- ಬಿಎಸ್ಟಿಪಿಯ 4 ಕಾರಿಡಾರ್ಗಳಲ್ಲಿ ಅತ್ಯಾಧುನಿಕ ಸಿಗ್ನಲಿಂಗ್ ವ್ಯವಸ್ಥೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬೆಂಗಳೂರಿನ ಬಹುನಿರೀಕ್ಷಿತ ಉಪನಗರ ರೈಲು ಯೋಜನೆಗೆ (ಬಿಎಸ್ಟಿಪಿ) ಮತ್ತಷ್ಟು ಆಧುನಿಕ ಸ್ಪರ್ಶ ದೊರೆಯಲಿದೆ. ಯೋಜನೆಯ ನಾಲ್ಕೂ ಕಾರಿಡಾರ್ಗಳಲ್ಲಿ ಈ ಹಿಂದೆ ಪ್ರಸ್ತಾಪಿಸಿದ್ದ ಕಮ್ಯುನಿಕೇಶನ್ ಬೇಸ್ಡ್ ಟ್ರೈನ್ ಕಂಟ್ರೋಲ್ (ಸಿಬಿಟಿಸಿ) ಬದಲಿಗೆ ಯುರೋಪಿಯನ್ ಟ್ರೈನ್ ಕಂಟ್ರೋಲ್ ಸಿಸ್ಟಮ್ (ಇಟಿಸಿಎಸ್) ಲೆವೆಲ್&-2 ಅಳವಡಿಸಲು ಕೆ-ರೈಡ್ ಅನುಮತಿ ಪಡೆದಿದೆ.
ನಮ್ಮ ಮೆಟ್ರೊ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಡಿಸ್ಟೆನ್ಸ್ ಟು ಗೋ (ಡಿಟಿಜಿ) ವ್ಯವಸ್ಥೆ ಬಳಕೆಯಲ್ಲಿದೆ. ಹಳದಿ, ಗುಲಾಬಿ ಹಾಗೂ ನೀಲಿ ಮಾರ್ಗಗಳಲ್ಲಿ ಸಿಬಿಟಿಸಿ ಅಳವಡಿಸಲಾಗುತ್ತಿದೆ. ಸಿಬಿಟಿಸಿಯಲ್ಲಿ ಚಾಲಕರ ನೆರವಿಲ್ಲದೆಯೂ ರೈಲು ಸಂಚಾರ ಸಾಧ್ಯ. ಆದರೆ, ಉಪನಗರ ಹಾಗೂ ಪ್ರಾದೇಶಿಕ ರೈಲು ಜಾಲವನ್ನು ಗಮನದಲ್ಲಿಟ್ಟುಕೊಂಡು ಇಟಿಸಿಎಸ್ ಲೆವೆಲ್-2 ಹೆಚ್ಚು ಸೂಕ್ತ ಎಂದು ಕೆ-&ರೈಡ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ವೇಗಕ್ಕೆ ಕಡಿವಾಣ, ಅಪಘಾತಕ್ಕೆ ತಡೆ:
ರೈಲು ನಿಗದಿತ ವೇಗದ ಮಿತಿ ಮೀರಿದರೆ ಇಟಿಸಿಎಸ್ ವ್ಯವಸ್ಥೆಯೇ ಸ್ವಯಂಚಾಲಿತವಾಗಿ ಬ್ರೇಕ್ ಹಾಕಲಿದೆ. ಚಾಲಕ ಕೆಂಪು ಸಿಗ್ನಲ್ ಉಲ್ಲಂಘಿಸಿದರೂ ರೈಲನ್ನು ನಿಯಂತ್ರಿಸಿ ನಿಲ್ಲಿಸಲಿದೆ. ಒಂದೇ ಹಳಿಯಲ್ಲಿ ರೈಲುಗಳು ಅಪಾಯಕಾರಿ ರೀತಿಯಲ್ಲಿ ಸಮೀಪಿಸುವುದಕ್ಕೂ ಇದು ತಡೆ ನೀಡಲಿದೆ.
ಹಳಿಗಳಲ್ಲಿ ಅಳವಡಿಸುವ "ಬಾಲಿಸ್' ಎಂಬ ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ಮುಂದಿನ ಸಿಗ್ನಲ್, ವೇಗದ ಮಿತಿ ಮತ್ತಿತರ ಮಾಹಿತಿಯನ್ನು ರೈಲಿನಲ್ಲಿರುವ ನಿಯಂತ್ರಣ ವ್ಯವಸ್ಥೆಗೆ ರವಾನಿಸಲಾಗುತ್ತದೆ. ಅಗತ್ಯಕ್ಕೆ ತಕ್ಕಂತೆ ವೇಗ ಇಳಿಕೆಯಾಗದಿದ್ದರೆ ಕಂಪ್ಯೂಟರ್ ಸ್ವಯಂಚಾಲಿತವಾಗಿ ಬ್ರೇಕ್ ಕಾರ್ಯಗತಗೊಳಿಸಲಿದೆ.
ಬಿಎಸ್ಟಿಪಿಯ ವಿಸತ ಯೋಜನಾ ವರದಿಯಲ್ಲಿ ಸಿಬಿಟಿಸಿ ಪ್ರಸ್ತಾಪಿಸಲಾಗಿತ್ತು. ಆದರೆ, ನಗರ ವ್ಯಾಪ್ತಿಯನ್ನು ಮೀರಿ ಉಪನಗರ ಹಾಗೂ ಪ್ರಾದೇಶಿಕ ರೈಲು ಜಾಲ ವಿಸ್ತರಣೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹೆಚ್ಚಿನ ವೇಗದ ಸಂಚಾರಕ್ಕೆ ಪೂರಕವಾಗುವ ಇಟಿಸಿಎಸ್ ಆಯ್ಕೆ ಮಾಡಲಾಗಿದೆ. ನಗರದಲ್ಲಿ ಕಡಿಮೆ ಅಂತರದಲ್ಲಿ ನಿಲ್ದಾಣಗಳಿರುವ ಮೆಟ್ರೋಗೆ ಸಿಬಿಟಿಸಿ ಸೂಕ್ತವಾಗಿದ್ದರೆ, ದೂರದ ಉಪನಗರ ಸಂಪರ್ಕಕ್ಕೆ ಇಟಿಸಿಎಸ್ ಹೆಚ್ಚು ಪರಿಣಾಮಕಾರಿ ಎಂಬುದು ಕೆ-&ರೈಡ್ನ ಲೆಕ್ಕಾಚಾರವಾಗಿದೆ.