postpone of elections 
ಬೆಂಗಳೂರು

ಪಂಚ ಪಾಲಿಕೆಗಳ ಎಲೆಕ್ಷನ್ ಮುಂದೂಡಿಕೆಗೆ ತೆರೆಮರೆಯಲ್ಲಿ ಕಸರತ್ತು

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಚುನಾವಣೆ ಆಯೋಗದ ಸಭೆ ಬೆನ್ನಲ್ಲೇ ಚುರುಕೊಂಡ ಚಟುವಟಿಕೆ
  • ಕಾರ್ಪೋರೇಷನ್​​ ಎಲೆಕ್ಷನ್ ನಿಲ್ಲಿಸಲು ಕಾರಣಗಳ ಹುಡುಕಾಟ
ಬೆಂಗಳೂರು: ಪಂಚ ಪಾಲಿಕೆಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಮಿತಿ ಜತೆ ಸಮಾಲೋಚನೆ ನಡೆಸಿ ಜೂನ್‌ನಲ್ಲೇ ದಿನಾಂಕ ನಿಗದಿಗೊಳಿಸಲು ಮುಂದಾಗಿರುವಾಗಲೇ, ಎಲೆಕ್ಷನ್ ಮುಂದೂಡುವ ಬಗ್ಗೆ ತೆರೆಮರೆಯಲ್ಲಿ ಕಸರತ್ತು ಆರಂಭವಾಗಿದೆ.
ಈ ವಾರವೇ ರಾಜಧಾನಿಯ ಕೆಲ ವ್ಯಕ್ತಿಗಳು ಸುಪ್ರೀಂಕೋರ್ಟ್‌ಗೆ ಹೊಸದಾಗಿ ಅರ್ಜಿ ಸಲ್ಲಿಸಿ ಪಾಲಿಕೆಗಳ ರಚನೆ ಹಾಗೂ ಚುನಾವಣಾ ಸಂಬಂಧಿತ ತಯಾರಿಯಲ್ಲಿನ ಲೋಪಗಳನ್ನು ಉದಾಹರಿಸಿ ಚುನಾವಣೆಯನ್ನು ಹೊಂದಿಷ್ಟು ಕಾಲ ಮುಂದಕ್ಕೆ ಹಾಕುವಂತೆ ಕೋರಿ ನ್ಯಾಯಾಲಯ ಕದ ತಟ್ಟಲು ಸಿದ್ಧತೆ ನಡೆಸಿದ್ದಾರೆ. ಇದಕ್ಕೆ ನಗರದ ಪ್ರಭಾವಿ ಮುಖಂಡರೇ ಬೆಂಬಲ ನೀಡುತ್ತಿರುವುದು ಕುತೂಹಲ ಕೆರಳಿಸಿದೆ. ಆಯೋಗವು ಜಿಬಿಎ ಸಮಿತಿ ಜತೆ ಚರ್ಚಿಸಿ ಎಲೆಕ್ಷನ್ ನಡೆಸುವ ನಿಲುವಿನ ನಂತರವೂ, ಚುನಾವಣೆ ಮುಂದೂಡುವ ಪ್ರಯತ್ನದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಜತೆಗೆ ಈ ಚಟುವಟಿಕೆ ಹಿಂದೆ ಸರ್ಕಾರದ ಪರೋಕ್ಷ ಸಹಕಾರ ಇರುವ ಅನುಮಾನ ಮೂಡಿಸಿದೆ.

ಆಡಳಿತ ಪಕ್ಷದಲ್ಲಿ ಒಮ್ಮತ ಮೂಡಿಸಲು ಹರಸಾಹಸ:

ಪ್ರಸ್ತುತ ಬೆಂಗಳೂರು ಮಹಾನಗರದ ಸ್ಥಳೀಯ ಸಂಸ್ಥೆಯಲ್ಲಿ ಐದೂವರೆ ವರ್ಷದಿಂದ ಚುನಾಯಿತ ಸದಸ್ಯರು ಇಲ್ಲ. ಜತೆಗೆ ಚುನಾವಣೆ ನಡೆದು ದಶಕ ಕಳೆದಿದೆ. ಈ ಸ್ಥಿತಿಯಲ್ಲಿ ಜನರಿಗೆ ಉತ್ತಮ ಆಡಳಿತ ವ್ಯವಸ್ಥೆ ನೀಡಲು ಎಲೆಕ್ಷನ್ ಅಗತ್ಯವಿದೆ ಎಂಬುದಾಗಿ ಎಲ್ಲ ರಾಜಕೀಯ ಪಕ್ಷಗಳು ನಿಲುವು ವ್ಯಕ್ತಪಡಿಸಿವೆ. ಆದರೆ, ಒಳಗೊಳಗೆ ಎಲೆಕ್ಷನ್ ನಡೆಯುವುದು ಸದ್ಯಕ್ಕೆ ಬೇಡ, ಹೊಂದಿಷ್ಟು ದಿನ ಆಡಳಿತಾಧಿಕಾರಿಯೇ ಕಾರ್ಪೋರೇಷನ್ ಮುನ್ನಡೆಸಲಿ ಎಂಬ ಇಂಗಿತ ಇದ್ದಂತಿದೆ. ಇದಕ್ಕೆ ನಗರದ ಹಲವು ಶಾಸಕರು ಒಲ್ಲದ ಮನಸ್ಸಿನಿಂದಲೇ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮುಖ್ಯವಾಗಿ ಸರ್ಕಾರದಲ್ಲಿ ಸಿಎಂ ಹಾಗೂ ಡಿಸಿಎಂ ಮಧ್ಯೆ ಅಧಿಕಾರ ಹಸ್ತಾಂತರ ಸಂಬಂಧ ರಾಜಕೀಯ ಮುಸುಕಿನ ಗುದ್ದಾಟ ನಡೆದಿದೆ. ಪಕ್ಷದ ಮಟ್ಟದಲ್ಲಿ ಎಲೆಕ್ಷನ್ ಎದುರಿಸಲು ಸಿದ್ಧತೆ ಆರಂಭಿಸಿದ್ದರೂ, ಎಲ್ಲ ಐದೂ ಕಾರ್ಪೋರೇಷನ್ ಗೆಲ್ಲುವ ಬಗ್ಗೆ ಪೂರ್ಣ ವಿಶ್ವಾಸ ಕಾಣುತ್ತಿಲ್ಲ. ಐದು ಪಾಲಿಕೆಗಳ ಪೈಕಿ ಎರಡರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂಬ ಆಂತರಿಕ ಸಮೀಕ್ಷೆ ಬಳಿಕ ಈಗಲೇ ಚುನಾವಣೆಗೆ ಹೋಗಬೇಕೆ ಎಂಬ ವಿಚಾರದಲ್ಲಿ ಒಮ್ಮತ ಮೂಡಿಸುವ ಯತ್ನ ನಡೆದಿದೆ. ಅಲ್ಲದೆ ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ರಾಜಧಾನಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಸಿಎಂ ಮುಂದೆ ಪ್ರಸ್ತಾವನೆ ಇಟ್ಟಿದ್ದಾರೆ. ಇದಕ್ಕೆ ಸ್ಪಷ್ಟ ಭರವಸೆ ಸಿಕ್ಕಿಲ್ಲ. ಗ್ಯಾರಂಟಿ ಯೋಜನೆಗಳಿಗೆ ದೊಡ್ಡ ಮೊತ್ತ ವಿನಿಯೋಗಿಸುತ್ತಿರುವಾಗ ಎಲೆಕ್ಷನ್ ಗೆಲ್ಲಲು ಬೆಂಗಳೂರಿಗೆ ಬೃಹತ್ ಅನುದಾನ ಬಿಡುಗಡೆ ಸದ್ಯಕ್ಕೆ ಕಷ್ಟ ಎಂಬುದಾಗಿ ಆರ್ಥಿಕ ಇಲಾಖೆ ಸಲಹೆ ನೀಡಿದೆ. ಹಾಗಾಗಿ ಈ ವಿಚಾರದಲ್ಲಿ ಸಿಎಂ ಹಾಗೂ ಡಿಸಿಎಂ ಪ್ರತ್ಯೇಕವಾಗಿ ಚರ್ಚಿಸಿದ್ದರೂ, ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಂತಿಲ್ಲ.

ನವೆಂಬರ್‌ನಲ್ಲಿ ಎಲೆಕ್ಷನ್‌ಗೆ ಒಲವು?:

ಸದ್ಯ ಜೂನ್ ಕೊನೆಯ ವಾರದೊಳಗೆ 5 ಪಾಲಿಕೆಗಳಿಗೆ ಎಲೆಕ್ಷನ್ ನಡೆಸುವ ಆಯೋಗದ ನಿಲುವಿಗೆ ಸರ್ಕಾರ ಒಪ್ಪಿಗೆ ಸೂಚಿಸಿದ್ದರೂ, ಪರೋಕ್ಷವಾಗಿ ಒಂದಿಷ್ಟು ದಿನ ಮುಂದೂಡುವತ್ತಲೇ ದೃಷ್ಟಿ ಹರಿಸಿದಂತಿದೆ. ಜೂನ್‌ನಲ್ಲಿ ಮುಂಗಾರು ಮಳೆಯ ಅಬ್ಬರ ಇರುವುದರಿಂದ ಪ್ರಚಾರ ಸಹಿತ ಚುನಾವಣೆ ಚಟುವಟಿಕೆಯನ್ನು ಕೈಗೊಳ್ಳಲು ರಾಜಕೀಯ ಪಕ್ಷಗಳಿಗೆ ಸಮಸ್ಯೆಯಾಗಲಿದೆ. ಜತೆಗೆ ಜನಗಣತಿಯ ಮನೆ ಮನೆ ಸಮೀಕ್ಷೆ ಹಾಗೂ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಚಾಲ್ತಿಯಲ್ಲಿರುವುದರಿಂದ ಆಡಳಿತ ಯಂತ್ರವನ್ನು ಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗದು. ಇದನ್ನು ಮೀರಿಯೂ ಚುನಾವಣೆ ನಡೆಸಿದರೆ ಸಿಬ್ಬಂದಿ ಕೊರತೆ ಉಂಟಾಗಲಿದೆ ಎಂಬ ಅಂಶವನ್ನೂ ಸರ್ಕಾರವು ಆಯೋಗದೊಂದಿಗೆ ಪ್ರತ್ಯೇಕವಾಗಿ ತಿಳಿಸಿದೆ. ಹಾಗಾಗಿ ಅಕ್ಟೋಬರ್ ಕೊನೆಗೆ ಅಥವಾ ನವೆಂಬರ್‌ನಲ್ಲಿ ಚುನಾವಣೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ಆಡಳಿತ ಪಕ್ಷದಿಂದ ಕೇಳಿಬಂದಿದೆ.

45 ದಿನಗಳ ವೇಳಾಪಟ್ಟಿ ಸವಾಲು:

ಯಾವುದೇ ಎಲೆಕ್ಷನ್ ನಡೆಸಲು ಚುನಾವಣಾ ಆಯೋಗ 45 ದಿನಗಳ ವೇಳಾಪಟ್ಟಿಯನ್ನು ತಯಾರಿಸಿ ಅದರಂತೆ ಕಾರ್ಯನಿರ್ವಹಿಸುವ ಪರಿಪಾಠ ಬೆಳೆದುಬಂದಿದೆ. ಸದ್ಯ ಚುನಾವಣೆ ಪೂರ್ವ ಸಿದ್ಧತೆ ಪೂರ್ಣಗೊಂಡಿದೆ. ಆದರೆ, ಚುನಾವಣೆ ಘೋಷಣೆ ದಿನದಿಂದ ಆರಂಭಿಸಿ ನಾಮಪತ್ರ ಸಲ್ಲಿಕೆ/ಹಿಂತೆಗೆತ, ಉಮೇದುವಾರಿಕೆಗಳ ಪರಿಶೀಲನೆ, ಅಭ್ಯರ್ಥಿಗಳ ಪ್ರಚಾರಕ್ಕೆ ಇಂತಿಷ್ಟು ದಿನಗಳ ನಿಗದಿ, ಫಲಿತಾಂಶ ಘೋಷಣೆ ಮಾಡುವುದಕ್ಕೆ ಜೂನ್ ಮಧ್ಯಭಾಗದವರೆಗೆ ಕಾಲಾವಕಾಶ ಸಾಕಾಗದು. ಈ ತಾಂತ್ರಿಕ ಕಾಣ ನೆಪ ಮಾಡಿ ಕೋರ್ಟ್ ಮೆಟ್ಟಿಲೇರಲು ಕೆಲವರು ಮುಂದಾಗಿದ್ದಾರೆ. ಇದರಿಂದಾಗಿ ಈಗಾಗಲೇ ಸುಪ್ರೀಂಕೋರ್ಟ್ ಆದೇಶದಂತೆ ಜೂನ್ ತಿಂಗಳಾಂತ್ಯದೊಳಗೆ ಪಂಚ ಪಾಲಿಕೆಗಳಿಗೆ ಎಲೆಕ್ಷನ್ ನಡೆಸುವ ಗಡುವು ಮತ್ತೊಮ್ಮೆ ವಿಸ್ತರಣೆ ಆಗುವ ಸಾಧ್ಯತೆಯನ್ನು ತಳ್ಳಹಾಕಲಾಗದು.

ಎಲೆಕ್ಷನ್ ತಡೆ ಕೋರಲು ಕಾರಣಗಳು:

* ವಾರ್ಡ್ ರಚನೆಯಲ್ಲಿ ಜನಸಂಖ್ಯೆ ಅಜಗಜಾಂತರ
* ವಾಡ್‌ವಾರು ವಿಂಗಡಣೆ ಸಮರ್ಪಕವಾಗಿ ನಡೆಸಿಲ್ಲ
* ವಾರ್ಡ್ ಗಡಿಯನ್ನು ಮುಖ್ಯರಸ್ತೆ ಬದಲು ಅಡ್ಡರಸ್ತೆಗಳ ಪರಿಗಣನೆ
* ಪಾಲಿಕೆಗಳಲ್ಲಿ ಶೇ.50 ಮಹಿಳಾ ಮೀಸಲು ನಿಗದಿ ಮಾಡದಿರುವುದು
* ಹಿಂದುಳಿದ ವರ್ಗಗಳಿಗೂ ಅಸಮರ್ಪಕ ಮೀಸಲು ನಿಗದಿ