ಬೆಂಗಳೂರು

ಫುಟ್​ಪಾತ್​ ಅವ್ಯವಸ್ಥೆ ಬಗ್ಗೆ ಕೆನಡಾ ಪ್ರಜೆ ಮಾಡಿದ್ದ ವಿಡಿಯೋ ವೈರಲ್; ಇಂದಿರಾ ನಗರದಲ್ಲಿ ದುರಸ್ತಿ ಆರಂಭಿಸಿದ GBA

  • ರಸ್ತೆ ಅವ್ಯವಸ್ಥೆ ಬಗ್ಗೆ ಕೆನಡಾ ಪ್ರಜೆ ಮಾಡಿದ್ದ ವಿಡಿಯೋ ವೈರಲ್

  • ಇಂದಿರಾನಗರದ 12ನೇ ರಸ್ತೆಯಲ್ಲಿ ದುರಸ್ತಿ ಕಾರ್ಯ ಆರಂಭಿಸಿದ ಜಿಬಿಎ ಅಧಿಕಾರಿಗಳು

  • ತ್ವರಿತವಾಗಿ ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ ತ್ಯಾಂಕ್ಯು ಎಂದ ಕೆನಡಾ ಪ್ರಜೆ

ಬೆಂಗಳೂರು: ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಸಹ ಬೆಂಗಳೂರಿನಲ್ಲಿ ರಸ್ತೆಗಳ ಗುಂಡಿ ಸಮಸ್ಯೆಗೆ ಮಾತ್ರ ಪೂರ್ಣ ವಿರಾಮವಿಲ್ಲ. ಇಲ್ಲಿನ ಯಾವುದೇ ಮೂಲೆಗೆ ತಲುಪಿದರೂ ಅಲ್ಲಲ್ಲಿ ರಸ್ತೆಗುಂಡಿ, ಫುಟ್​ಪಾತ್ ದುರಸ್ತಿ, ಕಸ ಇರುವುದು ಮಾತ್ರ ಖಚಿತ. ಈ ಬಗ್ಗೆ ಕೆನಡಾ ಪ್ರಜೆಯೊಬ್ಬರು ಎಕ್ಸ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಈ ಪೋಸ್ಟ್​ ವೈರಲ್​ ಆಗ್ತಿದ್ದಂತೆ ಎಚ್ಚೆತ್ತ ಜಿಬಿಎ ಅಧಿಕಾರಿಗಳು ದುರಸ್ತಿ ಕಾರ್ಯ ಆರಂಭಿಸಿದ್ದಾರೆ.

ಇತ್ತೀಚೆಗೆ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳ ಬಳಿ ಕೈ ಮುಗಿದು ಕೆಲಸ ಮಾಡಿ ಎಂದು ಬೇಡಿಕೊಂಡಿದ್ದರು. ಗೌರವದಿಂದ ಕೇಳಿ ಕೊಳ್ತೇನೆ, ಕೆಲಸ ಮಾಡಿ ಎಂದಿದ್ದರು. ಇರುವ ಜಾಗದಲ್ಲಿ ಜೆಲ್ಲಿ ಹಾಕಿ ಕೆಲಸ ಮಾಡಿ ಅಂದ್ರೆ ನೆಪ ಹೇಳ್ತೀರಾ. ನಾನೇ ಬಂದು ಕೆಲಸ ಮಾಡಲು ಹೇಳ್ಬೇಕಾ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಿದ್ದರೂ ಸಹ ಬೆಂಗಳೂರಿನಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ

ಕೆನಡಾ ಪ್ರಜೆ ಪೋಸ್ಟ್​ನಲ್ಲಿ ಏನಿದೆ?

ಅಕ್ಟೋಬರ್​ 2ರಂದು, ಕೆನಡಾ ಪ್ರಜೆ ಫ್ರೀಸೆನ್​ ಎಂಬುವವರು, ಇಂದಿರಾನಗರದ 12ನೇ ಮುಖ್ಯ ರಸ್ತೆಯ ಫುಟ್​ಪಾತ್​ ದುರಸ್ತಿ, ಕಸ, ಅವೈಜ್ಞಾನಿಕ ಪಾದಾಚಾರಿ ಮಾರ್ಗ ನಿರ್ಮಾಣ, ರಸ್ಯೆ ಮಧ್ಯೆ ಬಿಟ್ಟ ಕಟ್ಟಡದ ಅವಶೇಷಗಳು, ಫುಟ್​ಪಾತ್​ ಮಧ್ಯೆ ದೊಡ್ಡ ಕುಳಿ ಸೇರಿದಂತೆ ನಾನಾ ಅವ್ಯವಸ್ಥೆ ಬಗ್ಗೆ ಫ್ರೀಜನ್​ ಬಹಿರಂಗಪಡಿಸಿ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದರು. ಅವರ ಈ ಸಾಮಾಜಿಕ ಕಾರ್ಯಕ್ಕೆ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಬಂದಿದ್ದು, ಮುನ್ನೂರಕ್ಕು ಹೆಚ್ಚು ಜನರು ಕಾಮೆಂಟ್ ಮಾಡಿದ್ದರು.

'ಬೆಂಗಳೂರು ಟೆಕ್​ ಸಿಟಿ. ಕರ್ನಾಟಕದ ರಾಜಧಾನಿ ಈ ನಗರದಲ್ಲಿ ಇಂತಹ ಅವ್ಯವಸ್ಥೆ ಸರಿಯಲ್ಲ. ವೆಂಚರ್​ ಕ್ಯಾಪಿಟಲ್​ ಸಂಸ್ಥೆ, ಸ್ಟಾರ್ಟ್​ ಅಪ್​ಗಳು ಇರುವಂತೆ ಇಲ್ಲಿ ದುಸ್ಥಿತಿ ಮಟ್ಟದಲ್ಲಿರುವ ಪಾದಾಚಾರಿ ಮಾರ್ಗಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ' ಎಂದು ಅವರು ಹೇಳಿಕೊಂಡಿದ್ದರು

ಜಿಬಿಎದಿಂದ ದುರಸ್ತಿ ಕಾರ್ಯ

ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಗ್ರೇಟರ್​ ಬೆಂಗಳೂರು ಪ್ರಾಧಿಕಾರ, ದುರಸ್ತಿ ಕಾರ್ಯ ಆರಂಭಿಸಿದ್ದಾರೆ. ಇಂದಿರಾ ನಗರದ 12ನೇ ಕ್ರಾಸ್​ನಲ್ಲಿ ಸಿಮೆಂಟ್ ಹಾಕಿ, ಕಸ ತೆಗೆಯುವ ಮೂಲಕ ಭರ್ಜರಿ ಕಾರ್ಯಾಚರಣೆ ಆರಂಭಿಸಿದ್ದಾರೆ. ದೊಡ್ಡ ಗುಳಿಯಂತಿದ್ದ ಪ್ರದೇಶದಲ್ಲಿ ಈಗ ಮಣ್ಣು ಹಾಕಿ ಮುಚ್ಚಲು ಶುರು ಮಾಡಿದ್ದಾರೆ, ಅವಶೇಷ ತೆರವು, ಕಸ ತೆರವುಗೊಳಿಸಿದ್ದಾರೆ. ಈ ಬಗ್ಗೆ ಫ್ರೀಸನ್ ತಮ್ಮ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ.

ದುರಸ್ತಿ ಬಗ್ಗೆ ಮಾಡಿದ್ದ ವಿಡಿಯೋಗೆ ಪ್ರತಿಕ್ರಿಯೆ ಕೊಟ್ಟು ಕೆಲಸ ಮಾಡಿದ ಜಿಬಿಎ ಅಧಿಕಾರಿಗಳಿಗೆ ಧನ್ಯವಾದ. ಸಮಸ್ಯೆಗೆ ಸ್ಪಂದಿಸಿದ ದೊಮ್ಮಲೂರು ಅಧಿಕಾರಿಗಳು, ಬೆಂಗಳೂರು ಸಿಟಿ ಕಾರ್ಪೋರೇಷನ್​ಗೆ ಧನ್ಯವಾದ ಎಂದು ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ,(ಏಜೆನ್ಸೀಸ್).