ಕಿರುವಾರ ಎಸ್.ಸುದರ್ಶನ್ ಬೆಂಗಳೂರು
ವಾರಂತ್ಯ, ರಜೆ ಬಂತೆಂದರೆ ಎಲ್ಲಿ ಹೋಗಬೇಕು ಅಂದುಕೊಂಡಾಗ ಮೊದಲು ನೆನಪಿಗೆ ಬರುವುದು ಚಾರಣ. ಇತ್ತೀಚಿಗೆ ಟ್ರೆಕ್ಕಿಂಗ್‌ಗೆ ಭೇಟಿ ನೀಡುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದ್ದು, ರಕ್ಷಣೆಗೆ ನಿಯಮ ರೂಪಿಸಬೇಕು ಎಂಬ ಚರ್ಚೆ ಜೋರಾಗಿದೆ.
ಅರಣ್ಯ ಪರಿಸರ ಪ್ರವಾಸೋದ್ಯ ಇದರ ನಿರ್ವಹಣೆಯನ್ನು 'ಅರಣ್ಯ ವಿಹಾರ' ಪೋರ್ಟಲ್ ವಹಿಸಿ ಕೊಂಡಿದ್ದು, ಕೇವಲ ಬುಕ್ಕಿಂಗ್‌ಗೆ ಸಿಮೀತ ವಾಗಿದೆ ಹೊರತು ಚಾರಣಿಗರ ರಕ್ಷಣೆಗೆ ನಿಯಮ ರೂಪಿಸಿಲ್ಲ. ರಾಜ್ಯದಲ್ಲಿ ಸುಮಾರು 100ಕ್ಕೂ ಹೆಚ್ಚು ಚಾರಣ ಸ್ಥಳಗಳು ಇವೆ, 12 ಜಿಲ್ಲೆಗಳಲ್ಲಿ ಕೇವಲ 44 ಸ್ಥಳಗಳ ಮಾಹಿತಿಯನ್ನು ಮಾತ್ರ ನಮೂದು ಮಾಡಲಾ ಗಿದೆ. ಚಿಕ್ಕಮಗಳೂರು, ಕೊಡಗು,ಬೆಂಗಳೂರುಗ್ರಾಮಾಂ ತರ ಜಿಲ್ಲೆಯ ವ್ಯಾಪ್ತಿಯಲ್ಲಿನ ಚಾರಣ ಸ್ಥಳಕ್ಕೆ ಹೋಗಿದ್ದ ಕೆಲವರು ಕಾಣೆಯಾದ ಪ್ರಕರಣಗಳು ಸಂಭವಿಸಿದ್ದವು.
ಅಂತರಗಂಗೆ ಚಾರಣದ ಪ್ರವೇಶ ದ್ವಾರ.
ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಅಂದಿನ ಅರಣ್ಯ ಮಂತ್ರಿ ಈಶ್ವರ್ ಖಂಡ್ರೆ ಅವರು ರಾಜ್ಯದಲ್ಲಿ ಪ್ರಮಾಣಿತ ಕಾರ್ಯಚಾರಣ ಕಾರ್ಯವಿಧಾನ (ಎಸ್ ಒಪಿ) ಜಾರಿಗೆ ತರಲು ಏಪ್ರಿಲ್ ತಿಂಗಳಲ್ಲೇ ತೀರ್ಮಾನಿಸಿ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಇದುವರೆಗೂ ಇಲಾಖೆಯು ನಿಯಮ ರೂಪಿಸಿಲ್ಲ. ಬದಲಿಗೆ ಕೆಲ ಸೂಕ್ಷ್ಮ ಸ್ಥಳಗಳ ಚಾರಣವನ್ನು ತಾತ್ಕಲಿಕವಾಗಿ ನಿಷೇಧಿಸಿ ಕ್ರಮವಹಿಸಿದೆ. ಎಲ್ಲ ಚಾರಣ ಸ್ಥಳಗಳ ಮಾಹಿತಿ ನಮೂದು ಮಾಡುವುದನ್ನು ಕೈಬಿಟ್ಟಿದ್ದು ಆ ಸ್ಥಳಗಳಲ್ಲಿ ಅನಧಿಕೃತ ಚಾರಣವನ್ನು ಸ್ಥಳೀಯರು ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಯಾವಾಗ ನಿಯಮ ಜಾರಿಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಚಾರಣ ಸ್ಥಳಗಳು ಇಲಾಖೆಗೆ ಅದಾಯ ತಂದುಕೊಂಡು ಸ್ಥಳಗಳಾಗಿವೆ. ಆರಂಭದಲ್ಲಿ ಸ್ಥಳದಲ್ಲಿ ಹಣ ಪಾವತಿ ಮಾಡಿ ನೋಂದಣಿಗೆ ಅವಕಾಶ ನೀಡಲಾಗಿತ್ತು, ಅಲ್ಲಿ ಹಣ ಸೋರಿಕೆಯಾಗುತ್ತಿದ್ದರಿಂದ 2024ರ ಅಕ್ಟೋಬರ್ ತಿಂಗಳಿಂದ ಅರಣ್ಯ ವಿಹಾರ್ ಪೋರ್ಟಲ್ ಮೂಲಕ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಆದರೆ ರಕ್ಷಣೆಗೆ ಒತ್ತು ನೀಡಿಲ್ಲ. ಅರಣ್ಯ ಹೊರತುಪಡಿಸಿ ಹೊರಗಡೆಯಿರುವ ಸ್ಥಳಗಳ ನಿರ್ವಹಣೆಯನ್ನು ಪ್ರವಾಸೋದ್ಯಮ ಇಲಾಖೆ ವಹಿಸಿಕೊಂಡಿದ್ದು, ಇನ್ನು ಎಷ್ಟು ದಿನದಲ್ಲಿ ಎಸ್ ಒಪಿ ಜಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಚಿಕ್ಕಮಗಳೂರಿನ ಮಾಣಿಕ್ಯಧಾರ ಜಲಪಾತದ ಸಮೀಪ ಕೇಂರಳದ ಶ್ರೀನಂದ, ಕೊಡಗಿನ ತಡಿಯಾಂಡ ಮೋಳ್ ಚಾರಣದ ಸ್ಥಳದಲ್ಲಿ ಕೇರಳದ ಶರಣ್ಯಾ ಮೂರುಗಳ ನಂತರ ಸುರಕ್ಷಿತವಾಗಿ ಪತ್ತೆಯಾಗಿದ್ದರು.ಮಾಣಿಕ್ಯಧಾರಾ ಜಲಪಾತದ ಬಳಿ ನಾಪತ್ತೆಯಾಗಿದ್ದ ಕೇರಳದ ಶ್ರೀನಂದಾ ಮೃತಪಟ್ಟಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್‌ಪೇಟೆ ಸಮೀಪದ ಶಿವಗಂಗೆ ಬೆಟ್ಟದಲ್ಲಿ ಕಳೆದ ಶನಿವಾರ ಬೆಂಗಳೂರಿನ ಅದೈತ್ ಉಪಾಧ್ಯಾಯ ಕಾಣೆಯಾಗಿದ್ದು, ಇದುವರೆಗೂ ಪತ್ತೆಯಾಗಿಲ್ಲ. ಈ ಘಟನೆಗಳಿಂದ ಸುರಕ್ಷಿತ ಚಾರಣ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಶಿವಮೊಗ್ಗ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಾಮರಾಜನಗರ, ರಾಮನಗರ, ತುಮಕೂರು, ಕೊಡಗು, ಕಲಬುರ್ಗಿ, ಬೆಂಗಳೂರು ಗ್ರಾ, ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗಿರಿ ಜಲಪಾತಗಳು, ಶಿಖರಗಳಿದ್ದು ಚಾರಣಕ್ಕೆ ಸೂಕ್ತ ಸ್ಥಳಗಳಾಗಿವೆ. ಇಲ್ಲಿ ಈ ಹಿಂದಿನಿಂದಲೂ ಕೆಲ ಸ್ಥಳಗಳಲ್ಲಿ ನಡೆದುಕೊಂಡು ಬಂದಿದ್ದು, ಇತ್ತೀಚಿಗೆ ಹೊಸ ಸ್ಥಳಗಳನ್ನು ಚಾರಣಿಗರು ಗುರುತಿಸಿಕೊಂಡಿದ್ದು, ಚಾರಣಿಗರು ತೆರಳುತ್ತಿರುವುದರಿಂದ ಕಾಣೆಯಾಗಿರುವ ಪ್ರಕರಣಗಳು ಸಂಭವಿಸಲು ಕಾರಣವಾಗುತ್ತಿವೆ.
ಸುರಕ್ಷೆ ಕುರಿತು ಇಲ್ಲ ಮಾಹಿತಿ
ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡವರಿಗೆ ಅನುಮೋದಿತ ಚಾರಣ ಸ್ಥಳಕ್ಕೆ ಹೋಗಲು ಅವಕಾಶವಿದ್ದು, ಮೊಬೈಲ್‌ನಲ್ಲಿ ಪಥ ದರ್ಶಕ ಆ್ಯಪನ್ನು ಅಳವಡಿಸಬೇಕು. ಇದನ್ನು ಪಾಲಿಸದವರಿಗೆ ಬೇರೆಲ್ಲೂ ಮುಂದಿನ ದಿನಗಳಲ್ಲಿ ಚಾರಣಕ್ಕೆ ಅವಕಾಶ ಕಲ್ಪಿಸದೆ ಅವರ ಚಾರಣವನ್ನು ನಿಬರ್ಂಧಿಸಲಿದೆ. ಇದರ ಜತೆಗೆ ಪ್ರಾಣಿಗಳಿಗೆ ತೊಂದರೆ ಕೊಡಬಾರದು. ಪ್ಲಾಸ್ಟಿಕನ್ನು ಎಲ್ಲಂದರಲ್ಲಿ ಎಸೆದು ಪರಿಸರ ಮಾಲಿನ್ಯ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದು, ಚಾರಣದ ಸಮಯದಲ್ಲಿ ಚಾರಣೆಗ ಅನುಸರಿಸಬೇಕಾದ ಸುರಕ್ಷಿತ ನಿಯಮದ ಬಗ್ಗೆ ಸೂಚಿಸಿಲ್ಲ.
ಸುತ್ತಮುತ್ತಲು ಅನೇಕ ಚಾರಣ ಸ್ಥಳಗಳಿವೆ. ಬುಕ್ಕಿಂಗ್ ಮಾಡಿದರು ಸುರಕ್ಷತೆ ಬಗ್ಗೆ ಯಾವುದೇ ರೀತಿ ಮಾಹಿತಿ ಅಳವಡಿಸಿಲ್ಲ, ಸುರಕ್ಷತೆಗಾಗಿ ಇಲಾಖೆ ನಿಯಮ ರೂಪಿಸಬೇಕಿದೆ.
- ಕೆ.ಪ್ರವೀಣ್ ಗೌಡ ಚಾರಣಿಗ, ಬೆಂಗಳೂರು