- ಶಿವಾಜಿನಗರದಲ್ಲಿ ಪಾಲಿಕೆ ನೌಕರರ ಮೇಲೆ ಪುಂಡರಿಂದ ಹಲ್ಲೆ
- ಬೌರಿಂಗ್ ಆಸ್ಪತ್ರೆಯಲ್ಲಿ ಗಾಯಾಳು ಆರೋಗ್ಯ ವಿಚಾರಿಸಿದ ಜಿಬಿಎ ಮುಖ್ಯ ಆಯುಕ್ತ
- ಹತ್ತು ಮಂದಿ ಬಂಧನ, ಪ್ರಮುಖ ವಿರುದ್ಧ ಗೂಂಡಾ ಕೇಸ್‌ಗೆ ಸಚಿವರ ಸೂಚನೆ
ಬೆಂಗಳೂರು: ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಾಚರಣೆ ಸಿಬ್ಬಂದಿ ಮೇಲೆ ಕೆಲ ವ್ಯಾಪಾರಿಗಳು, ಕನ್ನಡ ಪರ ಸಂಘಟನೆಯ ಮುಖಂಡ ಹಾಗೂ ಆತನ ಬೆಂಬಲಿಗರು ಹಲ್ಲೆ ನಡೆಸಿ ಅಟ್ಟಾಡಿಸಿ ಹೊಡೆದಿರುವ ಪ್ರಸಂಗ ಮಂಗಳವಾರ ಶಿವಾಜಿನಗರದಲ್ಲಿ ನಡೆಯಿತು.
ಶಿವಾಜಿನಗರ ಬಸ್ ನಿಲ್ದಾಣದ ಬಳಿ ಬೆಳಗ್ಗೆ ಕಾರ್ಯಾಚರಣೆ ನಡೆಸುವ ವೇಳೆ ಕೇಂದ್ರ ಪಾಲಿಕೆ ಸಿಬ್ಬಂದಿ ವಿರುದ್ಧ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ವ್ಯಾಪಾರಿಗಳು ಹಾಗೂ ಇತರರು ಗುಂಪುಗೂಡಿ ಪಾಲಿಕೆ ಎಇಇ ಮಾಧವ ರಾವ್ ಅವರನ್ನು ಥಳಿಸಿದ್ದಾರೆ. ಸ್ವಲ್ಪದೂರದವರೆಗೆ ತಳ್ಳಿಕೊಂಡು ಹೋದ ಗುಂಪು ನೆಲಕ್ಕೆ ದೂಡಿ ಹಲ್ಲೆ ನಡೆಸಿದ್ದಾರೆ. ಹೆಲ್ಮೆಟ್, ಪ್ಲ್ಯಾಸ್ಟಿಕ್ ಕುರ್ಚಿ ಬಳಸಿ ಹೊಡೆದಿದ್ದಾರೆ. ಜೆಸಿಬಿ ಚಾಲಕ ಹಾಗೂ ಟ್ರ್ಯಾಕ್ಟರ್ ಸಿಬ್ಬಂದಿ ಮೇಲೂ ಕೈ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಗುಂಪು ಏಕಾಏಕಿ ಮಹಿಳಾ ಸಿಬ್ಬಂದಿ ಮೇಲೆ ಪೆಪ್ಪರ್ ಸ್ಪ್ರೇ ಬಳಸಿದೆ. ಇದರಿಂದ ಅಕ್ಷರಶಃ ಹೆದರಿದ ಸಿಬ್ಬಂದಿ ಪ್ರಾಣ ರಕ್ಷಣೆಗಾಗಿ ಬೇರೆಡೆಗೆ ಓಡಿಹೋಗಬೇಕಾಯಿತು.
ಅಷ್ಟರಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಂತೆ ಹೈಡ್ರಾಮಾವೇ ನಡೆದುಹೋಯಿತು. ಘಟನೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದಂತೆ ಹಲ್ಲೆಗೊಳಗಾದ ಸಿಬ್ಬಂದಿಯನ್ನು ಸಮೀಪದ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಘಟನೆ ಬೆನ್ನಲ್ಲೇ ಕೆಲ ಕಾಲ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು. ಮಧ್ಯಾಹ್ನದ ಬಳಿಕ ಕಾರ್ಯಾಚರಣೆಯನ್ನು ಪುನರಾರಂಭಿಸಲಾಯಿತು.
ಮುಖಂಡನ ಪತ್ತೆಗೆ ಪೊಲೀಸ್ ಬಲೆ:
ಹಲ್ಲೆ ನಡೆಸಿದ ಮುಂದಾಳು ‘ನಮ್ಮ ಕರ್ನಾಟಕ ಸೇನೆ’ಸಂಘಟನೆಯ ಅಧ್ಯಕ್ಷ ಎಂ. ಬಸವರಾಜ್ ಪಡುಕೋಟೆ ಎಂದು ಗುರುತಿಸಲಾಗಿದೆ. ಈತ ಕೆಲ ವ್ಯಾಪಾರಿಗಳ ಬಳಿ ಹಣ ವಸೂಲಿ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಘಟನೆ ನಡೆದ ಬಳಿಕ ಈತ ಸ್ಥಳದಿಂದ ಪಲಾಯನಗೈದಿದ್ದು, ಇತರ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಸವರಾಜ್‌ಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಸ್ಥಳಕ್ಕೆ ಮುಖ್ಯ ಆಯುಕ್ತರ ಭೇಟಿ, ಪರಿಶೀಲನೆ:
ಘಟನೆ ಬಳಿಕ ಕೇಂದ್ರ ಪಾಲಿಕೆ ಆಯುಕ್ತ ಜಿ.ಜಗದೀಶ್ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದರು. ಇದರ ಬೆನ್ನಲ್ಲೇ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಕೂಡ ಸ್ಥಳಕ್ಕೆ ಆಗಮಿಸಿದರು. ಆಸ್ಪತ್ರೆಗೆ ದಾಖಲಿಸಿದ್ದ ಸಿಬ್ಬಂದಿಯ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಜತೆಗೆ ಬೇಗನೆ ಗುಣಮುಖರಾಗುವಂತೆ ಹಾರೈಸಿದರು.
ಅಭಿವೃದ್ಧಿ ಅಪರ ಆಯುಕ್ತ ವೆಂಕಟಾಚಲಪತಿ, ಜಂಟಿ ಆಯುಕ್ತ ರಂಗನಾಥ್, ಹೇಮಂತ್ ಶರಣ್ ಇದ್ದರು.
10 ಮಂದಿ ಆರೋಪಿಗಳ ಸೆರೆ:
ಘಟನೆಗೆ ಕಾರಣರಾಗಿದ್ದಾರೆಂದು 10 ಮಂದಿ ಆರೋಪಿಗಳನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿಯನ್ನು ಆಧರಿಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದೆ. ಬಸವರಾಜ್ (28), ರಂಗಸ್ವಾಮಿ (49), ಕಿರಣ್ (34), ರಂಜಿತ್ (19), ರಘು (28) ಪಾರ್ಥೀಬನ್ (23), ಮುಜಾಹಿದಾ ಅಹಮದ್ (39) ಕೊಟ್ರೇಶ್ (26), ಪರಶುರಾಮ್ (27) ಹಾಗೂ ಭರತ್ (24) ಬಂಧಿತರು. ಆರೋಪಿಗಳ ಬಂಧನವನ್ನು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ದೃಢಪಡಿಸಿದ್ದಾರೆ.
ಹಲ್ಲೆಗೊಳಗಾದ ಸಿಬ್ಬಂದಿ:
ಸುನೀಲ್, ಟ್ರ್ಯಾಕ್ಟರ್ ಸಿಬ್ಬಂದಿ
ಗೂಂಡಾ ಕೇಸ್ ಹಾಕಲು ಸಚಿವರ ಸೂಚನೆ:
ತೆರವು ಕಾರ್ಯಾಚರಣೆ ವೇಳೆ ಸಿಬ್ಬಂದಿ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, ಹಲ್ಲೆಗೆ ಕಾರಣನಾದ ಮುಖಂಡ ಬಸವರಾಜ್ ವಿರುದ್ಧ ಗೂಂಡಾ ಕಾಯ್ದೆ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಈ ವೇಳೆ ಮಾತನಾಡಿರುವ ಸಚಿವರು, ಸಿಬ್ಬಂದಿ ವಿರುದ್ಧ ಕೈ ಮಾಡಿದರೆ ಸುಮ್ಮನಿರುವುದಿಲ್ಲ. ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಹಲ್ಲೆ ಮಾಡುವುದರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಇದನ್ನು ಬಾಯಿ ಮಾತಿಗೆ ಸೀಮಿತವಾಗದೆ ಕಾರ್ಯಗತ ಮಾಡಬೇಕಾಗುತ್ತದೆ. ಇದರಿಂದ ಕೆಲವರು ತೊಂದರೆಯನ್ನು ಅನಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.
ಠಾಣೆ ಎದಿರು ನೌಕರರ ಪ್ರತಿಭಟನೆ:
ಘಟನೆ ಖಂಡಿಸಿ ಕಮರ್ಷಿಯಲ್ ಪೊಲೀಸ್ ಠಾಣೆ ಎದಿರು ಜಿಬಿಎ ಅಧಿಕಾರಿ ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್‌ರಾಜ್ ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗೂ ನೌಕರರು ಪ್ರತಿಭಟನೆ ನಡೆಸಿದರು. ಪ್ರಮುಖ ಆರೋಪಿಯನ್ನು ಬಂಧಿಸುವವರೆಗೂ ಸ್ಥಳಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು. ಕೆಲ ಗಂಟೆಗಳಲ್ಲೇ 10 ಮಂದಿ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದರು. ಇದರ ಬೆನ್ನಲ್ಲೇ ನೌಕರರು ಪ್ರತಿಭಟನೆ ವಾಪಸ್ ಪಡೆದರು.
ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ. ಇಂತಹ ಘಟನೆ ಆಗಬಾರದಿತ್ತು. ಕೆಲ ಸಮಾಜಘಾತುಕ ಶಕ್ತಿಗಳು ಹಲ್ಲೆ ನಡೆಸಿರುವ ಸಾಧ್ಯತೆ ಇದೆ. ಇನ್ನು ಮುಂದೆ ಇಂತಹ ಘಟನೆಗೆ ಅವಕಾಶ ಮಾಡಿಕೊಡುವುದಿಲ್ಲ. ಹಲ್ಲೆಗೊಳಗಾದ ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಕಾರ್ಯಾಚರಣೆ ವೇಳೆ ಅಗತ್ಯ ಪೊಲೀಸ್ ಪಡೆ ನಿಯೋಜಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು.
- ಎಂ.ಮಹೇಶ್ವರ ರಾವ್, ಜಿಬಿಎ ಮುಖ್ಯ ಆಯುಕ್ತ
ಹಲ್ಲೆ ಪ್ರಕರಣದಿಂದ ತೆರವು ಕಾರ್ಯಾಚರಣೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಯಥಾಪ್ರಕಾರ ಅನಧಿಕೃತ ಒತ್ತುವರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಸೂಕ್ಷ್ಮ ಪ್ರದೇಶಗಳಲ್ಲಿ ಇನ್ನಷ್ಟು ಪೊಲೀಸ್ ಸಿಬ್ಬಂದಿ ಬಳಸಿಕೊಳ್ಳಲಾಗುವುದು. ಪಾಲಿಕೆಯಿಂದಲೂ ಹಿರಿಯ ಅಧಿಕಾರಿಗಳು ಸ್ಥಳದಲ್ಲಿರುವಂತೆ ಸೂಚಿಸಲಾಗುವುದು.
- ಜಿ.ಜಗದೀಶ್, ಕೇಂದ್ರ ಪಾಲಿಕೆ ಆಯುಕ್ತ
ಕರ್ತವ್ಯ ನಿರ್ವಹಿಸುವ ಯಾರೇ ಸಿಬ್ಬಂದಿ ವಿರುದ್ಧ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಜತೆಗೆ ಸಿಬ್ಬಂದಿಗೂ ಅಗತ್ಯ ರಕ್ಷಣೆ ಒದಗಿಸಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ತೆರವು ಕಾರ್ಯ ಕೈಗೊಳ್ಳುವಾಗ ಸ್ಥಳದಲ್ಲಿ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಹಾಜರಿರುವಂತೆ ಪಾಲಿಕೆ ಮುಖ್ಯಸ್ಥರು ನಿಗಾ ವಹಿಸಲಿ.
- ಎ.ಅಮೃತ್‌ರಾಜ್, ಜಿಬಿಎ ಅಧಿಕಾರಿ ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ