coffee-production 
ಬೆಂಗಳೂರು

4 ಲಕ್ಷ ಮೆಟ್ರಿಕ್ ಟನ್ ಕಾಫಿ ಉತ್ಪಾದನೆ ಗುರಿ

ಪ್ರಮುಖ ಮುಖ್ಯಾಂಶಗಳು

  • ಬ್ರ್ಯಾಂಡ್ ಮೌಲ್ಯ ಹೆಚ್ಚಳಕ್ಕೆ ಮೋನೋಗ್ರಾಮ್ ಮಾದರಿ ಬಳಕೆ
  • ಭಾರತೀಯ ಕಾಫಿ ಮಂಡಳಿ ಸಿಇಒ ಕೂರ್ಮ ರಾವ್ ಹೇಳಿಕೆ

ಬೆಂಗಳೂರು: ಕರ್ನಾಟಕ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿನ ಬೆಳೆಗಾರರು ಹಾಗೂ ಪಾಲುದಾರರ ಸಹಕಾರದಲ್ಲಿ 2026-27ನೇ ಸಾಲಿನಲ್ಲಿ 4 ಲಕ್ಷ ಮೆಟ್ರಿಕ್ ಟನ್ ಕಾಫಿ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ ಎಂದು ಭಾರತೀಯ ಕಾಫಿ ಮಂಡಳಿ ಸಿಇಒ ಹಾಗೂ ಕಾರ್ಯದರ್ಶಿ ಕೂರ್ಮ ರಾವ್ ತಿಳಿಸಿದರು.


ಕಳೆದ ಐದು ವರ್ಷಗಳಿಂದ ದೇಶದಲ್ಲಿ ಕಾಫಿ ಕ್ಷೇತ್ರ ಶೇ.2.76 ಪ್ರಗತಿ ದಾಖಲಿಸಿದೆ. 2021-22ರಲ್ಲಿ 3.42 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗಿದ್ದರೆ 2025-26ರಲ್ಲಿ 3.73 ಲಕ್ಷ ಮೆಟ್ರಿಕ್ ಟನ್‌ಗೆ ಏರಿತ್ತು. ದೇಶಾದ್ಯಂತ 4.91 ಲಕ್ಷ ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗುತ್ತಿದ್ದು, ಬುಡಕಟ್ಟು ಜನರಿರುವೆಡೆ ಸ್ಥಳೀಯ ತಳಿಗಳನ್ನು ಉತ್ತೇಜಿಸಲಾಗುತ್ತಿದೆ. ಪ್ರಸಕ್ತ ಮುಂಗಾರು ಅವಧಿಯಲ್ಲಿ ಕರ್ನಾಟಕದಲ್ಲಿ ಶೇ.40 ಮಳೆ ಕೊರತೆ ಕಂಡಿದ್ದರೂ, ಬೆಳೆಗೆ ಸಂಕಷ್ಟ ಎದುರಾಗಿಲ್ಲ. ಇದರಿಂದಾಗಿ ಈ ಸಾಲಿನಲ್ಲಿ ಉತ್ತಮ ಇಳುವರಿ ಕೈಸೇರುವ ಸಾಧ್ಯತೆ ಇದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದರು.

2 ಶತಕೊಟಿ ಡಾಲರ್ ಕಾಫಿ ರಫ್ತು:

ಪ್ರಸ್ತುತ ಭಾರತದ ಕಾಫಿಗೆ ವಿಶ್ವದೆಲ್ಲೆಡೆ ಬೇಡಿಕೆ ಇದೆ. ವಿವಿಧ ಬ್ರ್ಯಾಂಡ್ ಮೂಲಕ 140 ದೇಶಗಳಲ್ಲಿ ಕಾಫಿ ಹಾಗೂ ಕಾಫಿ ಮೌಲ್ಯವರ್ಧಿತ ಉತ್ಪನ್ನಗಳು ಮಾರಾಟವಾಗುತ್ತಿದ್ದು, ಭವಿಷ್ಯದಲ್ಲಿ ಇನ್ನಷ್ಟು ದೇಶಗಳಿಗೆ ರಫ್ತು ವಿಸ್ತರಿಸುವ ಗುರಿ ಇದೆ. 2025-26ರಲ್ಲಿ 2 ಶತಕೋಟಿ ಡಾಲರ್ ಮೌಲ್ಯದ ರಫ್ತು ಸಾಧನೆ ಮಾಡಿದ್ದು, ದೇಶದ ಕಾಫಿ ಬೆಳೆಗಾರರು ಹಾಗೂ ರ್ತುದಾರರಿಗೆ ಸರ್ಕಾರ ಹಲವು ಉತ್ತೇಜನಕಾರಿ ಕಾರ್ಯಕ್ರಮಗಳನ್ನು ಪ್ರಕಟಿಸಿ ಅನುಷ್ಠಾನಕ್ಕೆ ತರುವಲ್ಲಿ ನಿರತವಾಗಿದೆ ಎಂದರು.
ದೇಶಾದ್ಯಂತ ಸಣ್ಣ ಹಾಗೂ ಮಧ್ಯಮ ಬೆಳೆಗಾರರಿಂದ ಗುಣಮಟ್ಟದ ಕಾಫಿ ಉತ್ಪನ್ನ ಉತ್ಪಾದಿಸಲು ಹಾಗೂ ಅವರು ಎದಿರುಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸರ್ಕಾರ ಕೆಲ ಕಾರ್ಯಕ್ರಮ ಘೋಷಿಸಿದೆ. ಜತೆಗೆ ಸ್ಕ್ರೀನಿಂಗ್ ಕಮಿಟಿ ಮೂಲಕ ಪಾಲುದಾರರ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ವರದಿಯೊಂದನ್ನು ಕೋರಲಾಗಿದೆ. ವರದಿ ಕೈಸೇರಿದ ಬಳಿಕ ಸರ್ಕಾರ ಸಹಮತದೊಂದಿಗೆ ಜಾರಿಗೊಳಿಸಲಲು ಮಂಡಳಿಯು ಸಿದ್ಧತೆ ನಡೆಸಿದೆ ಎಂದು ಕೂರ್ಮ ರಾವ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಸಿಎಐನ ಅಧ್ಯಕ್ಷೆ ಹಂಸಿನಿ ಅಪ್ಪಾದೊರೈ, ಕಾರ್ಯದರ್ಶಿ ಶ್ರಿಕಾಂತ್ ರಾವ್, ಕಾಫಿ ಮಂಡಳಿಯ ಉಪ ನಿರ್ದೇಶಕ (ಸಂಶೋಧನೆ) ಡಾ. ಪ್ರದೀಪ್ ಬಾಬು ಹಾಜರಿದ್ದರು.

2027ರಲ್ಲಿ ಜಾಗತಿಕ ಕಾಫಿ ಉತ್ಸವ:

ಜಾಗತಿಕ ಮಟ್ಟದಲ್ಲಿ ಭಾರತದ ಕಾಫಿ ಉತ್ಪನ್ನವನ್ನು ಇನ್ನಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಕಾಫಿ ಮಂಡಳಿ ಹಾಗೂ ಸ್ಪೆಷಾಲಿಟಿ ಕಾಫಿ ಅಸೋಸಿಯೇಷನ್ ಆ್ ಇಂಡಿಯಾ (ಎಸ್‌ಸಿಎಐ) ಸಹಯೋಗದಲ್ಲಿ 2027ರ ಫೆ.26ರಿಂದ 28ರ ವರೆಗೆ 3 ದಿನಗಳ ‘ಭಾರತ ಅಂತಾರಾಷ್ಟ್ರೀಯ ಕಾಫಿ ಉತ್ಸವ’ವನ್ನು ಸಂಘಟಿಸಲಾಗುತ್ತಿದೆ. ಬೆಂಗಳೂರಿನ ಅರಮನೆ ಮೈದಾನದ ಚಾಮರ ವಜ್ರ ಸಭಾಂಗಣದಲ್ಲಿ ಮೂರೂ ದಿನ ವಿಶ್ವದ 50 ರಾಷ್ಟ್ರಗಳ ಕಾಫಿ ಕ್ಷೇತ್ರದ ವಿವಿಧ ಪಾಲುದಾರರು ಪಾಲ್ಗೊಳ್ಳಲಿದ್ದಾರೆ. ಉತ್ಸವದಲ್ಲಿ ಭಾಗಿಯಾಗುವ ಭಾರತೀಯ ಕಂಪನಿಗಳ ಆಯ್ಕೆಗೆ ಈ ತಿಂಗಳ 21ರಿಂದ 23ರ ವರೆಗೆ ಬೆಂಗಳೂರಿನಲ್ಲಿ ಪೂರ್ವಭಾವಿ ಕಾರ್ಯಕ್ರಮ ನಡೆಯಲಿದೆ. ಸೆ.4-7ರ ವರೆಗೆ ದಿಲ್ಲಿ ಹಾಗೂ ಅ.2-5ರ ವರೆಗೆ ಮುಂಬೈನಲ್ಲಿ ನಡೆಯಲಿದೆ.