- ವರ್ಷಾಂತ್ಯದೊಳಗೆ ಕಾರ್ಯಾಚರಣೆ
- ಪ್ರತಿ ಪಾಲಿಕೆಗೂ ಎರಡು ವಾಹನ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜಧಾನಿಯಲ್ಲಿ ಸಂಚಾರಸಿಕ್ಕು, ಪಾರ್ಕಿಂಗ್ ಸಮಸ್ಯೆ ದಿನದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಗರದಲ್ಲಿ ಮತ್ತೆ ಟೋಯಿಂಗ್ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದು, ವರ್ಷಾಂತ್ಯದೊಳಗೆ ಕಾರ್ಯಾಚರಣೆ ಆರಂಭವಾಗುವ ನಿರೀಕ್ಷೆ ಇದೆ.
ತಿಂಗಳುಟ್ಟಲೆ ವಾಹನಗಳನ್ನು ರಸ್ತೆಬದಿ, ಬೀದಿಬದಿಗಳಲ್ಲಿ ಪಾರ್ಕ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಂಚಾರ ಪೊಲೀಸರ ಸಹಯೋಗದಲ್ಲಿ ಜಿಬಿಎ ಟೋಯಿಂಗ್ ಮಾಡುವುದಕ್ಕೆ ತಯಾರಿ ನಡೆಸುತ್ತಿದೆ.
ಬೀದಿಬದಿ, ಮನೆ ಮುಂಭಾಗ ಫುಟ್ಪಾತ್ಗಳಲ್ಲಿ ನಿಲ್ಲಿಸಿದ ವಾಹನಗಳನ್ನು ಟೋಯಿಂಗ್ ಮಾಡಿ ಮೋಟಾರು ವಾಹನ ಕಾಯ್ದೆ ಪ್ರಕಾರ ದಂಡ ವಿಧಿಸಲಾಗಿವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೆ ಒಂದು ಟೋಯಿಂಗ್ ವಾಹನ ಜಿಬಿಎ ವ್ಯಾಪ್ತಿಯಲ್ಲಿದ್ದು, ಉಳಿದ ನಾಲ್ಕು ಪಾಲಿಕೆಗಳಲ್ಲಿ ಶೀಘ್ರವೇ ವಾಹನಗಳು ಬರಲಿದೆ. ಪ್ರತಿ ಪಾಲಿಕೆಗೂ 2 ಟೋಯಿಂಗ್ ವಾಹನ ಖರೀದಿಸಿ, ಶ್ರೀ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದೆ.
ಜಿಬಿಎ ವ್ಯಾಪ್ತಿಯಲ್ಲಿರುವ ನಿಗಮಗಳು ಟೋಯಿಂಗ್ ಯಂತ್ರಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯಲು ಟೆಂಡರ್ಗಳನ್ನು ಆಹ್ವಾನಿಸಿದ್ದು, ಮೊದಲ ಹಂತದಲ್ಲಿ ಚಾಲುಕ್ಯ ವೃತ್ತದಿಂದ ಹೆಬ್ಬಾಳವರೆಗೆ ಹಾಗೂ ಹೊರವರ್ತುಲ ರಸ್ತೆ ಮಾರ್ಗದಲ್ಲಿ ಕಾರ್ಯಾಚರಣೆ ಆರಂಭಿಸುವ ಯೋಜನೆ ರೂಪಿಸಲಾಗಿದೆ. ಪ್ರತಿ ವಿಭಾಗ ಮಟ್ಟದಲ್ಲಿ ಟೆಂಡರ್ಗಳನ್ನು ಆಹ್ವಾನಿಸಲಾಗಿದ್ದು, ವಾಹನ, ಇಂಧನ, ಚಾಲಕ ಹಾಗೂ ಸಂಪೂರ್ಣ ನಿರ್ವಹಣೆಯನ್ನು ಒಳಗೊಂಡಂತೆ ಪ್ರತಿ ಸೆಟ್ಗೆ ಅಂದಾಜು 14.52 ಲಕ್ಷ ರೂ. ವೆಚ್ಚವಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯಾರ್ಡ್ ಕೊರತೆ
ಬಿಟ್ಟುಹೋಗಿರುವ ವಾಹನಗಳು ಮತ್ತು ನೋ -ಪಾರ್ಕಿಂಗ್ ವಲಯಗಳಿಂದ ಎತ್ತಿ ತರಲಾಗುವ ವಾಹನಗಳನ್ನು ನಿಲ್ಲಿಸಲು ಸೂಕ್ತ ಜಾಗ ಗುರುತಿಸುವುದು ದೊಡ್ಡ ಸವಾಲಾಗಿದೆ. ಪ್ರಸ್ತುತ ಇಂತಹ ವಾಹನಗಳನ್ನು ಇರಿಸಲು ಕೇಂದ್ರೀಕೃತ ಯಾರ್ಡ್ ಇಲ್ಲದಿರುವುದು, ಈ ಯೋಜನೆ ಜಾರಿಗೆ ವೇಗ ನೀಡಲು ಅಡ್ಡಿಯಾಗುತ್ತಿದೆ. ಟೋಯಿಂಗ್ ಶುಲ್ಕ ನಿಗದಿ ಕುರಿತು ಚರ್ಚೆಗಳು ನಡೆಯುತ್ತಿದ್ದು, ಈ ಮೊತ್ತವನ್ನು ಜಿಬಿಎಗೆ ಪಾವತಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶುಲ್ಕ ಎಷ್ಟು?
ಒಂದು ವಾಹನವನ್ನು ಎತ್ತಿದರೆ ಸಾವಿರ ರೂ. ಶುಲ್ಕ ನಿಗದಿಪಡಿಸುವ ಪ್ರಸ್ತಾವನೆಯೂ ಪರಿಶೀಲನೆಯಲ್ಲಿದ್ದು, ಇದರಿಂದ ಕಾರ್ಯಾಚರಣಾ ವೆಚ್ಚಗಳನ್ನು ಭರಿಸಿ, ಆದಾಯ ಮೂಲವನ್ನಾಗಿ ಪರಿವರ್ತಿಸಲು ಸಾಧ್ಯವಾಗಲಿದೆ. ನಗರದಾದ್ಯಂತ ಟೋಯಿಂಗ್ ಯಂತ್ರಗಳನ್ನು ಹಂಚುವ ಬದಲು, ಹೆಚ್ಚಿನ ವಾಹನದಟ್ಟಣೆ ಇರುವ ಮಾರ್ಗಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಯಮ ಉಲ್ಲಂಘಿಸಿದರೆ ದಂಡ
ಟೋಯಿಂಗ್ ವಾಹನಗಳನ್ನು ಡಿಸೆಂಬರ್ ಅಂತ್ಯದೊಳಗೆ ಸಂಚಾರ ಪೊಲೀಸರಿಗೆ ಹಸ್ತಾಂತರಿಸುವ ನಿರೀಕ್ಷೆಯಿದೆ. ಹಲವು ಮಾರ್ಗಗಳಲ್ಲಿ ದ್ವಿಚಕ್ರ ವಾಹನಗಳ ಜತೆಗೆ ಶಾಲಾ ವ್ಯಾನ್ಗಳು ಹಾಗೂ ಬಸ್ಗಳೂ ಪಾರ್ಕಿಂಗ್ ನಿಯಮ ಉಲ್ಲಂಘಿಸುತ್ತಿರುವುದು ಗಮನಕ್ಕೆ ಬಂದಿದೆ. ಪಾರ್ಕಿಂಗ್ ನಿಯಮ ಉಲ್ಲಂಘಿಸುವ ದ್ವಿಚಕ್ರ ವಾಹನಗಳಿಗೆ ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಇದರಲ್ಲಿ ಮೋಟಾರು ವಾಹನ ಕಾಯ್ದೆ&1988ರ ಅಡಿಯಲ್ಲಿ 500 ರೂ. ಹಾಗೂ ಗ್ರೇಟರ್ ಬೆಂಗಳೂರು ಗವರ್ನೆನ್ಸ್ ಕಾಯ್ದೆ& 2024ರ ಅಡಿಯಲ್ಲಿ 500 ರೂ. ಸೇರಿದೆ. ಕಾರುಗಳು ಮತ್ತು ಇತರ ವಾಹನಗಳಿಗೆ ಗರಿಷ್ಠ 1,500 ರೂ.ವರೆಗೆ ದಂಡ ವಿಧಿಸಲಾಗುತ್ತಿದೆ. ಇದರಲ್ಲಿ ಎಂವಿ ಕಾಯ್ದೆಯಡಿ 500 ರೂ. ಹಾಗೂ ಜಿಬಿಜಿ ಕಾಯ್ದೆಯಡಿ ಸಾವಿರ ರೂ.ದಂಡ ಸೇರಿದೆ.