ಹಂಪಿಯಲ್ಲಿ ರಾಮಾಯಣ ಪುಸ್ತಕ ಬಿಡುಗಡೆ
- ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ದೇವರಕೊಂಡಾ ರೆಡ್ಡಿ ಹೇಳಿಕೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಸೂರ್ಯವಂಶದ ಪ್ರಭಾವ ದಕ್ಷಿಣ ಭಾರತದಲ್ಲಿ ತುಂಬಾ ಕಡಿಮೆ. ಆದ್ದರಿಂದಲೇ ರಾಮನ ಆರಾಧನೆ ಇಲ್ಲಿ ತಡವಾಗಿ ಶುರುವಾಗಿದೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ದೇವರಕೊಂಡಾ ರೆಡ್ಡಿ ತಿಳಿಸಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ) ಲೆಕ್ಕಾಧಿಕಾರಿಗಳ ಸಂ ಹಾಗೂ ಸಮನ್ವಿತ ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಂಪಿ ಹಜಾರಾರಾಮರ ದೇವಸ್ಥಾನಗಳಲ್ಲಿನ ಕೆತ್ತನೆಗಳ ಆಧಾರದ ಮೇಲೆ ನಿವೃತ್ತ ಲೆಕ್ಕ ನಿಯಂತ್ರಣಾಧಿಕಾರಿ ಬಿ.ಸತ್ಯನಾರಾಯಣ ರಚಿಸಿರುವ ಹಂಪಿಯಲ್ಲಿ ರಾಮಾಯಣ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಕ್ಷ್ವಕು ವಂಶದ ಕೇಂದ್ರ ಅಯೋದ್ಯೆಯಲ್ಲಿ ಇದ್ದಿದ್ದರಿಂದ 16ನೇ ಶತಮಾನದವರೆಗೆ ದಣ ಭಾರತದಲ್ಲಿ ರಾಮನ ಆರಾಧನೆ ಇರಲಿಲ್ಲ. ಶ್ರೀರಾಮನ ಸ್ವತಂತ್ರ ದೇವಸ್ಥಾನಗಳೂ ಆ ಬಳಿಕವೇ ನಿರ್ಮಾಣವಾಗಿದೆ. ಅದರಲ್ಲಿ ಹಂಪಿ ಹಜಾರ ರಾಮನ ದೇವಸ್ಥಾನವೂ ಒಂದು. ಅಲ್ಲಿರುವ ಶಿಲ್ಪಗಳಲ್ಲಿ ವರ್ಣಿಸಿರುವ ರಾಮನ ಕಥೆಗಳನ್ನು ಭಾವಚಿತ್ರಗಳಾಗಿ ಸೆರೆ ಹಿಡಿದು. ಅದಕ್ಕೆ ಸಾಹಿತ್ಯವನ್ನೂ ಸೇರಿಸಿ, ದೃಶ್ಯಕಾವ್ಯವಾಗಿ ಉಣಬಡಿಸಿರುವುದು ಪ್ರಶಂಸನೀಯ ಸಂಗತಿ ಎಂದರು.
ಕವಿ ಡಾ. ಚಿಂತಾಮಣಿ ಕೊಡ್ಲೆಕೆರೆ ಮಾತನಾಡಿ, ಆದಿಕಾವ್ಯ ರಾಮಾಯಣ ಭಾರತೀಯರಿಗೆ ಒಂದು ಭಾಷೆಯಾಗಿದೆ. ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಅದನ್ನೇ ಸತ್ಯನಾರಾಯಣ ಅವರು, ಕಲಾ ರಾಮಾಯಣ, ಶಿಲಾ ರಾಮಾಯಣವಾಗಿ ಸಿದ್ಧಪಡಿಸಿದ್ದಾರೆ. ಈ ಕೃತಿಯ ಮೂಲಕ ಶಿಲ್ಪಶಾಸ್ತ್ರದ ಪರಿಚಯವೂ ನಮಗಾಗುತ್ತದೆ. ಉದಾಹರಣೆಗೆ ರಾಮನ ಲಕ್ಷಣಗಳು ಶಿಲ್ಪ ಶಾಸ್ತ್ರದಲ್ಲಿ ಹೇಗೆ? ಮುಂತಾದ ವಿಚಾರಗಳು ಅಡಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೃತಿಯ ರಚನಾಕಾರ ಬಿ.ಸತ್ಯನಾರಾಯಣ ಮತ್ತಿತರರು ಇದ್ದರು.