ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಹೆಚ್ಚಿನ ಆದ್ಯತೆ ನೀಡಲು ಕೆ-&ರೈಡ್ ಮುಂದಾಗಿದ್ದು, ಅತ್ಯಾಧುನಿಕ ಯುರೋಪಿಯನ್ ಟ್ರೇನ್ ಕಂಟ್ರೋಲ್ ಸಿಸ್ಟಂ (ಇಟಿಸಿಎಸ್) ಸಿಗ್ನಲಿಂಗ್ ವ್ಯವಸ್ಥೆ ಅಳವಡಿಸಲು ನಿರ್ಧರಿಸಿದೆ. ಈ ವ್ಯವಸ್ಥೆ ಜಾರಿಯಾದರೆ ರೈಲುಗಳ ಸಂಚಾರ ಸಮಯದ ಅಂತರ ಕಡಿಮೆಯಾಗಲಿದೆ. ಆಗ ಹೆಚ್ಚಿನ ಸಂಖ್ಯೆಯ ರೈಲು ಸೇವೆ ನೀಡಲು ಸಾಧ್ಯವಾಗಿ ಪ್ರಯಾಣಿಕರ ಕಾಯುವಿಕೆ ಸಮಯ ಗಣನೀಯವಾಗಿ ಇಳಿಕೆಯಾಗುವ ನಿರೀಕ್ಷೆಯಿದೆ.
ಸದ್ಯ ನಮ್ಮ ಮೆಟ್ರೋದಲ್ಲಿ ಬಳಕೆಯಾಗುತ್ತಿರುವ ಸಿಬಿಟಿಸಿ ತಂತ್ರಜ್ಞಾನಕ್ಕಿಂತ ಇಟಿಸಿಎಸ್ ಹೆಚ್ಚು ಸುಧಾರಿತವಾಗಿದ್ದು, ಟ್ರೇನ್ ಮತ್ತು ಹಳಿಯ ಪಕ್ಕದ ಉಪಕರಣಗಳ ನಡುವೆ ನಿರಂತರ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಸ್ವಯಂಚಾಲಿತ ರೈಲು ಸುರಕ್ಷತೆ, ಕಾರ್ಯಾಚರಣೆ ಮತ್ತು ಮೇಲ್ವಿಚಾರಣೆ ಸಾಧ್ಯವಾಗಲಿದ್ದು, ಪ್ರಯಾಣಿಕರ ಸುರಕ್ಷತೆ ಮತ್ತಷ್ಟು ಹೆಚ್ಚಲಿದೆ. ಗಂಟೆಗೆ 200ರಿಂದ 250 ಕಿ.ಮೀ. ವೇಗದ ಕಾರ್ಯಾಚರಣೆಗೆ ತಾಂತ್ರಿಕ ಬೆಂಬಲ ಒದಗಿಸಬಲ್ಲದು.
ಉಪನಗರ ರೈಲು ಜಾಲವು ಮುಂದಿನ ದಿನಗಳಲ್ಲಿ ಬೆಂಗಳೂರು ನಗರವನ್ನು ಮೀರಿ ಮೈಸೂರು, ತುಮಕೂರು, ಕೋಲಾರ ಸೇರಿ ಸುತ್ತಮುತ್ತಲಿನ ನಗರಗಳಿಗೆ ವಿಸ್ತರಣೆಯಾಗುವ ಸಾಧ್ಯತೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದ ಅಗತ್ಯಗಳಿಗೆ ಹೊಂದುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಕೆ-&ರೈಡ್ ಮುಂದಾಗಿದೆ. ಇದರಿಂದಾಗಿ ಒಂದರಿಂದ ಮತ್ತೊಂದು ಕಾರಿಡಾರ್ಗೆ ತೆರಳಲು ಪ್ರಯಾಣಿಕರು ಪದೇಪದೆ ರೈಲು ಬದಲಾಯಿಸುವುದು ಕಡಿಮೆಯಾಗಲಿದೆ.
ಪ್ರಸ್ತುತ ದೆಹಲಿ& ಮೀರತ್ ನಮೋ ಭಾರತ್ ಕಾರಿಡಾರ್ನಲ್ಲಿ ಈ ವ್ಯವಸ್ಥೆ ಬಳಕೆಯಲ್ಲಿದ್ದು, ಮುಂಬೈ& -ಅಹಮದಾಬಾದ್ ಬುಲೆಟ್ ರೈಲು ಯೋಜನೆಗೂ ಇದೇ ತಂತ್ರಜ್ಞಾನವನ್ನು ಪ್ರಸ್ತಾಪಿಸಲಾಗಿದೆ.