- ಅಪಾರ್ಟ್‌ಮೆಂಟ್‌ಗಳ ಖಾತಾ ವಿತರಣೆಗೆ ಟ್ಯಾಕ್ಸ್ ಮುದ್ರಾಂಕ ಶುಲ್ಕದ ಮೇಲೆ ಶೇ.2ರಷ್ಟು ತೆರಿಗೆ ವಸೂಲು
- ಕೇಂದ್ರ ನಗರ ಪಾಲಿಕೆಯ ಆಯುಕ್ತರ ಹೇಳಿಕೆ
ಬೆಂಗಳೂರು: ಕೇಂದ್ರ ನಗರ ಪಾಲಿಕೆಯು ತನ್ನ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಹೊಸದಾಗಿ ಖಾತಾ ಪಡೆದುಕೊಳ್ಳುವ ಅಪಾರ್ಟ್‌ಮೆಂಟ್‌ಗಳನ್ನು ತೆರಿಗೆ ವ್ಯಾಪ್ತಿಗೆ ಸೇರಿಸಲು ಮುಂದಾಗಿದೆ.
ಹೊಸ ಖಾತಾ ವ್ಯವಸ್ಥೆ ಹಾಗೂ ಬಹು ಘಟಕ/ಬಹುಮಹಡಿ ಕಟ್ಟಡಗಳ ಖಾತಾಗಳ ಬಲ್ಕ್ ಅನುಮೋದನೆ ಜಾರಿಗೊಳಿಸುವ ಮೂಲಕ ಅಪಾರ್ಟ್‌ಮೆಂಟ್‌ಗಳು ಹಾಗೂ ಅಭಿವೃದ್ಧಿ ಅಭಿವೃದ್ಧಿ ಯೋಜನೆಗಳನ್ನು ತೆರಿಗೆ ವಲಯಕ್ಕೆ ಸೇರಿಸಲಾಗುವುದು. ಹೊಸದಾಗಿ ಖಾತೆ ನೀಡಲು ಮುದ್ರಾಂಕ ಶುಲ್ಕದ ಮೇಲೆ ಶೇ.2ರಷ್ಟು ತೆರಿಗೆ ವಸೂಲು ಮಾಡಲಾಗುವುದು. ಸರ್ಕಾರ ಹೊರಡಿಸಿರುವ ಆದೇಶವನ್ನು ಇನ್ನು ಮುಂದೆ ಪಾಲಿಕೆ ಮಟ್ಟದಲ್ಲಿ ಅನುಸರಿಸಲಾಗುವುದು ಎಂದು ಕೇಂದ್ರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಕೇಂದ್ರ ಪಾಲಿಕೆಯು ಹಳೇ ಬೆಂಗಳೂರು ಪ್ರದೇಶಗಳನ್ನು ಒಳಗೊಂಡಿದೆ. ಇಲ್ಲಿ ವಿಸ್ತರಣೆಗೆ ಅವಕಾಶ ಇಲ್ಲ. ಬೇರೆ ಪಾಲಿಕೆಗಳಂತೆ ಬಿ ಟು ಎ ಖಾತಾ ನೀಡುವ ಅವಶ್ಯಕತೆ ಬರುವುದಿಲ್ಲ. ಆದರೆ, ಆದಾಯ ಮೂಲ ಹೆಚ್ಚಿಸಿಕೊಳ್ಳಲು ಎ್ಆರ್‌ಎ ಜತೆ ಇನ್ನಿತರ ಮೂಲದ ಮೇಲೆ ಅವಲಂಬನೆ ಹೆಚ್ಚಿದೆ. ಹಾಗಾಗಿ ಬೃಹತ್ ಯೋಜನೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳಿಗೆ ಹೊಸದಾಗಿ ಖಾತಾ ವಿತರಿಸುವ ವೇಳೆ ತೆರಿಗೆ ಬಾಬ್ತನ್ನು ವಸೂಲು ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಿಜಿನೆಸ್ ಕಾರಿಡಾರ್ ಅಭಿವೃದ್ಧಿ:
ಕೇಂದ್ರ ಪಾಲಿಕೆ ವ್ಯಾಪ್ತಿಯ ಪ್ರಮುಖ ಹಾಗೂ ಆಯ್ದ ರಸ್ತೆಗಳನ್ನು ಬಿಜಿನೆಸ್ ಕಾರಿಡಾರ್‌ಗಳಾಗಿ ಅಭಿವೃದ್ಧಿ ಪಡಿಸಲಾಗುವುದು. ಈ ಕಾರಿಡಾರ್‌ಗಳಲ್ಲಿ ಅತ್ಯಾಧುನಿಕ ಮೂಲಸೌಕರ್ಯ ಕಲ್ಪಿಸಿ ಹೆಚ್ಚಿನ ಪ್ರೀಮಿಯಂ ಶುಲ್ಕವನ್ನು ಸಂಗ್ರಹಿಸುವ ಉದ್ದೇಶ ಇದೆ. ಇದರಿಂದ ನಗರದ ಸುಸ್ಥಿರ ಬೆಳವಣಿಗೆ ಹಾಗೂ ಮೂಲಸೌಕರ್ಯ ವೃದ್ಧಿಗೆ ಮರು ಹೂಡಿಕೆ ಮಾಡುವ ಮೂಲಕ ಆರ್ಥಿಕ ಸದೃಢತೆಗೆ ಆದ್ಯತೆ ನೀಡಲಾಗುವುದು. ಇಂತಹ ಪರಿಕಲ್ಪನೆ ಈಗಾಗಲೇ ಮುಂಬೈ, ಹೈದರಾಬಾದ್ ಹಾಗೂ ಇತರ ಮಹಾನಗರಗಳಲ್ಲಿ ಜಾರಿಯಲ್ಲಿದೆ. ಇದೇ ಮಾದರಿಯಲ್ಲಿ ನಮ್ಮಲ್ಲೂ ಅನುಷ್ಠಾನಕ್ಕೆ ತರಲು ಗಮನ ಹರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಿಬಿಡಿ ವ್ಯಾಪ್ತಿಯಲ್ಲಿ ವ್ಯಾಪಾರ /ವಹಿವಾಟು ಜತೆ ಇತರ ವಾಣಿಜ್ಯ ಚಟುವಟಿಕೆ ಹೆಚ್ಚಿರುವುದರಿಂದ ಸಹಜವಾಗಿಯೇ ಜನಸಂಚಾರ ಅಧಿಕಗೊಳ್ಳುತ್ತಿದೆ. ಜನದಟ್ಟಣೆ ಸ್ಥಳಗಳಲ್ಲಿ ನಾಗರಿಕರು ಹಾಗೂ ಪ್ರವಾಸಿಗರಿಗೆ ಕನಿಷ್ಠ ಮೂಲಸೌಕರ್ಯ ಕಲ್ಪಿಸುವುದು ಅನಿವಾರ್ಯವಾಗಿದೆ. ಆದರೆ, ಜಾಗದ ಕೊರತೆ ಇದ್ದು, ಆಯ್ದ ಸ್ಥಳಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಸಂಚಾರ ಪೊಲೀಸರು ಸೂಚಿಸುವ ಸ್ಥಳಗಳಲ್ಲಿ ಹೊಸ ಸ್ಕೈವಾಕ್ ನಿರ್ಮಿಸಲಿದ್ದಾರೆ. ಹಾಲಿ ಸ್ಕೈವಾಕ್‌ಗಳ ನಿರ್ವಹಣೆಗೂ ಗಮನ ಹರಿಸುವ ಜತೆಗೆ ುಟ್‌ಪಾತ್‌ಗಳನ್ನು ಪಾದಚಾರಿಸ್ನೇಹಿ ಆಗಿಸಲು ಬಜೆಟ್‌ನಲ್ಲಿ ವಿಶೇಷ ಯೋಜನೆ ಅಡಕಗೊಳಿಸಿದ್ದು, ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವದು ಎಂದು ರಾಜೇಂದ್ರ ಚೋಳನ್ ವಿವರಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಕಾರ್ಯಚರಿಸುತ್ತಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚದೆ ಮುಂದುವರಿಸಲಾಗುವುದು. ಸಮರ್ಪಕವಾಗಿ ಕೆಲಸ ಮಾಡದ ಕಡೆಗಳಲ್ಲಿ ಗ್ರಾಹಕರಿಗೆ ಗುಣಮಟ್ಟದ ಆಹಾರ ವಿತರಿಸಲು ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕೆಲ ತಿನಿಸು ಒಳಗೊಂಡ ಹೊಸ ಮೆನು ಪರಿಚಯಿಸುವ ಉದ್ದೇಶ ಇದೆ.
- ಎಂ.ಮಹೇಶ್ವರ್ ರಾವ್, ಜಿಬಿಎ ಮುಖ್ಯ ಆಯುಕ್ತ