ಬೆಂಗಳೂರು: ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಯುವತಿಯ ಶವಪತ್ತೆಯಾಗಿದ್ದ ಕುರಿತು ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಿದ್ದ ಪೊಲೀಸರ ಅಂತಿಮ ತನಿಖಾ ವರದಿಯಲ್ಲಿ ಸಾವಿನ ಅಸಲಿ ಕಾರಣ ಬಯಲಾಗಿದೆ.
ಜಾರ್ಖಂಡ್ ಮೂಲದ ಯುವತಿ ಪೂಜಾ ದತ್ತಾ(34) ಕಳೆದ ಏಪ್ರಿಲ್ ತಿಂಗಳಲ್ಲಿ ಮೃತಪಟ್ಟಿದ್ದರು. ಈ ವೇಳೆ ಆಡುಗೋಡಿ ಠಾಣೆ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಇದು ಹತ್ಯೆ ಅಥವಾ ಆತ್ಮಹತ್ಯೆ ಎಂಬುದಾಗಿ ಶಂಕಿಸಿದ್ದರು. ಈ ಪ್ರಕರಣದ ಕುರಿತು ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶಿಟ್ ಸಲ್ಲಿಸಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯ (ಎ್ಎಸ್ಎಲ್) ವರದಿಯಲ್ಲಿ ಪೂಜಾ ದತ್ತಾ ಅವರ ಸಾವಿಗೆ ಯಾವುದೇ ಬಾಹ್ಯ ಹಲ್ಲೆಗಳು ನಡೆದಿಲ್ಲ. ಯುವತಿ ಶ್ವಾಸಕೋಶದ ವೈಫಲ್ಯ ಹಾಗೂ ದೇಹದ ನರಗಳಲ್ಲಿ ರಕ್ತ ಹೆಪ್ಪುಗಟ್ಟಿರುವುದೇ ಸಾವಿಗೆ ಕಾರಣವಾಗಿದೆ ಎಂದು ವರದಿಯಲ್ಲಿ ದೃಢವಾಗಿದೆ. ಅಷ್ಟೇ ಅಲ್ಲದೆ, ಮೃತ ಯುವತಿ ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ.
ಕಳೆದ ಏಪ್ರಿಲ್ 27ರಂದು ಆಡುಗೋಡಿ ಠಾಣೆ ವ್ಯಾಪ್ತಿಯ ಮುನಿಕೃಷ್ಣಪ್ಪ ಲೇಔಟ್ನಲ್ಲಿ ವಾಸವಾಗಿದ್ದ ಪೂಜಾ ದತ್ತಾ ಅವರ ಮೃತದೇಹ ಪತ್ತೆಯಾಗಿತ್ತು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪೂಜಾ, ಕಳೆದ ಮೂರು ವರ್ಷಗಳಿಂದ ಆ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಮನೆಯಿಂದ ತೀವ್ರ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ್ದ ಅಕ್ಕ-ಪಕ್ಕದ ನಿವಾಸಿಗಳು ಮತ್ತು ಮನೆ ಮಾಲಕಿ ಜಾನಕಮ್ಮ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರ ಸಮ್ಮುಖದಲ್ಲಿ ಬಾಗಿಲು ತೆರೆದು ನೋಡಿದಾಗ ಪೂಜಾಳ ಮೃತದೇಹ ವಿವಸ್ತ್ರವಾಗಿ, ರಕ್ತದ ಮಡುವಿನಲ್ಲಿ ಬಿದ್ದಿರುವಂತೆ ಕಂಡುಬಂದಿತ್ತು. ಮನೆಯ ಗೋಡೆಗಳ ಮೇಲೆಲ್ಲಾ ಕಾಗದಗಳ ಮೇಲೆ ಬರೆದ ಬರಹಗಳನ್ನು ಅಂಟಿಸಲಾಗಿತ್ತು ಮತ್ತು ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದವು. ಇದೀಗ ಪ್ರಕರಣದ ತನಿಖೆ ನಡೆಸಿ ಎಫ್ಎಸ್ಎಲ್ ವರದಿಯ ಆಧರಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.