ರಾಜ್ಯ ಕೈಮಗ್ಗ ಎಕ್ಸ್​ಪೋಗೆ ಅದ್ದೂರಿ ಚಾಲನೆ 
ಬೆಂಗಳೂರು

ರಾಜ್ಯ ಕೈಮಗ್ಗ ಎಕ್ಸ್​ಪೋಗೆ ಅದ್ದೂರಿ ಚಾಲನೆ |HANDLOOM EXPO

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಜೆ.ಪಿ. ನಗರ 7ನೇ ಹಂತ ಶುಭ್​ ಕನ್ವೆಕ್ಷನ್​ ಹಾಲ್​ನಲ್ಲ್ಲಿ ಆಯೋಜನೆ
  • 31ರ ವರೆಗೆ ಮಾರಾಟ, ಪ್ರದರ್ಶನ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಭಾರತೀಯ ಕೈಮಗ್ಗ ನಿಗಮ ವತಿಯಿಂದ ಜೆ.ಪಿ.ನಗರ 7ನೇ ಹಂತದ ಶುಭ್​ ಕನ್ವೆಕ್ಷನ್​ ಹಾಲ್​ನಲ್ಲಿ ಆಯೋಜಿಸಲಾಗಿರುವ ರಾಜ್ಯ ಕೈಮಗ್ಗ ಎಕ್ಸ್​ಪೋಗೆ "ವಿಜಯವಾಣಿ' ಸಂಪಾದಕ ಕೆ.ಎನ್​. ಚನ್ನೇಗೌಡ ಮಂಗಳವಾರ ಚಾಲನೆ ನೀಡಿದರು. 31ರ ವರೆಗೆ ನಡೆಯಲಿರುವ ಎಕ್ಸ್​ಪೋದಲ್ಲಿ ಅಸ್ಸಾಂ, ಬಿಹಾರ್​, ಜಾರ್ಖಂಡ್​, ಉತ್ತರ ಪ್ರದೇಶ ಮುಂತಾದ ರಾಜ್ಯಗಳಿಂದ ಮಾರಾಟಗಾರರು ಆಗಮಿಸಿದ್ದು, ಬಗೆಬಗೆಯ ಕೈಮಗ್ಗದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟವಿರಲಿದೆ.
ಈ ವೇಳೆ ಮಾತನಾಡಿದ ಕೆ.ಎನ್​. ಚನ್ನೇಗೌಡ, ಕೈಮಗ್ಗ ಕ್ಷೇತ್ರವು ನಮ್ಮದೇಶದ ಸಂಸತಿಯನ್ನು ಪ್ರತಿಬಿಂಬಿಸುತ್ತದೆ. ಈ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯವಾಗಿ ಮಾರುಕಟ್ಟೆ ವಿಸ್ತರಣೆ ಆಗಬೇಕಿರುವುದು ಅನಿವಾರ್ಯವಾಗಿದೆ. ಇನ್​ಸ್ಟಾಗ್ರಾಂ,ಫೇಸ್​ಬುಕ್​, ಯುಟ್ಯೂಬ್​ಗಳನ್ನು ನೋಡಿ ಖರೀದಿ ಮಾಡುವ ಟ್ರೆಂಡ್​ ಗ್ರಾಹಕರಲ್ಲಿ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ನಾವು ಸಹ ತಯಾರಾಗಬೇಕಾಗಿದೆ. ಎಐ (ಕೃತಕ ಬುದ್ಧಿಮತ್ತೆ) ಮುಂತಾದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ತಲುಪಲು ಸಾಧ್ಯವಿದೆ ಎಂದರು.
ಕುಶಲಕರ್ಮಿಗಳು ಮತ್ತು ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಎಸ್​. ಚಂದ್ರಶೇಖರ್​ ಮಾತನಾಡಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಕೈಮಗ್ಗಕ್ಕೆ ಉತ್ತಮ ಬೇಡಿಕೆ ಇದೆ, ಎಲ್ಲ ಕಡೆಯಿಂದ ಗುಣಮಟ್ಟದ ವಿಚಾರದಲ್ಲಿ ಶ್ಲಾಘನೆಗಳು ಕೇಳಿಬರುತ್ತಿದೆ. 135 ವರ್ಷಗಳ ಹಳೇ ಸೀರೆಯನ್ನೂ ಎಕ್ಸ್​ಪೋದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಕೈಮಗ್ಗ ಕ್ಷೇತ್ರಕ್ಕೆ ಅಸ್ಸಾಂ ನೇಕಾರರ ಕೊಡುಗೆ ಅಪಾರವಾಗಿದೆ. ಅಲ್ಲಿಯೇ ಅತ್ಯಂತ ಮೌಲ್ಯಯುತ ರೇಷ್ಮೆ ನೇಯ್ಗೆಗಳನ್ನು ಕಾಣಬಹುದು ಎಂದು ಹೇಳಿದರು.
ಹ್ಯಾಂಡ್​ಲೂಮ್ಸ್​ ಆ್ಯಂಡ್​ ಡೈರೆಕ್ಟರ್​ ಟೆಕ್ಸ್​ಟೈಲ್ಸ್​ನ ನಿವೃತ್ತ ಆಯುಕ್ತ ಡಾ.ಡಿ.ಎ. ವೆಂಕಟೇಶ್​, ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮದ ನಿವೃತ್ತ ವ್ಯವಸ್ಥಾಪಕ ಎಂ.ಆರ್​.ಎಸ್​. ರಾವನ್​, ಶ್ರೀಹರಿ ಮತ್ತಿತರರಿದ್ದರು.
ಅವಲಂಬಿತರಿಗೆ ಅನುಕೂಲ
ಈಗಿನ ಮಾರುಕಟ್ಟೆಯಲ್ಲಿ ಕೈಮಗ್ಗದ ವಸ್ತುಗಳ ಮಾರಾಟ ಮಾಡುವುದು ತುಂಬ ಸವಾಲೆನಿಸಿದೆ. ಹೀಗಿರುವಾಗ ಕೈಮಗ್ಗವನ್ನೇ ನಂಬಿಕೊಂಡಿರುವ ಕುಟುಂಬಗಳಿಗೆ ಇಂತಹ ಎಕ್ಸ್​ಪೋಗಳು ಅನುಕೂಲವಾಗಲಿವೆ. ದೇಶದಲ್ಲಿ ಕೈಮಗ್ಗದ ವಸ್ತುಗಳಿಗೆ ಪ್ರೋತ್ಸಾಹ ಸಿಗಬೇಕಿರುವುದು ಅಗತ್ಯವಾಗಿದೆ ಎಂದು ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಡಾ.ಎಸ್​.ಜಿ. ಸುಶೀಲಮ್ಮ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಅಂಗಡಿ, ಮಳಿಗೆ, ಸಿಬ್ಬಂದಿ ಹೀಗೆ ವಾಣಿಜ್ಯ ಕೇಂದ್ರಗಳ ಮೂಲಕವೇ ವ್ಯಾಪಾರ ಮಾಡಬೇಕೆಂದೇನಿಲ್ಲ. ಮನೆಯ ಕೊಠಡಿಯಲ್ಲಿ ಕುಳಿತು ವ್ಯಾಪಾರ ವಹಿವಾಟು ನಡೆಸುವ ಅವಕಾಶಗಳಿವೆ. ಸ್ವಉದ್ಯಮದಲ್ಲಿ ನೇಕಾರರು ಬೆಳೆಯುವಲ್ಲಿ ಡಾ.ಎಸ್​. ಚಂದ್ರಶೇಖರ್​ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ಇಂತಹ ಅನೇಕ ಎಕ್ಸ್​ಪೋಗಳನ್ನು ನಡೆಸುವ ಮೂಲಕವೂ ನೇಕಾರರಿಗೆ ಬೆಂಬಲವಾಗಿ ನಿಂತಿದ್ದಾರೆ.