲಹೆಗಳನ್ನು ನೀಡಿದ್ದು, ಅವುಗಳನ್ನು ಬಜೆಟ್‌ನಲ್ಲಿ ಸೇರಿಸಲು ಆಫೀಸರ್ಸ್‌ ತಡರಾತ್ರಿವರೆಗೂ ತಮ್ಮ ಕಚೇರಿಗಗಳಲ್ಲಿ ಕೆಲಸ ಮಾಡಿದರು. ನಂತರ ಮುದ್ರಣಕ್ಕೆ ಕಳುಹಿಸಿದ್ದು, ಶುಕ್ರವಾರ ಬೆಳಗ್ಗೆ ಆಯವ್ಯಯ ಮಂಡನೆಯಾಗಲಿರುವ ಸ್ಥಳಕ್ಕೆ ಬಜೆಟ್ ಪ್ರತಿಗಳನ್ನು ರವಾನಿಸಲು ವ್ಯವಸ್ಥೆ ಮಾಡಲಾಗಿದೆ.
ಪೂರ್ವ ಪಾಲಿಕೆ ಆದಾಯ ಸಂಗ್ರಹದಲ್ಲಿ ಮುಂದಿದ್ದು, ಸಹಜವಾಗಿಯೇ ಇತರ ಕಾರ್ಪೋರೇಷನ್‌ಗಿಂತ ಹೆಚ್ಚಿನ ಮೊತ್ತ ಒಳತೊಂಡ ಬಜೆಟ್ ಮಂಡಿಸಲಿದೆ. ಸುಮಾರು 5-6 ಸಾವಿರ ಕೋಟಿ ರೂ. ಆಯವ್ಯಯ ಗಾತ್ರ ಇರಲಿದ್ದು, ರಸ್ತೆಜಾಲ ವೃದ್ಧಿ ಒಳಗೊಂಡಂತೆ ಮೂಲಸೌಕರ್ಯ ಯೋಜನೆಗಳಿಗೆ ಆದ್ಯತೆ ನೀಡುವ ಸಾಧ್ಯತೆ ಹೆಚ್ಚಿದೆ. ಅತ್ಯಧಿಕ ಸಂಖ್ಯೆ ಐಟಿ ಕಂಪನಿಗಳನ್ನು ಹೊಂದಿರುವ ಪೂರ್ವ ಪಾಲಿಕೆ ಮುಂದೆ ಕೆಲವೊಂದು ಸವಾಲುಗಳು ಇದ್ದು, ಅವುಗಳನ್ನು ನಿವಾರಿಸಲು ಬಜೆಟ್‌ನಲ್ಲಿ ಪರಿಹಾರ ಒದಗಿಸುವ ಪ್ರಾಜೆಕ್ಟ್‌ಗಳನ್ನು ಘೋಷಿಸಲಿದೆ ಎಂಬ ನಿರೀಕ್ಷೆಯನ್ನು ಆ ಭಾಗದ ನಾಗರಿಕರು ಹೊಂದಿದ್ದಾರೆ.

ರಸ್ತೆ, ಫುಟ್‌ಪಾತ್, ನೈರ್ಮಲ್ಯಕ್ಕೆ ಆದ್ಯತೆ:

ಕೇಂದ್ರ ಪಾಲಿಕೆಯು ಬೆಂಗಳೂರು ಮಹಾನಗರದ ಸಿಬಿಡಿ (ಕೇಂದ್ರ ವ್ಯಾಪಾರ ಪ್ರದೇಶ) ಭಾಗವನ್ನು ಒಳಗೊಂಡಿದೆ. ಈ ಪ್ರದೇಶದಲ್ಲೇ ಅತಿ ಹೆಚ್ಚಿನ ವ್ಯಾಪಾರ-ವಹಿವಾಟು ನಡೆಯುತ್ತಿದ್ದು, ಮೂಲಸೌಕರ್ಯ ಕೊರತೆಯನ್ನು ಎದುರಿಸುತ್ತಿದೆ. ಇಲ್ಲೆಲ್ಲ ರಸ್ತೆ, ಫುಟ್‌ಪಾತ್ ಒತ್ತುವರಿಯಾಗಿದ್ದು, ಜನರು ಸರಾಗವಾಗಿ ನಡೆದಾಡಲು ಪರದಾಡುವಂತಾಗಿದೆ. ಈ ಸಮಸ್ಯೆಗೆ ಪರಿಹಾರ ಒದಗಿಸಲು ರಸ್ತೆ ಅಭಿವೃದ್ಧಿ, ಪಾದಚಾರಿಸ್ನೇಹಿ ಫುಟ್‌ಪಾತ್, ಸ್ಕೈವಾಕ್, ಶೌಚಾಲಯಗಳ ನಿರ್ಮಾಣ ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡುವ ಕಾರ್ಯಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ. ಜತೆಗೆ ಹಸಿರು ಹೆಚ್ಚಿಸುವ ಉಪಕ್ರಮಕ್ಕೆ ಮಣೆ ಹಾಕಲಾಗುತ್ತದೆ ಎಂದು ಹೇಳಲಾಗಿದೆ.
ಎರಡೂ ಕಾರ್ಪೋರೇಷನ್‌ಗಳ ಆಯವ್ಯಯ ಮಂಡನೆ ಬಳಿಕ ಪಾಲಿಕೆಗಳ ಆಡಳಿತಾಧಿಕಾರಿ ಎಂ. ಮಹೇಶ್ವರ್ ರಾವ್ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಲಿದ್ದಾರೆ ಎಂದು ಜಿಬಿಎ ಪ್ರಕಟಣೆ ತಿಳಿಸಿದೆ.
ಬಜೆಟ್ ಮಂಡನೆಯಾಗುವ ಸ್ಥಳ, ಸಮಯ:
ಪೂರ್ವ ಪಾಲಿಕೆ - ಎಂಎಲ್ಆರ್ ಕನ್ವೆಂಷನ್ ಸೆಂಟರ್, ಗರುಡಚಾರಪಾಳ್ಯ, ವೈಟ್‌ಫೀಲ್ಡ್ ಮುಖ್ಯರಸ್ತೆ, ಮಹದೇವಪುರ. ಮಾ.27ರ ಬೆಳಗ್ಗೆ 9.30ಕ್ಕೆ
ಕೇಂದ್ರ ಪಾಲಿಕೆ - ಸರ್ ಪುಟ್ಟಣ್ಣ ಚೆಟ್ಟಿ ಪುರಭವನ (ಟೌನ್‌ಹಾಲ್). ಮಧ್ಯಾಹ್ನ 12.30ಕ್ಕೆ
ಮಾ.28ರಂದು 3 ಪಾಲಿಕೆಗಳ ಬಜೆಟ್:
ಶನಿವಾರ ಉತ್ತರ ಪಾಲಿಕೆ (ಬೆಳಗ್ಗೆ 9.30ಕ್ಕೆ), ಪಶ್ಚಿಮ ಪಾಲಿಕೆ (ಮಧ್ಯಾಹ್ನ 12.30ಕ್ಕೆ) ಹಾಗೂ ದಕ್ಷಿಣ ಪಾಲಿಕೆ (ಮಧ್ಯಾಹ್ನ 2.30ಕ್ಕೆ) ಬಜೆಟ್ ಆಯಾ ಕಾರ್ಪೋರೇಷನ್‌ಗಳ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಮಂಡನೆಯಾಗಲಿದೆ. ಇದಕ್ಕಾಗಿ ಆಯಾ ಪಾಲಿಕೆಗಳು ಸಿದ್ಧತೆ ಮಾಡಿಕೊಂಡಿವೆ.