ಹೊರಗುತ್ತಿಗೆ 
ಬೆಂಗಳೂರು

ರಾಜ್ಯದಲ್ಲಿದ್ದಾರೆ 96,844 ಗುತ್ತಿಗೆ ಸಿಬ್ಬಂದಿ-contract staff

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಒಟ್ಟು 96,844 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ಇತರ ಇಲಾಖೆಗಳಿಂತ ಅತಿ ಹೆಚ್ಚು ಕೃಷಿ ಇಲಾಖೆ (15,824) ಮತ್ತು ಪಶುಸಂಗೋಪನೆ ಇಲಾಖೆಯಲ್ಲಿ(15376) ನೌಕರರು ಕೆಲಸ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನವನ್ನು ಸರ್ಕಾರ ನಿಗದಿಪಡಿಸಿದೆ. ಇದನ್ನು ಕಾರ್ಮಿಕ ಇಲಾಖೆ ಸುತ್ತೋಲೆ ಹೊರಡಿಸಿ ಜಾರಿಗೆ ತಂದಿದೆ. ಖಾಸಗಿ ಏಜೆನ್ಸಿ ಮೂಲಕ ನೌಕರರನ್ನು ನೇಮಿಸುವ ವ್ಯವಸ್ಥೆಯನ್ನು ಹೊರಗುತ್ತಿಗೆ ಎಂದು ಕರೆಯಲಾಗುತ್ತದೆ. ಅದರಲ್ಲಿ ನೌಕರರಿಗೆ ವೇತನ ಪಾವತಿ ಸೇರಿ ಸೌಲಭ್ಯ ನೀಡುವ ಹೊಣೆಗಾರಿಗೆ ಸರ್ಕಾರಕ್ಕಿರುವುದಿಲ್ಲ. ಖಾಸಗಿ ಸಂಸ್ಥೆಗೆ ನಿಗದಿ ಮಾಡಿರುವ ಶುಲ್ಕ ಪಾವತಿಸಿದರೆ ನೌಕರರಿಗೆ ನೀಡಬೇಕಾದ ಸೌಲಭ್ಯ ಆ ಸಂಸ್ಥೆಯೇ ನೀಡುತ್ತದೆ. ಒಳಗುತ್ತಿಗೆ ನೌಕರರು, ಸರ್ಕಾರದಿಂದಲೇ ಗುತ್ತಿಗೆ ಆಧಾರದಲ್ಲಿ ನೇಮಕವಾಗಲಿದ್ದಾರೆ. ಅವರಿಗೆ ವೇತನ, ಪಿಎಫ್ ಸೇರಿ ಇತರ ಸೌಲಭ್ಯವನ್ನು ಆಯಾ ಇಲಾಖೆಗಳು ನೀಡಲಿವೆ. ಆದರೆ, ಅವರು ಸರ್ಕಾರಿ ನೌಕರರಾಗಿರುವುದಿಲ್ಲ.
ಆದರೆ, ಖಾಸಗಿ ಏಜೆನ್ಸಿಗಳು, ಬಹುತೇಕ ಹೊರಗುತ್ತಿಗೆ ನೌಕರರಿಗೆ ಸರಿಯಾಗಿ ಸಮಯಕ್ಕೆ ವೇತನ, ಪಿಂಚಣಿ, ಇಎಸ್‌ಐ ಸೌಲಭ್ಯ ನೀಡುತ್ತಿಲ್ಲ. ಸೇವಾ ಭದ್ರತೆ ಒದಗಿಸುತ್ತಿಲ್ಲ. ಹಾಗಾಗಿ, ಈ ಸಮಸ್ಯೆಗಳಿಗೆ ಮುಕ್ತಿ ನೀಡಲು ಸರ್ಕಾರಿ ಇಲಾಖೆ ಮತ್ತು ಅದರ ಅಧೀನ ಸಂಸ್ಥೆಗಳಲ್ಲಿ ಹೊರಗುತ್ತಿಗೆ ನೌಕರರ ನೇಮಕ ಪದ್ಧತಿಯನ್ನು 2028ರ ಮಾರ್ಚ್‌ನೊಳಗೆ ಸಂಪೂರ್ಣ ನಿಲ್ಲಿಸಲು ಈಗಾಗಲೇ ರಾಜ್ಯ ಸಚಿವ ಸಂಪುಟ ಉಪಸಮಿತಿ ನಿರ್ಣಯಿಸಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಏಜೆನ್ಸಿಗಳ ಮೂಲಕ ಬಹುದೊಡ್ಡ ಸಂಖ್ಯೆಯಲ್ಲಿ ನೇಮಕಗೊಂಡಿರುವ ಹೊರಗುತ್ತಿಗೆ ಸೇವೆಯನ್ನು ಈ ಗಡುವಿನೊಳಗೆ ಹಂತಹಂತವಾಗಿ ನಿಲ್ಲಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.
ಗುತ್ತಿಗೆ, ಹೊರಗುತ್ತಿಗೆ ಸಿಬ್ಬಂದಿ ವಿವರ:
ಕೃಷಿ-15,824, ಪಶುಸಂಗೋಪನೆ-15,376, ಹಿಂದುಳಿದ ವರ್ಗಗಳ ಕಲ್ಯಾಣ-11,424, ಸಹಕಾರ 6,511, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ-5,753, ಇ-ಆಡಳಿತ-5,686, ಪರಿಸರ ಮತ್ತು ಜೀವಶಾಸ-3,579, ಇಂಧನ-3,403, ಆರ್ಥಿಕ -3,314, ಮೀನುಗಾರಿಕೆ-2,794, ಆಹಾರ - 2,759, ಅರಣ್ಯ-2744, ಕೈಮಗ್ಗ ಮತ್ತು ಜವಳಿ-2,724, ಆರೋಗ್ಯ-2,286, ಉನ್ನತ ಶಿಕ್ಷಣ-1,603, ಒಳಾಡಳಿತ-1,570, ತೋಟಗಾರಿಕೆ-1,514, ವಸತಿ-1,305, ವಾರ್ತೆ-545, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ-492, ಮೂಲಭೂತ ಸೌಕರ್ಯ-467, ಕನ್ನಡ ಮತ್ತು ಸಂಸ್ಕೃತಿ-465, ಕಾರ್ಮಿಕ 397, ಕಾನೂನು, ನ್ಯಾಯಮತ್ತು ಮಾನವ ಹಕ್ಕುಗಳ-369, ಭಾರಿ ನೀರಾವರಿ-337, ಭಾರಿ ಮತ್ತು ಮಧ್ಯಮ ಕೈಗಾರಿಕೆ-314, ವೈದ್ಯಕೀಯ ಶಿಕ್ಷಣ-305, ಗಣಿ ಮತ್ತು ಭೂವಿಜ್ಞಾನ-303, ಸಣ್ಣ ನೀರಾವರಿ-294, ಅಲ್ಪಸಂಖ್ಯಾತರ ಕಲ್ಯಾಣ-238, ಸಂಸದೀಯ ವ್ಯವಹಾರಗಳು-221, ಯೋಜನೆ, ಸಾಂಖ್ಯಿಕ ವಿಜ್ಞಾನ ಮತ್ತು ತಂತ್ರಜ್ಞಾನ-208, ಲೋಕೋಪಯೋಗಿ-202, ಕಂದಾಯ 171, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್- 169, ಪರಿಶಿಷ್ಟಜಾತಿಗಳ ಕಲ್ಯಾಣ-154, ಪರಿಶಿಷ್ಟ ಪಂಗಡಗಳ ಕಲ್ಯಾಣ-143, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ-143, ರೇಷ್ಮೆ-115, ಉದ್ಯಮಶೀಲತೆ ಮತ್ತು ಜೀವನೋಪಾಯ- 107, ಸಣ್ಣ ಕೈಗಾರಿಕೆ-101, ಪ್ರವಾಸೋದ್ಯಮ-88, ಸಾರಿಗೆ-88, ನಗರಾಭಿವೃದ್ಧಿ-70, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ-57, ಯುವಜನ ಸೇವೆಗಳು-28 ಸಿಬ್ಬಂದಿ.