ಬೆಂಗಳೂರು ನಗರ ವಿಶ್ವವಿದ್ಯಾಲಯ ಬುಧವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ  
ಬೆಂಗಳೂರು

ಎಲ್ಲವೂ ಹಣದಿಂದಲೇ ಎನ್ನುವವರ ಬೇರು ಕಿತ್ತುಹಾಕುವ ಶಕ್ತಿ ಸಂವಿಧಾನಕ್ಕಿದೆ: ಸಚಿವ ಎಚ್.ಕೆ. ಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಸಂವಿಧಾನ ರಾಜಕೀಯ ಆಟಕ್ಕೆ ಮೈದಾನವಲ್ಲ. ಉದಾತ್ತ ಉದ್ದೇಶ ಹೊಂದಿರುವ ಪವಿತ್ರ ಗ್ರಂಥ
  • ದೇಶದ ಸಂಪತ್ತು ಒಬ್ಬ ವ್ಯಕ್ತಿ, ಕೆಲವು ಗುಂಪಿನೊಳಗೆ ಸಿಗಬಾರದು. ಆದರೆ, ದೇಶದ ಶೆ.1ರಷ್ಟು ಜನರ ಕೈಯಲ್ಲಿ ಶೇ.40ರಷ್ಟು ಸಂಪತ್ತಿದೆ.
  • ದೇಶದ ಶೇ.26ರಷ್ಟು ಸಂಪತ್ತು ಕೇವಲ 100 ಜನರ ಕೈಯಲ್ಲಿ ಅಧಿಕಾರವಿದೆ. ದೇಶದ ಒಟ್ಟು ಆದಾಯದಲ್ಲಿ 100ರ ಕೈಯಲ್ಲಿ ಶೇ.22.06ರಷ್ಟಿದೆ
ಬೆಂಗಳೂರು: ಎಲ್ಲವನ್ನೂ ಹಣದಿಂದ ನಿಭಾಯಿಸಬಹುದೆಂಬ ಕಲ್ಪನೆಯನ್ನು ಬೇರು ಸಮೇತ ಕಿತ್ತುಹಾಕುವ ತಾಕತ್ತು ಸಂವಿಧಾನಕ್ಕಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯ ಬುಧವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಸಂಪತ್ತು ಒಬ್ಬ ವ್ಯಕ್ತಿ, ಕೆಲವು ಗುಂಪಿನೊಳಗೆ ಸಿಗಬಾರದು.ಆದರೆ, ಕಳೆದ 75 ವರ್ಷದಲ್ಲಿ ಸಂವಿಧಾನದ ಕಲಂ 39 ಬಿ ಮತ್ತು ನಿಯಮಗಳನ್ನು ಉಲ್ಲಂಸಿ ದೇಶದ ಶೆ.1ರಷ್ಟು ಜನರ ಕೈಯಲ್ಲಿ ಶೇ.40ರಷ್ಟು ಸಂಪತ್ತಿದೆ. ದೇಶದ ಶೇ.26ರಷ್ಟು ಸಂಪತ್ತು ಕೇವಲ 100 ಜನರ ಕೈಯಲ್ಲಿ ಅಧಿಕಾರವಿದೆ. ದೇಶದ ಒಟ್ಟು ಆದಾಯದಲ್ಲಿ 100ರ ಕೈಯಲ್ಲಿ ಶೇ.22.06ರಷ್ಟಿದೆ ಎಂದರು.
ಸಂವಿಧಾನ ರಾಜಕೀಯ ಆಟಕ್ಕೆ ಮೈದಾನವಲ್ಲ. ಉದಾತ್ತ ಉದ್ದೇಶ ಹೊಂದಿರುವ ಪವಿತ್ರ ಗ್ರಂಥವಾಗಿದೆ. ಸಂವಿಧಾನ ದಿನವನ್ನು ಹಬ್ಬದಂತೆ ಆಚರಿಸಿ ಪಟಾಕಿ ಹೊಡೆಯುವುದಲ್ಲ. ಆತ್ಮಾವಲೋಕನ ಮಾಡಿಕೊಳ್ಳುವ ಸಮಯವಾಗಿದೆ. ಹಾಗೆಯೇ ಸಂವಿಧಾನ ಎನ್ನುವುದು ಪೂಜಿಸುವ ವಸ್ತುವಲ್ಲ, ಅನುಷ್ಠಾನ ಮಾಡುವ ಪ್ರತಿಜ್ಞೆ ಮಾಡಬೇಕಿದೆ ಎಂದು ಹೇಳಿದರು.

ಮೀಸಲಾತಿ ನೀಡದೆ ನಿರ್ಲಕ್ಷ್ಯ

ದುರ್ದೈವ ಎಂದರೆ ಕಳೆದ 75 ವರ್ಷಗಳಲ್ಲಿ ನಮ್ಮ ಸಂವಿಧಾನವನ್ನು ಸ್ವಲ್ಪ ಮಟ್ಟಿಗೆ ಅಗೌರವಿಸಿದ್ದೇವೆ. ಕೆಲವರು ಇದನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಮತ್ತೆ ಕೆಲವರು ತಿರುಚಿದ್ದಾರೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಳೆದ 20 ವರ್ಷಗಳಿಂದ ಸಂವಿಧಾನದ ಸದಾಶಯವಾಗಿರುವ ಪರಿಶಿಷ್ಟ ಜಾತಿ/ಪಂಗಡಗಳ ಮೀಸಲಾತಿಯನ್ನು ನಿರ್ಲಕ್ಷಿಸಿ ಹೊರಗುತ್ತಿಗೆನೀಡಲಾಗುತ್ತಿದೆ. ಸ್ವಾತಂತ್ರ್ಯ, ಸರ್ಕಾರದಲ್ಲಿ ಅವಕಾಶ, ಉದ್ಯೋಗ, ಮೀಸಲಾತಿ ನೀಡುವ ಕಲಂ 14, 15 ಮತ್ತು 309 ಅನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಹೊರಗುತ್ತಿಗೆಯನ್ನು ಖಾಸಗಿಯವರ ಕೈಗೆ ಕೊಟ್ಟಿರುವುದು ದುರ್ದೈದ ಸಂಗತಿಯಾಗಿದೆ. ಇದನ್ನು ಬದಲಾಯಿಸುವ ಪ್ರಯತ್ನದಲ್ಲಿ ಸರ್ಕಾರವಿದೆ ಎಂದರು.
ಕಾರ್ಯಕ್ರಮದಲ್ಲಿ ಕುಲಸಚಿವ ನವೀನ್ ಜೋಸ್ೆ, ರಾಜ್ಯ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ನಿರ್ದೇಶಕ ಪ್ರೊ. ಸಿ.ಎಸ್. ಪಾಟೀಲ್, ಇಲಾಖೆ ಕಾರ್ಯದರ್ಶಿ ಜಿ. ಶ್ರೀಧರ್, ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ. ಕೆ.ಆರ್. ಜಲಜಾ ಉಪಸ್ಥಿತರಿದ್ದರು.

ಸಂವಿಧಾನ ಎನ್ನುವುದು ಕೇವಲ ಪುಸ್ತಕವಲ್ಲ, ಪರಿವರ್ತನೆಯಾಗಿದೆ. ಕೇವಲ ದತ್ತಾಂಶವಲ್ಲ, ಸಾಮಾಜಿಕ ನ್ಯಾಯ ಕೊಡಿಸುವುದಾಗಿದೆ. ಹೀಗಾಗಿ, ಎಲ್ಲ ಕ್ಷೇತ್ರದಲ್ಲಿಯೂ ಇದನ್ನು ಅನುಷ್ಠಾನ ಮಾಡಬೇಕಿದೆ.- ಪ್ರೊ. ಬಿ. ರಮೇಶ್, ಬೆಂ.ನಗರ ವಿವಿ ಕುಲಪತಿ