tegada-siri-scheme 
ಬೆಂಗಳೂರು

ರಾಜ್ಯದೆಲ್ಲೆಡೆ ‘ತೇಗದ ಸಿರಿ’ ಯೋಜನೆ ಶೀಘ್ರ ಜಾರಿ: ಸಿಎಂ ಶಿವಕುಮಾರ್ ಹೇಳಿಕೆ

ಪ್ರಮುಖ ಮುಖ್ಯಾಂಶಗಳು

  • ರಾಜ್ಯದೆಲ್ಲೆಡೆ ಪ್ರತಿವರ್ಷ 1 ಕೋಟಿ ಸಸಿಗಳನ್ನು ನೆಡಲು ನಿರ್ಧಾರ
  • ಬಿಡಿಎ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯಿಂದ ಹೊಸ ಯೋಜನೆ ಪ್ರಕಟ
ಬೆಂಗಳೂರು: ರೈತರು ಸೇರಿದಂತೆ ಸಾರ್ವಜನಿಕರೊಡಗೂಡಿ ಪ್ರತಿವರ್ಷ ಒಂದು ಕೋಟಿ ತೇಗದ ಸಿಸಿಗಳನ್ನು ನೆಡುವ ಯೋಜನೆಯನ್ನು ಶೀಘ್ರವೇ ಸರ್ಕಾರ ಅನುಷ್ಠಾನಕ್ಕೆ ತರಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದರು.
ಶ್ರೀಗಂಧದ ಮರಗಳಿಂದ ಆದಾಯ ಪಡೆಯುವ ರೀತಿಯಲ್ಲೇ ತೇಗದ ಮರಗಳನ್ನು ಬೆಳೆಸಿ ಅದರಿಂದ ದೊಡ್ಡ ಮೊತ್ತವನ್ನು ಪಡೆಯಲು ಸಾಧ್ಯವಿದೆ. ಸರ್ಕಾರವೇ ಉಚಿತವಾಗಿ ತೇಗದ ಸಸಿಗಳನ್ನು ನೀಡಲಿದ್ದು, ಅವುಗಳನ್ನು ನಾಗರಿಕರು ಜತನದಿಂದ ಪೋಷಿಸಬೇಕು. ಪ್ರಸ್ತುತ ತೇಗದ ಪ್ರತಿ ಚದರ ಅಡಿಗೆ 7,500 ರೂ. ಇದೆ. ಮುಂದಿನ ದಿನಗಳಲ್ಲಿ ಈ ಮೊತ್ತ ಇನ್ನೂ ಹೆಚ್ಚಬಹುದು. ಕಟಾವಿಗೆ ಬಂದಾಗ ಶೇ.70 ಮೌಲ್ಯವನ್ನು ರೈತರು/ಸಾರ್ವಜನಿಕರಿಗೆ ನೀಡಲಿದ್ದು, ಉಳಿದ ಶೇ.30ಅನ್ನು ಸರ್ಕಾರಕ್ಕೆ ಪಡೆಯಲಾಗುವುದು ಎಂದು ಸಿಎಂ ಬಿಡಿಎ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೋಮವಾರ ತಿಳಿಸಿದರು.
ತೇಗದ ಸಿರಿ ಯೋಜನೆಯನ್ನು ಒಂದು ಜಿಲ್ಲೆಗೆ ಸೀಮಿತಗೊಳಿಸದೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಅನುಷ್ಠಾನಕ್ಕೆ ತರಲಾಗುವುದು. ಪ್ರತಿ ವರ್ಷ ಒಂದು ಕೋಟಿ ಸಸಿಗಳಂತೆ ಹಲವು ವರ್ಷ ಈ ಯೋಜನೆಯನ್ನು ಮುಂದುವರಿಸಿಕೊಂಡು ಹೋಗಲಾಗುವುದು. ಈ ಬಗ್ಗೆ ವಿವರವಾದ ಮಾಹಿತಿಯೊಂದಿಗೆ ಶೀಘ್ರವೇ ಪ್ರಕಟಿಸಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಸಿಎಂ ವಿವರಿಸಿದರು.

ಶ್ರೀಗಂಧದಿಂದ ಹೆಚ್ಚಿನ ಆದಾಯ ಪಡೆದಿರುವೆ:

ಬೆಂಗಳೂರಿನಲ್ಲಿರುವ ನಮ್ಮ ಕಾಲೇಜಿನಲ್ಲಿ ನೂರಾರು ಸಂಖ್ಯೆಯ ಶ್ರೀಗಂದ ಸಸಿಗಳನ್ನು ನೆಡಲಾಗಿತ್ತು. ಅವುಗಳಲ್ಲಿ ಮುಕ್ಕಾಲು ಪಾಲು ಕಟಾವಿಗೆ ಬಂದಿದ್ದು, ಶ್ರೀಗಂಧವನ್ನು ಸರ್ಕಾರಕ್ಕೆ ಮಾರಿ ಹಣ ಪಡೆಯಲಿದ್ದೇನೆ. ಇದೇ ರೀತಿ ಇತರ ರೈತರೂ ಶ್ರೀಗಂಧ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ತೇಗದ ಸಸಿಗಳನ್ನು ನೆಟ್ಟು ನಂತರ ಒಳ್ಳೆಯ ಲಾಭವನ್ನು ಪಡೆಯಬಹುದು ಎಂದು ಸಿಎಂ ಅನಿಸಿಕೆ ವ್ಯಕ್ತಪಡಿಸಿದರು.