solid-waste-tender 
ಬೆಂಗಳೂರು

ಘನತ್ಯಾಜ್ಯ ಟೆಂಡರ್‌ಗೆ ತಾತ್ಕಾಲಿಕ ಬ್ರೇಕ್

ಆರ್.ತುಳಸಿಕುಮಾರ್

ಪ್ರಮುಖ ಮುಖ್ಯಾಂಶಗಳು

  • ಪ್ರತಿಪಕ್ಷಗಳ ರೋಪದಿಂದ ಎಚ್ಚೆತ್ತ ರಾಜ್ಯ ಕಾಂಗ್ರೆಸ್​ ಸರ್ಕಾರ
  • ತನಿಖಾ ವರದಿ ಕೈಸೇರಿದ ಬಳಿಕ ತೀರ್ಮಾನಕ್ಕೆ ಸಿಎಂ ಒಲವು
ಬೆಂಗಳೂರು: ಭಾರಿ ವಿವಾದದ ಕಿಡಿ ಹೊತ್ತಿಸಿರುವ ಬಹುಕೋಟಿ ಮೊತ್ತದ ಘನತ್ಯಾಜ್ಯ ವಿಲೇವಾರಿ ಟೆಂಡರ್ ಅನುಮೋದನೆ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಟೆಂಡರ್‌ನಿಂದಾಗಿ ಕಾಂಗ್ರೆಸ್ ನಾಯಕರಿಗೆ ದೊಡ್ಡ ಮೊತ್ತದ ಕಿಕ್‌ಬ್ಯಾಕ್ ಪಡೆಯಲಾಗಿದೆ ಎಂಬ ಪ್ರತಿಪಕ್ಷಗಳ ಆರೋಪದ ಬೆನ್ನಲ್ಲೇ, ಸಿಎಂ ಈ ಕ್ರಮಕ್ಕೆ ಸೂಚಿಸಿದ್ದಾರೆ. ಕಳೆದ ವಾರ ಆರೋಪ ಕೇಳಿಬಂದ ವೇಳೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ನೇತೃತ್ವದ ನಾಲ್ವರು ಹಿರಿಯ ಅಧಿಕಾರಿಗಳ ತಂಡದ ಮೂಲಕ ತನಿಖೆ ನಡೆಸಿ ವಾರದೊಳಗೆ ವರದಿ ಸಲ್ಲಿಸುವಂತೆ ಆದೇಶ ಹೊರಡಿಸಲಾಗಿತ್ತು. ಈ ವರದಿಯು ಸರ್ಕಾರಕ್ಕೆ ಇನ್ನೂ ಸಲ್ಲಿಕೆಯಾಗಿಲ್ಲ. ಹಾಗಾಗಿ ವರದಿ ಕೈಸೇರಿದ ಬಳಿಕ, ಅದರೊಳಗಿರುವ ಅಂಶಗಳು ಹಾಗೂ ಶಿಫಾರಸು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲು ಸಿಎಂ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

39,437 ಕೋಟಿ ವೆಚ್ಚದ ಟೆಂಡರ್​​:

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ (ಬಿಎಸ್​​ಡಬ್ಲ್ಯುಎಂಎಲ್​) ಜಿಬಿಎ ವ್ಯಾಪ್ತಿಯ ಐದೂ ಪಾಲಿಕೆಗಳಲ್ಲಿ ಮುಂದಿನ ಏಳು ವರ್ಷಕ್ಕೆ ಕಸ ಸಂಗ್ರಹ ಹಾಗೂ ವಿಲೇವಾರಿ ಸಂಬಂಧ 39,437 ಕೋಟಿ ರೂ. ಮೊತ್ತದ ಟೆಂಡರ್​​ ಅಂತಿಮಗೊಳಿಸಿದೆ. ಇದರ ಒಪ್ಪಿಗೆಗಾಗಿ ಸರ್ಕಾರದ ಅನುಮೋದನೆ ರವಾನಿಸಿದ್ದು, ಶೀಘ್ರವೇ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಆದರೆ, ಪ್ರತಿಪಕ್ಷಗಳು ಟೆಂಡರ್​​​ನಲ್ಲಿ ಕಿಕ್​ಬ್ಯಾಕ್​​ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಟೆಂಡರ್​​ ಅನ್ನು ಯಶಸ್ವಿ ಬಿಡ್​​ದಾರರಿಗೆ ಗುತ್ತಿಗೆ ವಹಿಸಿ ಕಾರ್ಯಾದೇಶ ನೀಡಲು ಸರ್ಕಾರ ಯಥಾಸ್ಥಿತಿ ಕಾಯ್ದುಕೊಳ್ಳುವತ್ತ ದೃಷ್ಟಿಹರಿಸಿದೆ. ಜತೆಗೆ ತನಿಖಾ ವರದಿ ಬಂದ ನಂತರ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.