accused Parameshwari 
ಬೆಂಗಳೂರು

ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನಾಭರಣ ಕಳ್ಳತನ

₹25 ಲಕ್ಷ ರೂ. ಮೌಲ್ಯದ 170 ಗ್ರಾಂ ಆಭರಣ ವಶ, ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಂಗಳೂರು: ನಿವೃತ್ತ ಶಿಕ್ಷಕಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿ ಮನೆ ಕೆಲಸದಾಕೆಯನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

ಮಡಿವಾಳ ನಿವಾಸಿ ಪರಮೇಶ್ವರಿ (45) ಬಂಧಿತೆ. ಈಕೆಯಿಂದ 25 ಲಕ್ಷ ರೂ. ಮೌಲ್ಯದ 170 ಗ್ರಾಂ. ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದು, ತನಿಖೆ ಮುಂದುವರಿಸಿದ್ದಾರೆ.

ಆರೋಪಿಯು ಮೂಲತಃ ತಮಿಳುನಾಡಿನವಳು. ಕೆಲ ವರ್ಷಗಳಿಂದ ಬೆಂಗಳೂರಿನಲ್ಲೇ ವಾಸವಾಗಿದ್ದಾಳೆ. ಇಲ್ಲಿ ತರಕಾರಿ ವ್ಯಾಪಾರ ಮಾಡುವ ಜತೆಗೆ ಮನೆ ಕೆಲಸ ಮಾಡಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು, ನಿವೃತ್ತ ಶಿಕ್ಷಕಿಯೊಬ್ಬರ ಮನೆಯಲ್ಲಿ 6 ವರ್ಷಗಳಿಂದ ಮನೆ ಕೆಲಸ ಮಾಡಿಕೊಂಡಿದ್ದಳು. ಈ ಮಧ್ಯೆ 2025ರ ಜೂನ್ ತಿಂಗಳಿಂದ 2026ರ ಸೆಪ್ಟೆಂಬರ್ 18ರ ಅವಧಿಯಲ್ಲಿ 170 ಗ್ರಾಂ ಚಿನ್ನಾಭರಣ ದೋಚಿದ್ದಳು. ಈಕೆಯ ಕೃತ್ಯ ಮನೆ ಮಾಲೀಕರಿಗೆ ತಡವಾಗಿ ಗೊತ್ತಾಗಿದೆ.

ನಿವೃತ್ತ ಶಿಕ್ಷಕಿಯು ಸೆ.18ರಂದು ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ಬಿ.ಎಸ್ ಸತೀಶ್ ಅವರು, ಪ್ರತ್ಯೇಕ ತಂಡ ರಚಿಸಿ ಆರೋಪಿಯನ್ನು ಮಡಿವಾಳ ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದು, ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾಫಿ ಕೊಟ್ಟು ಮನೆ ಹೊರಗೆ ಕೂರಿಸಿ ಕೃತ್ಯ: ದೂರುದಾರರು ಮದುವೆ ಆಗಿಲ್ಲ. ಅವರ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಆರೋಪಿ ಮೇಲೆ ನಂಬಿಕೆಯಿಟ್ಟು ಕೆಲಸಕ್ಕೆ ಸೇರಿಸಿಕೊಂಡಿದ್ದರು. ಆದರೆ ಆಕೆ ಮನೆಯಲ್ಲಿನ ಸಂಪತ್ತು ನೋಡಿ. ಮಾಲೀಕರಿಗೆ ಸಂಜೆ ಸಮಯದಲ್ಲಿ ಟೀ-ಕಾಫಿ ನೀಡಿ ಹೊರಗಡೆ ಕೂರಿಸಿ, ಈಕೆ ಮನೆ-ಕೆಲಸ ಮಾಡುವ ನೆಪದಲ್ಲಿ ಕಳ್ಳತನ ಮಾಡಿದ್ದಳು ಎಂದು ತನಿಖೆಯಲ್ಲಿ ಬಯಲಾಗಿದೆ.