ಕೆಆರ್ ಪುರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ಪೂರ್ವಜಿಲ್ಲಾ ಕಾಂಗ್ರೆಸ್ ಜಿಬಿಎ ಚುನಾವಣಾ ಪೂರ್ವಭಾವಿ ಸಭೆ 
ಬೆಂಗಳೂರು

ನಾಯಕರ ಹಿಂದೆ ಸುತ್ತುವುದು ಬಿಟ್ಟು ಬೂತ್ ಮಟ್ಟದಲ್ಲಿ ಕೆಲಸ ಮಾಡಿ: ಜಿ.ಸಿ.ಚಂದ್ರಶೇಖರ್ ಸಲಹೆ

ಕೆಆರ್ ಪುರ: ಯಾವುದೇ ಕ್ಷಣದಲ್ಲಿ ಜಿಬಿಎ ಚುನಾವಣೆ ಘೋಷಣೆ ಯಾಗುವ ಸಾದ್ಯತೆಯಿದ್ದು ಆಕಾಂಕ್ಷಿಗಳು ನಾಯಕರ ಹಿಂದೆ ಸುತ್ತುವುದನ್ನು ಬಿಟ್ಟು ಬೂತ್ ಮಟ್ಟದಲ್ಲಿ ಕೆಲಸ ಮಾಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ.ಚಂದ್ರಶೇಖರ್ ತಿಳಿಸಿದ್ದಾರೆ.
ಕೆಆರ್ ಪುರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ಪೂರ್ವಜಿಲ್ಲಾ ಕಾಂಗ್ರೆಸ್ ಜಿಬಿಎ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗ ಯಾವುದೇ ಸಮಯದಲ್ಲಿ ಜಿಬಿಎ ಚುನಾವಣೆ ಘೋಷಣೆ ಮಾಡುವ ಸಾಧ್ಯತೆಯಿದ್ದು ಪಕ್ಷದ ಟಿಕೇಟ್ ಆಕಾಂಕ್ಷಿ ಗಳು ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವಂತೆ ಕರೆ ನೀಡಿದರು. ಪಕ್ಷವು ಗುತ್ತಿಗೆದಾರರು ಹಾಗೂ ಬಿಲ್ಡರ್ ಗಳಿಗೆ ಪಕ್ಷಕ್ಕೆ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೇಟ್ ನೀಡಲು ನಿರ್ಧರಿಸಿರುವುದಾಗಿ ಹೇಳಿದರು.
ಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಮೋಹನ್ ಬಾಬು ಮಾತನಾಡಿ, ಪೂರ್ವ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಮೇಯರ್ ಮಾಡುವ ಗುರಿಯನ್ನು ಹೊಂದಿದ್ದು,ಕೆಆರ್ ಪುರ ಕ್ಷೇತ್ರದಿಂದ ಕನಿಷ್ಠ ಇಪ್ಪತ್ತು ಪಾಲಿಕೆ ಸದಸ್ಯರನ್ನು ಗೆಲ್ಲಿಸಿಕೊಂಡು ಬರುವುದಾಗಿ ತಿಳಿಸಿದ ಅವರು,ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ಮತದಾರರಿಗೆ ಅರಿವು ಮೂಡಿಸುವ ಕಾರ್ಯಮಾಡಬೇಕೆಂದು ಕಾರ್ಯಕರ್ತರಿಗೆ ಸೂಚಿಸಿದರು.
ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಕಾಂಗ್ರೆಸ್ ಪಕ್ಷವು ಕೆಆರ್ ಪುರ ಕ್ಷೇತ್ರದಲ್ಲಿ ಸದೃಡವಾಗಿದ್ದು ಮುಖಂಡರು ಗುಂಪುಗಾರಿಕೆ ಮಾಡುವುದು ಬಿಟ್ಟು ಪಕ್ಷದ ಬಲವರ್ಧನೆಗೆ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಡಿಟಿ ಶ್ರೀನಿವಾಸ್, ಮಾಜಿ ವಿಧಾನ ಪರಿಷತ್ ಸದಸ್ಯ ಎಂ ನಾರಾಯಣಸ್ವಾಮಿ, ಪ್ರೋ. ರಾಜೀವ್ ಗೌಡ, ಡಿ.ಎ.ಗೋಪಾಲ್, ರಾಜರಾಜೇಶ್ವರಿನಗರ ವಾರ್ಡ್ ಟಿಕೆಟ್ ಆಕಾಂಕ್ಷಿ ವಸಿಂ ಪಾಷ, ಜಿಬಿಎ ಆಕಾಂಕ್ಷಿಗಳಾದ ಬ್ರಿಜೇಶ್ ಯಾದವ್, ಅಗರ ಪ್ರಕಾಶ್, ವೆಂಕಟೇಶ್, ಡಿ.ಕೆ.ರಮೇಶ್, ಮುಜಮೀಲ್, ಮುಖಂಡರಾದ ಮಕ್ತಿಯಾರ್, ಬಷೀರ್ ಜಮೇದಾರ್ ಮತ್ತಿತರರಿದ್ದರು.