ಬೆಂಗಳೂರು

ರಾಜ್ಯದಲ್ಲಿದೆ ಸಿ.ಡಿ ಕಾಂಗ್ರೆಸ್ ಕಮಿಟಿ

ರಾಜ್ಯದಲ್ಲಿ ಯಾರ ವಿರುದ್ಧ ಸಿ.ಡಿ ವ್ಯವಹಾರ ನಡೆಯುತ್ತಿದೆ ಎಂಬುದು ತನಿಖೆ ಮೂಲಕ ಬಯಲಿಗೆ ಬರಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆಗ್ರಹಿಸಿದರು.

ಬೆಂಗಳೂರು: ರಾಜ್ಯದಲ್ಲಿ ಸಿ.ಡಿ. ಕಾಂಗ್ರೆಸ್ ಕಮಿಟಿ ಅಸ್ತಿತ್ವದಲ್ಲಿದ್ದು ಅದು ಸ್ವಪಕ್ಷೀಯರ ವಿರುದ್ಧವೇ ಷಡ್ಯಂತ್ರ ನಡೆಸಿ ಖೆಡ್ಡಾಕ್ಕೆ ಕೆಡವುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಲೇವಡಿ ಮಾಡಿದ್ದಾರೆ.

ರಾಜ್ಯದಲ್ಲಿ ಯಾರ ವಿರುದ್ಧ ಸಿ.ಡಿ ವ್ಯವಹಾರ ನಡೆಯುತ್ತಿದೆ ಎಂಬುದು ತನಿಖೆ ಮೂಲಕ ಬಯಲಿಗೆ ಬರಬೇಕು. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಈಗಾಗಲೇ ಒಂದಷ್ಟು ಬಯಲು ಮಾಡಿದ್ದಾರೆ ಎಂದು ಶುಕ್ರವಾರ ಮಾಧ್ಯಮಗಳಿಗೆ ತಿಳಿಸಿದರು.

ಕೆಪಿಎಸ್‌ಸಿ ಅಕ್ರಮದ ತನಿಖೆ ಆಗಬೇಕು, ಸತ್ಯ ಬಯಲಾಗಬೇಕು ಎಂದು ಎಲ್ಲರೂ ಬಯಸಿದ್ದರು. ಈ ಕುರಿತು ತನಿಖೆಗೆ ಎಸ್‌ಐಟಿ ರಚಿಸಲು ಹೈಕೋರ್ಟ್ ಕೂಡ ಆದೇಶಿಸಿತ್ತು. ಸತ್ಯ ಮುಚ್ಚಿಡಲು ಸರ್ಕಾರ ಇದನ್ನು ವಿರೋಧಿಸಿತು.

ತನಿಖಾ ತಂಡದಿಂದ ತನಿಖಾಧಿಕಾರಿ ಅಲೋಕಕುಮಾರ್ ಅವರ ಹೆಸರು ಕೈ ಬಿಡಲು ಕೋರಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗಿದ್ದು ಏಕೆ ಎಂದು ಪ್ರಶ್ನಿಸಿದರು. ಈ ಪ್ರಕರಣದಲ್ಲಿ ಗೃಹ ಸಚಿವರು ಭಯದಿಂದ ಓಡಾಡಿದರು. ಸತ್ಯ ಹೊರ ಬರಬಾರದೆಂದು ಅಧಿಕಾರಿ ಬದಲಿಸಲು ಮುಂದಾದರು ಎಂದು ಆಕ್ಷೇಪಿಸಿದರು.

ಅರಾಜಕತೆ ಸೃಷ್ಟಿಗೆ ಸಂಚು

ದೇಶದಲ್ಲಿ ಅರಾಜಕತೆ ಸೃಷ್ಟಿಸಲು ದೇಶದ್ರೋಹಿ ಶಕ್ತಿಗಳು ದೇಶದ ಒಳಗೆ ಹಾಗೂ ಹೊರಗೆ ಷಡ್ಯಂತ್ರ ಮಾಡುತ್ತಿವೆ. ಕಾಕ್ರೋಚ್ ಜನತಾ ಪಾರ್ಟಿ ಈ ಅರಾಜಕತೆಯ ಕೂಸು ಎಂದು ಛಲವಾದಿ ನಾರಾಯಣ ಸ್ವಾಮಿ ದೂರಿದರು.

ಬಾಂಗ್ಲಾ ಕ್ರಾಂತಿಯಿಂದ ನಾವು ಪ್ರೇರಿತರಾಗಿದ್ದೇವೆ ಎಂದು ಕೆಲ ಝೆನ್‌ಜಿಗಳು ಹೇಳುತ್ತಾರೆ. ಇವರು ದೇಶದ ವಿರುದ್ಧ ತಿರುಗಿ ಬೀಳಲು ಕಾಂಗ್ರೆಸ್ ಪ್ರೇರಣೆ ಇದೆಯೇ ಎಂದು ಪ್ರಶ್ನಿಸಿದರು.

ಕಾಕ್ರೋಚ್ ಜನತಾ ಪಕ್ಷದ ಸಂಪರ್ಕ ಎಲ್ಲಿಂದ ಎಲ್ಲಿವರೆಗೆ ಇದೆ ಎಂಬುದು ಬಯಲಾಗಬೇಕು. ದೇಶ ವಿರೋಧಿ ಶಕ್ತಿಗಳನ್ನು ಹುಟ್ಟು ಹಾಕುವುದರಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದ್ದು ಕಾಕ್ರೋಚ್‌ಗಳ ಹಿಂದೆ ನಿಂತು ಕೆಲಸ ಮಾಡುತ್ತಿದೆ ಎಂದು ದೂರಿದರು.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಮಧಿ ಸೇರಿದಂತೆ ದೇಶದ್ರೋಹದ ಕೆಲಸ ಮಾಡುವ ಎಲ್ಲರನ್ನೂ ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದರು.