ಬಾಗಲಕುಂಟೆಯಲ್ಲಿ ಸ್ವದೇಶಿ ಮೇಳ
- ಬಾಗಲಗುಂಟೆಯ ಎಂಇಐ ಆಟದ ಮೈದಾನದಲ್ಲಿ ಜ.7ರಿಂದ 11 ರವರೆಗೆ ಸ್ವದೇಶಿ ಜಾಗರಣ ಮಂಚ್ ಕರ್ನಾಟಕ ವತಿಯಿಂದ ‘ಸ್ವದೇಶಿ ಮೇಳ’ ಆಯೋಜನೆ
- ದೇಶದ ಸಣ್ಣ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವುದರ ಜತೆಗೆ ಜನರಿಗೆ ಸ್ವದೇಶಿ ವಸ್ತುಗಳ ಪರಿಚಯ ಮಾಡುವ ದೃಷ್ಟಿ
- ಸಂಸ್ಕಾರ ಭಾರತಿ ಅವರಿಂದ ಪ್ರತಿದಿನ ಸಂಜೆ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ
ಪೀಣ್ಯ ದಾಸರಹಳ್ಳಿ: ಬಾಗಲಗುಂಟೆಯ ಎಂಇಐ ಆಟದ ಮೈದಾನದಲ್ಲಿ ಜ.7ರಿಂದ 11 ರವರೆಗೆ ಸ್ವದೇಶಿ ಜಾಗರಣ ಮಂಚ್ ಕರ್ನಾಟಕ ವತಿಯಿಂದ ‘ಸ್ವದೇಶಿ ಮೇಳ’ ಆಯೋಜನೆ ಮಾಡಲಾಗಿದೆ ಎಂದು ಮೇಳದ ಗೌರವಾಧ್ಯಕ್ಷರೂ ಆಗಿರುವ ಶಾಸಕ ಎಸ್. ಮುನಿರಾಜು ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಳಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಚಾಲನೆ ನೀಡಿ ಆಶೀರ್ವಚನ ನೀಡಲಿದ್ದಾರೆ. ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮುಖ್ಯ ಭಾಷಣ ಮಾಡಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವೇದಿಕೆಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸತೀಶ್ ಸೇರಿ ಗಣ್ಯರು, ಕೈಗಾರಿಕೋದ್ಯಮಿಗಳು ಭಾಗವಹಿಸಲಿದ್ದಾರೆ ಎಂದರು.
ಜ.7ರಂದು ’ಲೋಕ ಕಲಾ ಸಂಭ್ರಮ’ ಸಾಂಸ್ಕೃತಿಕ ಕಾರ್ಯಕ್ರಮ, 8ರಂದು ಸೌಂದರ್ಯವರ್ಧಕ ವಸ್ತುಗಳ ತಯಾರಿಕಾ ಶಿಬಿರ, 9ರಂದು 10 ಗಂಟೆಗೆ ಆಯುರ್ವೇದ ಆರೋಗ್ಯ ಶಿಬಿರ ಮತ್ತು ಮಧ್ಯಾಹ್ನ 3 ಗಂಟೆಗೆ ಮಹಿಳಾ ಸಮಾವೇಶ, ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಜತೆಗೆ ದಕ್ಷಯಜ್ಞ ಯಕ್ಷಗಾನ ಪ್ರಸಂಗ ನಾಟಕ, ಜ.10ರಂದು ತಾರಸಿ ತೋಟ ಮತ್ತು ಕೈತೋಟ ತರಬೇತಿ ಶಿಬಿರ, ಜ.11ರಂದು ರಂಗೋಲಿ ಸ್ಪರ್ಧೆ ಮತ್ತು ಕುಟುಂಬ ಪ್ರಬೋದನಾ ಕಾರ್ಯಕ್ರಮ, ಸಂಜೆ 7ಕ್ಕೆ ಕಡಬಗೆರೆ ಮುನಿರಾಜು ಅವರ ತಂಡದಿಂದ ಜನಪದ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು ಮುನಿರಾಜು ವಿವರಿಸಿದರು.
ದೇಶದ ಸಣ್ಣ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವುದರ ಜತೆಗೆ ಜನರಿಗೆ ಸ್ವದೇಶಿ ವಸ್ತುಗಳ ಪರಿಚಯ ಮಾಡುವ ದೃಷ್ಟಿಯಿಂದ ದೇಶಾದ್ಯಂತ ನೂರಾರು ಸ್ವದೇಶಿ ಮಳಿಗೆಗಳ ಆಯೋಜನೆ ಮಾಡಲಾಗಿದೆ. ಸ್ವದೇಶಿ ಆಹಾರ ಮಳಿಗೆ, ಮಕ್ಕಳಿಗಾಗಿ ಮನರಂಜನಾ ಚಟುವಟಿಕೆ, ಮ್ಯಾಜಿಕ್ ಶೋ, ಖಾದಿ ಬಟ್ಟೆಗಳ ಮಳಿಗೆ, ಸಾವಯವ ಕೃಷಿ, ಗಾಣದ ಎಣ್ಣೆಗಳ ಮಳಿಗೆ, ಸಂಸ್ಕಾರ ಭಾರತಿ ಅವರಿಂದ ಪ್ರತಿದಿನ ಸಂಜೆ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸ್ವದೇಶಿ ಜಾಗರಣ ಮಂಚ್ ಸಂಘಟನಾ ಕಾರ್ಯದರ್ಶಿ ಜಗದೀಶ್ ಮಾತನಾಡಿ, ಸ್ವದೇಶಿ ಮೇಳದಲ್ಲಿ 200ಕ್ಕೂ ಮಳಿಗೆಗಳು ಭಾಗವಹಿಸಲಿವೆ. ಮೂರು ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡಲಿದ್ದಾರೆ. ಮೇಳದಲ್ಲಿ ದೇಶಿ ಉತ್ಪನ್ನಗಳು ಇರಲಿದ್ದು, ಪ್ಲಾಸ್ಟಿಕ್ ನಿಷೇಧಿಸಲಾಗಿದೆ ಎಂದರು.
ಮೇಳದ ಸಂಘಟಕ ಭರತ್ ಸೌಂದರ್ಯ, ಸಹ ಸಂಘಟಕ ಲಕ್ಷ್ಮೀ ವೆಂಕಟೇಶ್, ಸಂಚಾಲಕ ವಸಂತ ಮೂರ್ತಿ, ಮಹಾಂತೇಶ್ ಉಪಸ್ಥಿತರಿದ್ದರು.