ವಿಕಾಸಸೌಧದಲ್ಲಿ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ಕುರಿತು ಪರಾಮರ್ಶಿಸಲು ಡಿಸಿಎಂ ಡಾ. ಜಿ. ಪರಮೇಶ್ವರ ಅಧ್ಯಕ್ಷತೆಯಲ್ಲಿ ಸಭೆ 
ಬೆಂಗಳೂರು

ಬ್ಯಾಕ್‌ಲಾಗ್ ಹುದ್ದೆಗಳ ನೇಮಕಕ್ಕೆ ಸ್ಪೆಷಲ್ ಡ್ರೈವ್

ಸಂಪುಟ ಉಪಸಮಿತಿ ಸಭೆ ನಿರ್ಧಾರ, ರಾಜ್ಯಕ್ಕೆ ಒಂದೇ ನೋಟಿಫಿಕೇಷನ್ ಹೊರಡಿಸಲು ಸೂಚನೆ

ಬೆಂಗಳೂರು : ವಿವಿಧ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬ್ಯಾಕ್‌ಲಾಗ್ (ಹಿಂಬಾಕಿ) ಹುದ್ದೆಗಳ ನೇಮಕಾತಿಗೆ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಬೇಕು ಎಂಬ ನಿರ್ಧಾರಕ್ಕೆ ಸಂಪುಟ ಉಪಸಮಿತಿ ಬಂದಿದೆ.

ವಿಕಾಸಸೌಧದಲ್ಲಿ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ಕುರಿತು ಪರಾಮರ್ಶಿಸಲು ಡಿಸಿಎಂ ಡಾ. ಜಿ. ಪರಮೇಶ್ವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ವೇಳೆ ವಿವಿಧ ಇಲಾಖೆಯಲ್ಲಿ ಬಾಕಿ ಇರುವ ಹುದ್ದೆಗಳ ಮಾಹಿತಿ ಪಡೆದ ಸಮಿತಿ, ಕೂಡಲೇ ನೇಮಕಾತಿಗೆ ಚಾಲನೆ ನೀಡಬೇಕು. ಪ್ರಸ್ತುತ ನಡೆಯುತ್ತಿರುವ ನೇಮಕಾತಿ ಜತೆಗೆ ಸೇರಿಸದೆ ರಾಜ್ಯಕ್ಕೆ ಒಂದೇ ಅಧಿಸೂಚನೆ ಹೊರಡಿಸಿ ಆ ನಂತರ ಯಾವ ಜಿಲ್ಲೆಗೆ ಎಷ್ಟು ಹುದ್ದೆಗಳನ್ನು ಹಂಚಬೇಕು ಎಂಬುದನ್ನು ನಿರ್ಧರಿಸಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಅಧಿಕಾರಿಗಳಿಗೆ ನೋಟಿಸ್ ಜಾರಿ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಹಿಂಬಾಕಿ ಉಳಿದಿರುವ ಹುದ್ದೆಗಳ ನೇಮಕಾತಿಗೆ ಆಡಳಿತ ಮಂಡಳಿ ಆಸಕ್ತಿ ವಹಿಸಿದರೂ ಅಧಿಕಾರಿಗಳು ಒಪ್ಪಿಗೆ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಒಪ್ಪಿಗೆ ಕೊಡಲು ನೀವು ಏಕೆ ಅಡ್ಡಿ ಮಾಡುತ್ತೀರಾ ಎಂದು ಸಚಿವರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಗೈರಾಗಿರುವ ವಿಚಾರಕ್ಕೆ ಸದನ ಸಮಿತಿ ಅಸಮಾಧಾನ ವ್ಯಕ್ತಪಡಿಸಿ ನೋಟಿಸ್ ಜಾರಿ ಮಾಡಲು ಸೂಚಿಸಿತು.

ಅನುದಾನಿತ ಶಾಲಾ-ಕಾಲೇಜುಗಳಲ್ಲಿ ನೇಮಕಾತಿ ಹಿಂಬಾಕಿ ಹೆಚ್ಚು ಪ್ರಮಾಣದಲ್ಲಿ ಉಳಿದಿದೆ ಎಂಬುದನ್ನು ಗಮನಿಸಿದ ಉಪಸಮಿತಿ ಸದಸ್ಯರು, ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ತಕ್ಷಣವೇ ಹಿಂಬಾಕಿ ಉಳಿದಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕು. ಯಾವ ಶಿಕ್ಷಣ ಸಂಸ್ಥೆಗಳು ನಿರ್ಲಕ್ಷ್ಯ ವಹಿಸುತ್ತವೋ ಅಂತಹವುಗಳಿಗೆ ಸರ್ಕಾರದಿಂದ ಕೊಡಲಾಗುತ್ತಿರುವ ಅನುದಾನ ಸ್ಥಗಿತ ಮಾಡುವಂತೆ ಸಮಿತಿ ಸದಸ್ಯರು ಸೂಚಿಸಿದರು.

ಇಲಾಖೆಯಿಂದ ಹುದ್ದೆಗಳ ಮಾಹಿತಿ ಪಡೆದು ವಿಶೇಷ ಕಾರ್ಯಾಚರಣೆ ನಡೆಸಬೇಕೆಂದು ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ. ಈ ಮೂಲಕ ಒಂದೂವರೆ ವರ್ಷದಲ್ಲಿ ಹಿಂಬಾಕಿ ಹುದ್ದೆಗಳ ಭರ್ತಿ ಮಾಡಬೇಕು. ನೇಮಕಾತಿ ವೇಳೆ ಕೇವಲ ಅಂಕ ಮತ್ತು ವಯಸ್ಸು ಮಾತ್ರ ಪರಿಗಣಿಸಬೇಕು. ಇವು ಹಿಂಬಾಕಿ ಉಳಿದ ಹುದ್ದೆಗಳು ಆಗಿರುವ ಕಾರಣಕ್ಕೆ ಹಣಕಾಸು ಇಲಾಖೆಯಿಂದ ಮತ್ತೆ ಒಪ್ಪಿಗೆ ಪಡೆಯುವ ಅಗತ್ಯ ಇಲ್ಲ ಎಂದು ಚರ್ಚೆ ನಡೆಸಲಾಗಿದೆ.

ಸಚಿವರಾದ ಕೆ.ಎಚ್.ಮುನಿಯಪ್ಪ, ಸತೀಶ್ ಜಾರಕಿಹೊಳಿ, ಟಿ.ರಘುಮೂರ್ತಿ, ಕೆ.ಎಸ್.ಬಸವಂತಪ್ಪ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಗೌರವ್ ಗುಪ್ತಾ, ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ನೋಡಲ್ ಏಜೆನ್ಸಿ ಸಲಹೆಗಾರ ಡಾ. ಇ.ವೆಂಕಟಯ್ಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.