ಬೆಂಗಳೂರು ಓಪನ್​ನಲ್ಲಿ ಆಡಲಿರುವ ಸಾಕೇತ್​ ಮೈನೇನಿ, ಮನಸ್​ ದಾಮ್ನೆ, ಸುಮಿತ್​ ನಗಾಲ್​, ಪ್ರಜ್ವಲ್​ ದೇವ್​, ಆರ್ಯನ್​ ಷಾ, ದಣೇಶ್ವರ್​ ಸುರೇಶ್​ ಅವರು ಎಸ್​.ಎಂ. ಕೃಷ್ಣ ಟೆನಿಸ್​ ಸ್ಟೇಡಿಯಂನಲ್ಲಿ ಶನಿವಾರ ಅಭ್ಯಾಸ ನಡೆಸಿದ ವೇಳೆ ಜತೆಯಾಗಿ ಪೋಸ್​ ನೀಡಿದರು.  
ಬೆಂಗಳೂರು

ಬೆಂಗಳೂರು ಓಪನ್​ ಟೆನಿಸ್​: ಪ್ರಧಾನ ಸುತ್ತಿನಲ್ಲಿ ಆರು ಭಾರತೀಯರು

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಹತ್ತನೇ ಆವೃತ್ತಿಯ ಬೆಂಗಳೂರು ಓಪನ್​ (Bengaluru Open) ಎಟಿಪಿ ಚಾಲೆಂಜರ್​ 125 (ATP Challenger 125 tennis) ಟೂರ್ನಿಯೊಂದಿಗೆ ಉದ್ಯಾನನಗರಿಯಲ್ಲಿ ವಿಶ್ವದರ್ಜೆಯ ಟೆನಿಸ್​ ಸಮರಕ್ಕೆ ವೇದಿಕೆ ಸಜ್ಜಾಗಿದ್ದು, ಕಬ್ಬನ್​ ಪಾರ್ಕ್​ನ ಎಸ್​. ಎಂ. ಕೃಷ್ಣ ಟೆನಿಸ್​ ಸ್ಟೇಡಿಯಂನಲ್ಲಿ (S.M. Krishna Tennis Stadium) ಪ್ರಧಾನ ಸುತ್ತಿನ ಪಂದ್ಯಗಳು ನಡೆಯಲಿವೆ. ಟೂರ್ನಿಯ ಡ್ರಾ ಶನಿವಾರ ಪ್ರಕಟಗೊಂಡಿದ್ದು, ಆತಿಥೇಯ ಭಾರತದ ಆರು ಆಟಗಾರರು ಸಿಂಗಲ್ಸ್​ ವಿಭಾಗದಲ್ಲಿ ವಿದೇಶಿ ತಾರೆಯರಿಗೆ ಸವಾಲೊಡ್ಡಲಿದ್ದಾರೆ.

ಭಾರತದ ನಂ. 1 ಸಿಂಗಲ್ಸ್​ ಆಟಗಾರ ಸುಮಿತ್​ ನಗಾಲ್​ ಮೊದಲ ಸುತ್ತಿನಲ್ಲಿ ಕನ್ನಡಿಗ ಎಸ್​.ಡಿ. ಪ್ರಜ್ವಲ್​ ದೇವ್​ ಸವಾಲು ಎದುರಿಸಲಿದ್ದಾರೆ. ಭಾರತದ ನಂ. 2 ಆಟಗಾರ ಆರ್ಯನ್​ ಷಾ, ನಂ. 3 ಕರಣ್​ ಸಿಂಗ್​, ವೈಲ್ಡ್​ ಕಾರ್ಡ್​ ಪ್ರವೇಶಿಗರಾದ ದಕ್ಷಿಣೇಶ್ವರ್​ ಸುರೇಶ್​ ಮತ್ತು ಮನಸ್​ ದಾಮ್ನೆ ಸಿಂಗಲ್ಸ್​ ಪ್ರಧಾನ ಸುತ್ತಿನಲ್ಲಿ ಆಡಲಿರುವ ಇತರ ಭಾರತೀಯರಾಗಿದ್ದಾರೆ. 

ಆರ್ಯನ್​ ಷಾ ಕಜಾಕ್​ಸ್ತಾನದ ಬಿಬಿಟ್​ ಝುಕಯೆವ್​ ವಿರುದ್ಧ, ಕರಣ್​ ಸಿಂಗ್​ ಕ್ರೊವೇಷಿಯಾದ ಬೋರ್ನ ಗೊಜೊ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ದಕ್ಷಿಣೇಶ್ವರ್​ಗೆ ಕ್ರೊವೇಷಿಯಾದ ಡುಜೆ ಅಡುಕೋವಿಕ್​ ಮತ್ತು ಮನಸ್​ ದಾಮ್ನೆಗೆ 5ನೇ ಶ್ರೇಯಾಂಕಿತ ಕ್ರೊವೇಷಿಯಾದ ಮ್ಯಾಟೆಜ್​ ಡೊಡಿಗ್​ ಸವಾಲು ಎದುರಾಗಲಿದೆ. 

ಅಗ್ರ ಶ್ರೇಯಾಂಕಿತ ಸ್ಪೇನ್​ನ ಪೆಡ್ರೊ ಮಾರ್ಟಿನೇಜ್​ಗೆ ಅರ್ಹತಾ ಸುತ್ತಿನಿಂದ ಬಂದ ಆಟಗಾರ ಮೊದಲ ಸುತ್ತಿನಲ್ಲಿ ಎದುರಾಗಲಿದ್ದಾರೆ. 2ನೇ ಶ್ರೇಯಾಂಕಿತ ಹರೋಲ್ಡ್​ ಮಯೊಟ್​, 3ನೇ ಶ್ರೇಯಾಂಕಿತ ಜೇ ಕ್ಲಾರ್ಕ್​ ಮತ್ತು 4ನೇ ಶ್ರೇಯಾಂಕಿತ ಲಾಯ್ಡ್​ ಹ್ಯಾರಿಸ್​ ಸ್ವಲ್ಪ ಸ್ಪರ್ಧಾತ್ಮಕ ಪಂದ್ಯದೊಂದಿಗೆ ಅಭಿಯಾನ ಆರಂಭಿಸಲಿದ್ದಾರೆ. ಒಟ್ಟು 19 ದೇಶಗಳ ಆಟಗಾರರು ಟೂರ್ನಿಯಲ್ಲಿ ಆಡಲಿದ್ದಾರೆ. ಟೂರ್ನಿಯ ಒಟ್ಟು ಬಹುಮಾನ ಮೊತ್ತ 2 ಕೋಟಿ ರೂ. ಆಗಿದೆ. ಜನವರಿ 9ಕ್ಕೆ ಸೆಮಿೈನಲ್ಸ್​ ಮತ್ತು ಜನವರಿ 10ಕ್ಕೆ ಫೈನಲ್​ ಪಂದ್ಯ ನಡೆಯಲಿದೆ.

ಇಂದಿನಿಂದ ಅರ್ಹತಾ ಸುತ್ತು: ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಶನಿವಾರ ಮತ್ತು ಸೋಮವಾರ ನಡೆಯಲಿವೆ. ಭಾರತದ ರಾಮ್​ಕುಮಾರ್​ ರಾಮನಾಥನ್​, ಮನೀಷ್​ ಸುರೇಶ್​ ಕುಮಾರ್​, ಆದಿತ್ಯ ಬಲಶೇಕರ್​ ಮತ್ತು ಕನ್ನಡಿಗ ಆದಿಲ್​ ಕಲ್ಯಾಣ್​ಪುರ್​ ಅರ್ಹತಾ ಸುತ್ತಿಗೆ ವೈಲ್ಡ್​ ಕಾರ್ಡ್​ ಪ್ರವೇಶ ಪಡೆದಿದ್ದಾರೆ. ದೇವ್​ ಜವಿಯಾ, ನಿತಿನ್​ ಕುಮಾರ್​ ಸಿನ್ಹಾ, ಸಿದ್ಧಾರ್ಥ್​ ರಾವತ್​ ಅರ್ಹತಾ ಸುತ್ತಿನಲ್ಲಿ ಆಡಲಿರುವ ಇತರ ಭಾರತೀಯರಾಗಿದ್ದಾರೆ.