ವಿಧಾನಸೌಧ 
ಬೆಂಗಳೂರು

ಪದೋನ್ನತಿ ಸೇರಿ ವೃಂದದ ಅಸ್ಪಷ್ಟತೆ: ಸಿ ಆಂಡ್ ಆರ್ ನಿಯಮ ಬಗೆಹರಿಸುವಂತೆ ಸರ್ಕಾರಕ್ಕೆ ಸಿಬ್ಬಂದಿ ಒತ್ತಾಯ- resolve C&R rules

ಬೆಂಗಳೂರು:ಆಹಾರ ಸುರಕ್ಷತೆ ಇಲಾಖೆಯಲ್ಲಿ (ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ) ಹಲವು ವರ್ಷಗಳಿಂದ ಬಾಕಿ ಉಳಿದಿರುವ ವೃಂದ ಮತ್ತು ನೇಮಕಾತಿ (ಸಿ ಆಂಡ್ ಆರ್) ನಿಯಮಗಳು, ಪದೋನ್ನತಿ ಹಾಗೂ ಆಹಾರ ವಿಶ್ಲೇಷಕರ ಸೇವಾ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಿ ಇಲಾಖೆಯನ್ನು ಬಲಪಡಿಸಬೇಕೆಂದು ಆಗ್ರಹ ವ್ಯಕ್ತವಾಗಿದೆ. 
ಪ್ರಸ್ತುತ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಕರು ಸೇರಿ ಅರ್ಹ ಸಿಬ್ಬಂದಿಗೆ ಶೇ.25 ಪದೋನ್ನತಿ ಅವಕಾಶ ಕಲ್ಪಿಸಿರುವುದಾಗಿ ತಿಳಿದುಬಂದಿದೆ. ಆದರೆ,  ಈ ಅವಕಾಶವನ್ನು ಸಮರ್ಪಕವಾಗಿ ಜಾರಿಗೊಳಿಸುವ ಅಗತ್ಯವಿದೆ. ಸಮಯಕ್ಕೆ ಸರಿಯಾಗಿ ಅರ್ಹ ಸಿಬ್ಬಂದಿಗೆ  ಪದೋನ್ನತಿ ದೊರೆಯದೆ ಪರಿಣಾಮ ಇಲಾಖೆಯ ಕಾರ್ಯನಿರ್ವಹಣೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ವೃಂದ ಮತ್ತು ನೇಮಕಾತಿಯ ನಿಯಮಗಳ 1ರಿಂದ 6ವರೆಗಿನ ನಿಯಮಗಳ ಅಡಿ ಪದೋನ್ನತಿ ಹೊಂದುವ ಸಿಬ್ಬಂದಿಯನ್ನು ಆಹಾರ ಸುರಕ್ಷತಾ ಇಲಾಖೆಯ ವೃಂದಕ್ಕೆ ಸೇರಿಸುವ ಅಥವಾ ಅಧಿಸೂಚಿಸುವ ಪ್ರಕ್ರಿಯೆ ಅಂದಾಜು 9 ವರ್ಷಗಳಿಂದ ಬಾಕಿ ಉಳಿದಿದೆ. ಈ ಬಗ್ಗೆ ಸರ್ಕಾರವು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕಾಗಿದೆ. ಆಹಾರ ವಿಶ್ಲೇಷಕರ ವಿಚಾರದಲ್ಲಿಯೂ ಅಸ್ಪಷ್ಟತೆ ಮುಂದುವರಿದಿದೆ. ಕೆಲ ಆಹಾರ ವಿಶ್ಲೇಷಕರನ್ನು ಆಹಾರ ಸುರಕ್ಷತಾ ಇಲಾಖೆಯೊಂದಿಗೆ ವಿಲೀನಗೊಳಿಸಲಾಗಿದ್ದರೆ, ಇನ್ನೂ ಕೆಲವರ ಸೇವಾ ವೃಂದ ಮತ್ತು ಭವಿಷ್ಯದ ಬಗ್ಗೆ ಸ್ಪಷ್ಟತೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಿಬ್ಬಂದಿಯಲ್ಲಿ ಅನಿಶ್ಚಿತತೆ ಉಂಟಾಗಿದ್ದು, ಸರ್ಕಾರವು ಎಲ್ಲರಿಗೂ ಸಮಾನ ಹಾಗೂ ಸ್ಪಷ್ಟವಾದ ಸೇವಾ ನಿಯಮ ರೂಪಿಸಬೇಕೆಂಬ ಒತ್ತಾಯ ಕೇಳಿಬಂದಿದೆ. 
ಆಹಾರ ಸುರಕ್ಷತಾ ಇಲಾಖೆ ನೇರವಾಗಿ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ಇಲಾಖೆಯಾಗಿದೆ. ಸಿಬ್ಬಂದಿ ಕೊರತೆ, ಪದೋನ್ನತಿ ವಿಳಂಬ ಮತ್ತು ವೃಂದದ ಅಸ್ಪಷ್ಟತೆಗಳಿಂದ ಇಲಾಖೆಯ ಕಾರ್ಯಕ್ಷಮತೆ ಕುಂಠಿತವಾಗಬಾರದು. ಆದ್ದರಿಂದ, ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ, ಬಾಕಿ ಇರುವ ಎಲ್ಲ ಸೇವಾ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ, ಇಲಾಖೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಲಪಡಿಸಬೇಕು ಎಂಬುದು ಸಿಬ್ಬಂದಿ ಮತ್ತು ಸಾರ್ವಜನಿಕರ ಮನವಿಯಾಗಿದೆ. ಜತೆಗೆ, ಇಲಾಖೆಯನ್ನು ಸಾರ್ವಜನಿಕರ ಹಿತಕ್ಕಾಗಿ ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಲು, ಅರ್ಹ ಸಿಬ್ಬಂದಿಗೆ ಪದೋನ್ನತಿ, ಸಿಆಂಡ್ ಆರ್ ನಿಯಮಗಳ ಅನುಷ್ಠಾನ ಹಾಗೂ ಆಹಾರ ವಿಶ್ಲೇಷಕರ ಸೇವಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ಅಗತ್ಯವಾಗಿದೆ.