- ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾಹಿತಿ
- ಬಾಕಿ ಕೆಲಸ ಮುಕ್ತಾಯಗೊಳಿಸಲು ಗುತ್ತಿಗೆದಾರರಿಗೆ ಸೂಚನೆ
ಬೆಂಗಳೂರು: ಬಹುವಿಳಂಬಿತ ಈಜೀಪುರ ಮೇಲ್ಸೇತುವೆ ಕಾಮಗಾರಿಯನ್ನು ಅಕ್ಟೋಬರ್ ಅಂತ್ಯಕ್ಕೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಜಿಬಿಎ ಸೂಚಿಸಿದ್ದು, ಆ ವೇಳೆಗೆ ಬಾಕಿ ಕೆಲಸವನ್ನು ತ್ವರಿತವಾಗಿ ಮುಗಿಸುವಂತೆ ತಾಕೀತು ಮಾಡಿದೆ.
ಈಜೀಪುರ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಗುರುವಾರ ಸಭೆ ನಡೆಸಿದ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಈ ನಿರ್ದೇಶನವನ್ನು ನೀಡಿದ್ದಾರೆ.
ಹಾಲಿ ನಡೆದಿರುವ ಕಾಮಗಾರಿಗೆ ವೇಗ ನೀಡಲು ಹೆಚ್ಚುವರಿ ಸಿಬ್ಬಂದಿ ಹಾಗೂ ಕಾರ್ಮಿಕರನ್ನು ನಿಯೋಜಿಸಿಕೊಂಡು ಗಡುವಿನೊಳಗಾಗಿ ಕೆಲಸವನ್ನು ಪೂರ್ಣಗೊಳಿಸಬೇಕು. ಮಡಿವಾಳ ಕಡೆಯ ಸೈಡ್ ರಾಂಪ್ ಕಾಮಗಾರಿ ನಡೆಸುವ ಸ್ಥಳದಲ್ಲಿ ಬೆಸ್ಕಾಂನ ಆರ್‌ಎಂಯು ಅನ್ನು ಶುಕ್ರವಾರವೇ ಸ್ಥಳಾಂತರಿಸಬೇಕು. ಆ ಬಳಿಕ ಕೇಂದ್ರೀಯ ಸದನದ ಎದುರಿರುವ ಮೂರು ಮರಗಳನ್ನು 4 ದಿನಗಳ ಒಳಗಾಗಿ ಕಟಾವು ಮಾಡಿ ರ‌್ಯಾಂಪ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಹೆಚ್ಚುವರಿ ಸಿಬ್ಬಂದಿ ಬಳಸಲು ಸೂಚನೆ
ದೊಮ್ಮಲೂರು ಕಡೆಯ ಡೌನ್ ರಾಂಪ್ ಕಾಮಗಾರಿ ಶೇ.70 ಪೂರ್ಣಗೊಂಡಿದ್ದು, ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿಕೊಂಡು 15 ದಿನಗಳೊಳಗೆ ಬಾಕಿ ಕೆಲಸವನ್ನು ಪೂರ್ಣಗೊಳಿಸಬೇಕು. ಅದಾದ ಬಳಿಕ ಸರ್ಜಾಪುರ ಕಡೆಯ ಡೌನ್ ರಾಂಪ್ ಕಾಮಗಾರಿಯನ್ನು 15 ದಿನಗಳ ಒಳಗಾಗಿ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ.
ಈಜೀಪುರ ಸಿಗ್ನಲ್ ಕಡೆಯಲ್ಲಿ ಅಳವಡಿಸುತ್ತಿರುವ 4 ಸ್ಪಾನ್ಸ್ ಲಾಂಚಿಂಗ್ ಕಾರ್ಯವನ್ನು ಆರಂಭಿಸಿದ್ದು, 2 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಐದು ಪೋರ್ಟಲ್ ಫ್ರೇಮ್ಗಳ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ಅಕ್ಟೋಬರ್ ಅಂತ್ಯದೊಳಗಾಗಿ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.
ಕಾಮಗಾರಿ ಪ್ರಗತಿಯ ವಿವರ:
ಈಜೀಪುರ ಮೇಲ್ಸೇತುವೆ 2.59 ಕಿ.ಮೀ. ಉದ್ದ ಇರಲಿದ್ದು, ಒಟ್ಟು 762 ಸೆಗ್ಮೆಂಟ್‌ಗಳಲ್ಲಿ 731 ಈಗಾಗಲೇ ಕಾಸ್ಟಿಂಗ್ ಮಾಡಲಾಗಿದೆ. ಜೂನ್ ಅಂತ್ಯದೊಳಗಾಗಿ ಸೆಗ್ಮೆಂಟ್‌ಗಳ ಕಾಸ್ಟಿಂಗ್ ಪೂರ್ಣಗೊಳ್ಳಲಿದೆ. 66 ಸ್ಪಾನ್‌ಗಳ ಪೈಕಿ 52 ಪೂರ್ಣಗೊಂಡಿದ್ದು, ಬಾಕಿ 14 ಸ್ಪಾನ್‌ಗಳ ಅಳವಡಿಕೆ ಪ್ರಗತಿಯಲ್ಲಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮುಖ್ಯ ಆಯುಕ್ತರಿಗೆ ಮಾಹಿತಿ ಒದಗಿಸಿದ್ದಾರೆ.
ಸಭೆಯಲ್ಲಿ ಜಿಬಿಎ ಮುಖ್ಯ ಅಭಿಯಂತರ ಡಾ. ರಾಘವೇಂದ್ರ ಪ್ರಸಾದ್ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರಸ್ತೆ ಗುಂಡಿಗಳನ್ನು ಮುಚ್ಚಿ:
ಈಜೀಪುರ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ರಸ್ತೆ ಭಾಗದಲ್ಲಿ ಎಲ್ಲಿಯೂ ರಸ್ತೆ ಗುಂಡಿಗಳು ಇಲ್ಲದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಎಲ್ಲೆಲ್ಲಿ ಗುಂಡಿಗಳು ಬಿದ್ದಿವೆಯೋ ಅವುಗಳನ್ನು ಕೂಡಲೇ ಮುಚ್ಚಬೇಕು. ಜತೆಗೆ ಮಳೆಗಾಲ ಆರಂಭವಾಗುತ್ತಿದ್ದು, ಎರಡೂ ಬದಿಯ ಚರಂಡಿಗಳಲ್ಲಿ ಸಂಪೂರ್ಣ ಹೂಳೆತ್ತಿ ಸರಾಗವಾಗಿ ನೀರು ಹರಿದು ಹೋಗುವ ವ್ಯವಸ್ಥೆ ಮಾಡಬೇಕು. ಮಳೆಗಾಲದ ವೇಳೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಯಾವ ಭಾಗದಲ್ಲಿಯೂ ಜಲಾವೃತವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯ ಆಯುಕ್ತರು ಗುತ್ತಿಗೆದಾರರಿಗೆ ನಿರ್ದೇಶನ ನೀಡಿದ್ದಾರೆ.