ಬೀದಿನಾಯಿಗಳ ಸಾಂದರ್ಭಿಕ ಚಿತ್ರ
- ಕಡಿಮೆ ವೆಚ್ಚ, ದೀರ್ಘಕಾಲಿಕ, ದಯಾಪರ ಕ್ರಮ ಅಗತ್ಯ
- ಜಿಬಿಎ ಮುಂದಿದೆ ಹೊಸ ಸವಾಲುಗಳು
- ಬೇಕು ಪರಿಣಾಮಕಾರಿ ಸ್ಮಾರ್ಟ್ ಪರಿಹಾರೋಪಾಯ
ಪವನ್ ಆಚಾರ್ಯ ನೀರ್ಚಾಲು ಬೆಂಗಳೂರು
ರಾಜಧಾನಿಯಲ್ಲಿ ಬೀದಿನಾಯಿಗಳ ಸಮಸ್ಯೆ ದಿನೇದಿನೆ ಹೆಚ್ಚುತ್ತಿರುವುದು ಗಂಭೀರ ವಿಚಾರ. ಹಾಗೆಂದು ಅವನ್ನು ಹಿಡಿದು ದೂರ ಹಾಕುವುದೇ ಪರಿಹರವಲ್ಲ. ದೀರ್ಘಕಾಲಿಕ ಮತ್ತು ದಯಾಪರ ಕ್ರಮಗಳ ಮೂಲಕವೇ ಈ ಸಮಸ್ಯೆಯನ್ನು ಸ್ಮಾರ್ಟ್ ಆಗಿ ನಿರ್ವಹಿಸಬೇಕಿದೆ ಎಂಬುದು ತಜ್ಞರ ಅಭಿಮತ.
ನಗರದಲ್ಲಿರುವ ಲಾಂತರ ಬೀದಿನಾಯಿಗಳು ತಮ್ಮ ಪಾಡಿಗೆ ತಾವು ಜೀವಿಸುತ್ತಿವೆ. ಇವುಗಳಲ್ಲಿ ಒಂದಷ್ಟು ನಾಯಿಗಳನ್ನು ಶಾಶ್ವತವಾಗಿ ಆಶ್ರಯತಾಣಗಳಿಗೆ ಸ್ಥಳಾಂತರಿಸಿದರೆ ಒಂದು ಕಡೆ ನಿರ್ವಹಣೆಯ ಭಾರ, ಇನ್ನೊಂದು ಕಡೆ ಪರಿಸರದಲ್ಲಿ ಅಸಮತೋಲನ ಎದುರಿಸಬೇಕಾಗುತ್ತದೆ. ಜಿಬಿಎ ಸಿಬ್ಬಂದಿಗೂ ಈ ಕೆಲಸ ತಲೆನೋವಾಗುವ ಸಾಧ್ಯತೆಯನ್ನು ತಳ್ಳಹಾಕುವಂತಿಲ್ಲ.
ಆರೈಕೆಗೆ ತರಬೇತಿ: ನಾಯಿಗಳನ್ನು ಆರೈಕೆ ಮಾಡುವ ಕೌಶಲ ತರಬೇತಿಗೆ ಜಿಬಿಎ ಮುಂದಾದರೆ ಅನುಕೂಲವಾಗಲಿದೆ. ಹೆಚ್ಚಾಗಿ ಸಮಸ್ಯೆ ಸೃಷ್ಟಿಸುವ ನಾಯಿಗಳನ್ನು ಎಬಿಸಿ ಕೇಂದ್ರಗಳಿಗೆ ಸ್ಥಳಾಂತರಿಸಿ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿ, ಮತ್ತೆ ಸ್ವಸ್ಥಾನಕ್ಕೆ ಬುಡಬೇಕಿದೆ. ಈ ಹಿನ್ನೆಲೆ ನಗರದಲ್ಲಿ ಎಬಿಸಿ ಕೇಂದ್ರಗಳನ್ನು ಹೆಚ್ಚಿಸುವ ಅಗತ್ಯವಿದೆ. ಶ್ವಾನಗಳಿಗೆ ಸಂತಾನ ಶಕ್ತಿಹರಣ ಚಿಕಿತ್ಸೆ ಹಾಗೂ ಲಸಿಕೆ ನೀಡುವುದನ್ನು ಉತ್ತೇಜಿಸಲು ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ಉಪಕ್ರಮದಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಪ್ರಮುಖವಾಗಿದೆ. ಬೀದಿನಾಯಿ ಸಮಸ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ, ಅದರಲ್ಲೂ ಕೊಳೆಗೇರಿಗಳನ್ನು ಗುರುತಿಸಿ ವಿಶೇಷ ಗಮನಹರಿಸಿ, ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು.
ಸ್ಮಾರ್ಟ್, ಸಮುದಾಯ ಆಧಾರಿತ ಮತ್ತು ಕಡಿಮೆ ವೆಚ್ಚದ ಪರಿಹಾರಗಳು ಹೆಚ್ಚು ಪರಿಣಾಮಕಾರಿಯಾಗಬಲ್ಲವು.
ಶಾಲೆ, ಕಾಲೇಜು, ಆಸ್ಪತ್ರೆ, ಸಂ&ಸಂಸ್ಥೆಗಳು ಇತ್ಯಾದಿ ಜನನಿಬಿಡ ಪ್ರದೇಶಗಳಿಂದ ಆದ್ಯತೆ ಮೇರೆಗೆ ಬೀದಿನಾಯಿಗಳನ್ನು ತೆರವುಗೊಳಿಸಲು ಆದೇಶವಿದೆ. ಆದರೆ ಅಲ್ಲಿ ತೆರವುಗೊಳಿಸಿದರೆ ಆ ಜಾಗಕ್ಕೆ ಮತ್ತೆ ಬೇರೆ ನಾಯಿಗಳು ಬರುವ ಸಾಧ್ಯತೆ ಇದೆ. ಅದಕ್ಕಾಗಿ ಇಂತಹ ಪ್ರದೇಶಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಬೇಕಿದೆ. ನಾಯಿಗಳು ಯಾವುದೇ ಭಾಗದಿಂದ ಆವರಣಕ್ಕೆ ಪ್ರವೇಶಿಸದಂತೆ ನೋಡಿಕೊಳ್ಳಬೇಕಿದೆ.
ತ್ಯಾಜ್ಯ ನಿರ್ವಹಣೆ ಸರಿಯಾಗಲಿ
ಶ್ವಾನಗಳ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣ ತೆರೆದ ಕಸದ ತೊಟ್ಟಿಗಳು ಮತ್ತು ಆಹಾರ ತ್ಯಾಜ್ಯ. ಮನೆಮನೆಗೆ ಕಸ ವಿಂಗಡಣೆ, ಹೋಟೆಲ್ಗಳು ಮತ್ತು ಮಾರುಕಟ್ಟೆಗಳಲ್ಲಿ ತ್ಯಾಜ್ಯವನ್ನು ತಕ್ಷಣ ತೆರವುಗೊಳಿಸುವ ವ್ಯವಸ್ಥೆ ಮಾಡಿದರೆ, ನಾಯಿಗಳಿಂದ ಉಂಟಾಗುವ ಸಮಸ್ಯೆಯನ್ನು ತಡೆಯಬಹುದು. ಈಗಾಗಲೆ ಜಿಬಿಎ ಬೀದಿನಾಯಿಗಳಿಗೆ ಆಹಾರ ನೀಡುವ ಸ್ಥಳವನ್ನು ನಿಗದಿ ಮಾಡಿದೆ. ನಿಗದಿತ ಜಾಗದಲ್ಲಿ ಮಾತ್ರ ಆಹಾರ ನೀಡುವ ನಿಯಮ ಉಪಯುಕ್ತವಾಗಬಹುದು. ಇದು ಅತಿಕಡಿಮೆ ವೆಚ್ಚದ, ಅಷ್ಟೇ ಪರಿಣಾಮಕಾರಿ ಕ್ರಮವೆನ್ನಬಹುದು.
ಸ್ಥಳಿಯ ಮಟ್ಟದ ಸಮುದಾಯ ಭಾಗವಹಿಸುವಿಕೆ ಅಗತ್ಯ. ಅಪಾರ್ಟ್ಮೆಂಟ್ಗಳು, ನಿವಾಸಿ ಸಂಘಗಳು ಮತ್ತು ಸ್ವಯಂಸೇವಾ ಸಂಘಗಳ ಸಹಕಾರದಿಂದ "ಕಮ್ಯುನಿಟಿ ಡಾಗ್ ವಾಚ್' ವ್ಯವಸ್ಥೆ ರೂಪಿಸಬಹುದು. ಇವರು ನಾಯಿಗಳ ಸಂಖ್ಯೆಯನ್ನು ಗಮನಿಸಿ, ಹೊಸದಾಗಿ ಹುಟ್ಟಿದ ಮರಿಗಳನ್ನು ಗುರುತಿಸಿ, ಸ್ಥಳಿಯ ಆಡಳಿತಕ್ಕೆ ಮಾಹಿತಿ ನೀಡಬಹುದು. ಇದರಿಂದ ಸುಶ್ರೂಷಾ ಕಾರ್ಯಕ್ರಮಗಳು ಸುಲಭವಾಗುತ್ತವೆ.
ಸ್ವಯಂಸೇವಾ ಪಶುವೈದ್ಯರು ಮತ್ತು ಎನ್ಜಿಒಗಳ ಸಹಕಾರವನ್ನು ಬಳಸಿಕೊಳ್ಳಬೇಕು. ಪಶುವೈದ್ಯಕಿಯ ಕಾಲೇಜುಗಳು ಮತ್ತು ಎನ್ಜಿಒಗಳ ಮೂಲಕ ಸ್ಟೆರಿಲೈಸೇಶನ್ ಮತ್ತು ಲಸಿಕೆ ಅಭಿಯಾನಗಳನ್ನು ನಡೆಸಬಹುದು.
ಬೀದಿನಾಯಿಗಳನ್ನು ಸ್ಥಳಾಂತರಿಸಬಾರದೆಂಬ ನಿಯಮವಿದೆ. ಆದರೆ, ಈ ಬಾರಿ ಆದೇಶದಲ್ಲಿಯೇ ತಪ್ಪಾಗಿದೆ. ಜಿಬಿಎ ಕೂಡ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡಿದೆ. ಬೀದಿನಾಯಿಗಳನ್ನು ಚಿಕಿತ್ಸೆಗಾಗಿ ಸ್ಥಳಾಂತರ ಮಾಡಿದರೂ ಮತ್ತೆ ಅಲ್ಲೇ ಬಿಡಬೇಕು. ಕೇವಲ 10 ವರ್ಷ ಅಷ್ಟೇ ಆಯಸ್ಸು ಇರುವ ನಾಯಿಗಳು ಹುಟ್ಟಿದ ಜಾದಲ್ಲೇ ಇರಲು ಇಷ್ಟಪಡುತ್ತದೆ. ಸ್ಥಳಾಂತರ ಮಾಡಿದರೆ ಅವುಗಳಿಗೆ ಸಮಸ್ಯೆಯಾಗುತ್ತದೆ. ಪ್ರಾಣಿ& ಪಗಳನ್ನು ಪೂಜ್ಯನಿಯವಾಗಿ ಕಾಣುವ ಈ ದೇಶದಲ್ಲಿ ಇಂಥ ಕಠಿಣ ಕ್ರಮ ಸಲ್ಲ.