ಬೆಂಗಳೂರು

ಬರದ ವಿಪತ್ತು, ಆಹಾರಕ್ಕೆ ಆಪತ್ತು

ಮುಂಗಾರು ಮಳೆಯ ಅಭಾವ ಹಾಗೂ ಸುದಿರ್ಘ ಒಣ ಹವೆ ಕೃಷಿ ವಲಯವನ್ನು ತಲ್ಲಣಗೊಳಿಸಿದ್ದು ಶೇ. 82 ರಷ್ಟು ಪ್ರದೇಶದ ಬೆಳೆ ಹಾನಿಗೀಡಾಗಿ ದೊಡ್ಡ ಪ್ರಮಾಣದ ಆರ್ಥಿಕ ನಷ್ಟವಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ತಿಳಿಸಿದರು.

- ಬರ ಪರಿಹಾರ ಕೋರಿ ಕೇಂದ್ರಕ್ಕೆ ಮೂರನೇ ಮನವಿ ಪತ್ರ

- ಕೇಂದ್ರದ ಅನುದಾನ ಕಾಯದೆ ರಾಜ್ಯದಿಂದಲೇ ಕ್ರಮ

- ರೈತರಿಗೆ ₹2,500 ಪರಿಹಾರ ನೀಡಲು ₹1,250 ಕೋಟಿ ವೆಚ್ಚ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಬರಗಾಲದ ಹಿನ್ನೆಲೆಯಲ್ಲಿ ಈ ವರ್ಷ ರಾಜ್ಯದಲ್ಲಿ ಆಹಾರ ಉತ್ಪಾದನೆ ಪ್ರಮಾಣ ತೀವ್ರ ಕುಂಠಿತ ಆಗಿದೆ ಎಂದು ಕಂದಾಯ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಕಳವಳ ವ್ಯಕ್ತಪಡಿಸಿದ್ದಾರೆ.

ಮುಂಗಾರು ಮಳೆಯ ಅಭಾವ ಹಾಗೂ ಸುದಿರ್ಘ ಒಣ ಹವೆ ಕೃಷಿ ವಲಯವನ್ನು ತಲ್ಲಣಗೊಳಿಸಿದ್ದು ಶೇ. 82 ರಷ್ಟು ಪ್ರದೇಶದ ಬೆಳೆ ಹಾನಿಗೀಡಾಗಿ ದೊಡ್ಡ ಪ್ರಮಾಣದ ಆರ್ಥಿಕ ನಷ್ಟವಾಗಿದೆ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯಾದ್ಯಂತ ಪ್ರವಾಸ ಮಾಡಿದ ವೇಳೆ ಭತ್ತ, ಕಬ್ಬು, ಹತ್ತಿ, ಜೋಳ, ರಾಗಿ, ಮೆಕ್ಕೆಜೋಳ,ಶೇಂಗಾ ಸೇರಿ ಬಹುತೇಕ ಬೆಳೆಗಳು ಬಾಡಿವೆ. ಮೇವು ಹಾಗೂ ನೀರು ಕೊರತೆಯಿಂದ ಜಾನುವಾರುಗಳ ಪೋಷಣೆಗೂ ತೊಂದರೆಯಾಗಿದೆ ಎಂದರು.

ಈ ಸಂಕಷ್ಟ ನಿಭಾಯಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದು ಬರ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಮೂರನೇ ಮನವಿ ಪತ್ರ ಬರೆಯಲಾಗುತ್ತಿದೆ. ಎರಡು ಮೂರು ದಿನಗಳಲ್ಲಿ ರವಾನಿಸಲಾಗುವುದು ಎಂದು ಪರಮೇಶ್ವರ ತಿಳಿಸಿದರು.

ಕೇಂದ್ರ ಸರ್ಕಾರ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಬರಪೀಡಿತ ಪ್ರದೇಶಗಳನ್ನು ಘೋಷಿಸಿ ಬೆಳೆ ಹಾಗೂ ಇತರ ನಷ್ಟಗಳ ಅಂದಾಜು ಸಿದ್ಧಪಡಿಸಲಾಗಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿಗಳ ಅನ್ವಯವೇ ಪರಿಹಾರ ಕೋರಲಾಗುತ್ತಿದೆ

ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲು ಮುಖ್ಯಮಂತ್ರಿ, ನಾನು ಅಥವಾ ನಿಯೋಗ ತೆರಳುವ ಬಗ್ಗೆ ಸಿಎಂ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಹಿಂದೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಪ್ರಸ್ತಾಪ ಮಾಡಲಾಗಿತ್ತು. ವಿರೋಧ ಪಕ್ಷದವರು ಭಿನ್ನ ನಿಲುವು ವ್ಯಕ್ತಪಡಿಸಿದ್ದರಿಂದ ಮುಂದಿನ ನಡೆ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಹೇಳಿದರು.

ಉತ್ತರ ಕರ್ನಾಟಕ ಸೇರಿ ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಪರಿಶೀಲಿಸಲಾಗಿದೆ

ರೈತರೊಂದಿಗೆ ಚಚರ್ಚಿಸಲಾಗಿದೆ. ಇತ್ತೀಚೆಗೆ ಕೆಲ ಪ್ರದೇಶಗಳಲ್ಲಿ ಮಳೆಯಾಗಿದ್ದರೂ ಬರದ ತೀವ್ರತೆ ಕಡಿಮೆಯಾಗಿಲ್ಲ ಎಂದು ಹೇಳಿದರು.

ಈಗಾಗಲೇ ಹಲವೆಡೆ ಟ್ಯಾಂಕರ್ ಮತ್ತು ಖಾಸಗಿ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ನೀರಿನ ಮೂಲಗಳೇ ಬತ್ತಿಹೋದರೆ ಟ್ಯಾಂಕರ್‌ಗಳಿಗೆ ನೀರು ತುಂಬಿಸಿ ಪೂರೈಸುವುದೂ ಕಷ್ಟವಾಗಲಿದೆ. ಪರಿಸ್ಥಿತಿ ಆ ಹಂತಕ್ಕೆ ತಲುಪುತ್ತಿರುವುದು ಆತಂಕಕಾರಿ ಆಗಿದೆ ಎಂದರು.

ಕೇಂದ್ರ ಸರ್ಕಾರದಿಂದ ಪರಿಹಾರ ಬಿಡುಗಡೆಯಾದರೆ ಸಂಕಷ್ಟದಲ್ಲಿರುವ ರೈತರು ಹಾಗೂ ಇತರ ಸಂತ್ರಸ್ತರಿಗೆ ನೆರವು ಒದಗಿಸಲು ಅನುಕೂಲವಾಗಲಿದೆ. ತಡ ಮಾಡದೆ ಅಗತ್ಯ ಅನುದಾನ ನೀಡಲು ಕೋರಲಾಗಿದೆ.

ಕೇಂದ್ರ ಸರ್ಕಾರದ ಅನುದಾನಕ್ಕೆ ಕಾಯದೆ ರಾಜ್ಯ ಸರ್ಕಾರ ತನ್ನ ಸಂಪನ್ಮೂಲಗಳಿಂದಲೇ ಬರ ಪರಿಹಾರ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುತ್ತಿದೆ. ಕುಡಿಯುವ ನೀರಿನ ಪೂರೈಕೆಗೆ ಈಗಾಗಲೇ ಅನುದಾನ ಒದಗಿಸಲಾಗಿದೆ.

ಅಗತ್ಯವಿರುವ ಕಡೆ ಟ್ಯಾಂಕರ್ ಹಾಗೂ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ ಎಂದು ವಿವರಿಸಿದರು.

*ವಿಬಿಜಿ ರಾಮ್‌ಜಿಗೆ ಕೇಂದ್ರದ ನೆರವಿಲ್ಲ * ಬಾಕ್ಸ್

ದುಡಿವ ಕೈಗಳಿಗೆ ಕೆಲಸ ನೀಡಲು ವಿಬಿ ಜಿ ರಾಮ್ ಜಿ ಯೋಜನೆಯಡಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಇದುವರೆಗೆ ಒಂದು ಪೈಸೆಯೂ ಅನುದಾನ ಬಂದಿಲ್ಲ. ಆದರೂ ರಾಜ್ಯ ಸರ್ಕಾರ ತನ್ನ ಸಂಪನ್ಮೂಲಗಳಿಂದ ಹಣ ಒದಗಿಸಿ ಕಾಮಗಾರಿ ಮುಂದುವರಿಸುತ್ತಿದೆ ಎಂದು ಡಿಸಿಎಂ ಹೇಳಿದರು.

ರೈತರಿಗೆ ತಲಾ 2,500 ರೂ. ನೀಡಲು ರಾಜ್ಯ ಸರ್ಕಾರಕ್ಕೆ ಸುಮಾರು1,250 ಕೋಟಿ ರೂ. ವೆಚ್ಚ ಆಗುತ್ತಿದ್ದು ಈ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಇಷ್ಟೊಂದು ಆರ್ಥಿಕ ಹೊರೆ ಮಧ್ಯೆ ಜನರು ಹಾಗೂ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.