- ಅಧಿಕಾರಿಗಳಿಗೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಸೂಚನೆ
- ಎಚ್‌ಎಸ್‌ಆರ್ ಲೇಔಟ್, ಅರಕೆರೆಯಲ್ಲಿ ಶಾಸಕರ ಜತೆ ಸ್ಥಳ ಪರಿಶೀಲನೆ
ಬೆಂಗಳೂರು: ಬೊಮ್ಮನಹಳ್ಳಿ ವ್ಯಾಪ್ತಿಯ ಸೋಮಸುಂದರಪಾಳ್ಯ ಕೆರೆ ಸಹಿತ ವಿವಿಧ ಕೆರೆಗಳಿಗೆ ತಂತಿ ಬೇಲಿ ಅಳವಡಿಕೆ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಟೆಂಡರ್ ಕರೆಯುವಂತೆ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಬೊಮ್ಮನಹಳ್ಳಿ ಮತಕ್ಷೇತ್ರದ ಶಾಸಕರೊಂದಿಗೆ ಬುಧವಾರ ಮುಂಜಾನೆ ಎಚ್‌ಎಸ್‌ಆರ್ ಲೇಔಟ್‌ನ ಟ್ವಿನ್ ಪಾರ್ಕ್ ಹಾಗೂ ಅರಕೆರೆ ಉದ್ಯಾನದಲ್ಲಿ ಸ್ಥಳೀಯ ನಿವಾಸಿಗಳ ಕುಂದು-ಕೊರತೆ ಆಲಿಕೆ ವೇಳೆ ಅವರು ಈ ನಿರ್ದೇಶನವನ್ನು ನೀಡಿದರು.
ಐದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಒಳಾಂಗಣ ಕ್ರೀಡಾಂಗಣವು ಸೂಕ್ತ ನಿರ್ವಹಣೆಯಿಲ್ಲದೆ ಪುಂಡರ ತಾಣವಾಗಿದೆ. ಕಾನೂನುಬಾಹಿರ ಕೃತ್ಯಗಳು ನಡೆಯದಂತೆ ತಕ್ಷಣವೇ ಅದನ್ನು ದುರಸ್ತಿಪಡಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಬನ್ನೇರುಘಟ್ಟ ರಸ್ತೆಯ ಜೆ.ಡಿ.ಮರದಿಂದ ಐಐಎಂಬಿ ವರೆಗಿನ ರಸ್ತೆಯ ವೈಟ್ ಟಾಪಿಂಗ್ ಹಾಗೂ ದುರಸ್ತಿ ಕಾಮಗಾರಿಯನ್ನು ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗದಂತೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಸಿಂಗಸಂದ್ರ ಹಾಗೂ ಎಇಸಿಎಸ್ ಲೇಔಟ್‌ನ ಪಾಲಿಕೆಯ ವಲಯ ಸರಹದ್ದಿಗೆ ಸಂಬಂಧಿಸಿದ ಗೊಂದಲವನ್ನು ಪರಿಹರಿಸುವಂತೆ ಮುಖ್ಯ ಆಯುಕ್ತರು ಸೂಚನೆ ನೀಡಿದರು.
ಕಾಲುವೆಗಳ ಹೂಳೆತ್ತಲು ಸೂಚನೆ:
ಮಡಿವಾಳ, ಬಿಟಿಎಂ ಲೇಔಟ್ ಹಾಗೂ ಪುಟ್ಟೇನಹಳ್ಳಿ ಭಾಗದಿಂದ ಹರಿದುಬರುವ ಮಳೆ ನೀರು ಎಚ್‌ಎಸ್‌ಆರ್ ಲೇಔಟ್ ಮೂಲಕ ಬೆಳ್ಳಂದೂರು ಕೆರೆಗೆ ಸಾಗಬೇಕಿದೆ. ಮಳೆಗಾಲದಲ್ಲಿ ಸರ್ವೀಸ್ ರಸ್ತೆಯ ಪಕ್ಕದಲ್ಲಿರುವ ಕಾಲುವೆಗಳಲ್ಲಿ ನೀರು ಉಕ್ಕಿ ಮನೆಗಳಿಗೆ ನುಗ್ಗದಂತೆ ತಡೆಯಲು ಪ್ರತ್ಯೇಕ ಚರಂಡಿ ವ್ಯವಸ್ಥೆ ಕಲ್ಪಿಸಬೇಕಿದೆ. ಮಳೆ ನೀರುಗಾಲುವೆಗಳಲ್ಲಿನ ಹೂಳು ಹಾಗೂ ತ್ಯಾಜ್ಯವನ್ನು ತೆರವುಗೊಳಿಸಲು ಸಕ್ಷನ್ ಪಂಪ್ ಹಾಗೂ ರೋಬೋಟಿಕ್ ಯಂತ್ರೋಪಕರಣ ಬಳಸಿಕೊಂಡು ಡಿಸಿಲ್ಟಿಂಗ್ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮಹೇಶ್ವರ ರಾವ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ವೇಳೆ ದಕ್ಷಿಣ ಪಾಲಿಕೆ ಅಪರ ಆಯುಕ್ತ ಡಾ. ನವೀನ್‌ಕುಮಾರ ರಾಜು, ಮುಖ್ಯ ಅಭಿಯಂತರರರಾದ ಬಸವರಾಜ್ ಕಬಾಡೆ, ಮಾಲತಿ ಉಪಸ್ಥಿತರಿದ್ದರು.
200 ಕೋಟಿ ಮೌಲ್ಯದ ಸಿಎ ಸೈಟ್ ಸಂರಕ್ಷಣೆಗೆ ಕ್ರಮ:
ಬಿಡಿಎ ಲೇಔಟ್‌ಗಳಲ್ಲಿರುವ ಸಿಎ ಜಾಗ ಮತ್ತು ಬಿಟಿಎಂ 5ನೇ ಹಂತದ ಬಿಎಂಟಿಸಿ ಬಸ್ ನಿಲ್ದಾಣದ ಜಾಗಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಇವುಗಳನ್ನು ತಕ್ಷಣವೇ ತೆರವುಗೊಳಿಸಬೇಕು. ಭಗವತಿ ಲೇಔಟ್‌ನಲ್ಲಿ ಮನೆ-ಸಂಪ್‌ಗಳಿಗೆ ಹಾನಿಯುಂಟು ಮಾಡುತ್ತಿರುವ ಮರಗಳನ್ನು ತೆರವುಗೊಳಿಸುವಂತೆ ಸ್ಥಳೀಯರ ಮನವಿಗೆ ಪಾಲಿಕೆ ಸ್ಪಂದಿಸಲಿದೆ.
- ಸತೀಶ್ ರೆಡ್ಡಿ, ಬೊಮ್ಮನಹಳ್ಳಿ ಶಾಸಕ