ಬೆಂಗಳೂರು: ಹೆತ್ತ ತಾಯಿಯನ್ನೇ ಕೊಂದು ತರಾತುರಿಯಲ್ಲಿ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದ ಆರೋಪಿ ಮಗನನ್ನು ಕಾಡುಗುಡಿ ಪೊಲೀಸರು ಬಂಧಿಸಿದ್ದಾರೆ.
ಬೇವಿನಮರ ಕಾಲನಿ ನಿವಾಸಿ ಭಾಗ್ಯಮ್ಮ (60) ಕೊಲೆಯಾದ ಮಹಿಳೆ. ಈಕೆಯ 3ನೇ ಮಗ ಬಾಲಾಜಿಗೆ (45) ಕೊಲೆ ಆರೋಪದಡಿ ಪೊಲೀಸರು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.
ಕೊಲೆಯಾದ ಮಹಿಳೆ ಮತ್ತು ಮಗ ಇಬ್ಬರೂ ಕುಡಿತಕ್ಕೆ ದಾಸರಾಗಿದ್ದರು. ಸೆ.24ರಂದು ಇಬ್ಬರು ಕುಡಿದಿದ್ದರು. ಆಗ ಇಬ್ಬರ ನಡುವೆ ಜಗಳ ಆಗಿತ್ತು. ಬಾಲಾಜಿ ಆಕೆಯ ಮೇಲೆ ಹಲ್ಲೆ ಮಾಡಿದ್ದರಿಂದ ಆಕೆ ಮೂರ್ಛೆ ತಪ್ಪಿದ್ದಲ್ಲದೆ, ಕೆಲವೆ ನಿಮೀಷಗಳಲ್ಲಿ ಸಾವನ್ನಪ್ಪಿದ್ದಳು.
ತೀವ್ರ ಭಯಗೊಂಡಿದ್ದ ಆರೋಪಿ, ಶವ ವಿಲೇವಾರಿ ಮಾಡುವ ಬಗ್ಗೆ ಯೋಚಿಸುತ್ತಾ ರಾತ್ರಿಯಿಡಿ ಶವದ ಜತೆಗೆ ಮಲಗಿದ್ದ. ಬೆಳಗ್ಗೆ ಎಲ್ಲ ಕುಟುಂಬಸ್ಥರಿಗೂ ಹಾಗೂ ಬಂಧುಗಳಿಗೆ ೆನ್ ಕರೆ ಮಾಡಿ, ತನ್ನ ತಾಯಿ ಮಂಚದ ಮೇಲಿಂದ ನೆಲಕ್ಕೆ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದ.
ಪೊಲೀಸರ ಗಮನಕ್ಕೆ ಬರದಂಗೆ ಅಂತ್ಯಕ್ರಿಯೆ: ಆರೋಪಿ ಬಾಲಾಜಿ ಕರೆಗೆ ಓಗೊಟ್ಟು ಮೃತ ಭಾಗ್ಯಮ್ಮಳ ಅಂತ್ಯಕ್ರಿಯೆಗೆ ಸೆ.25ರಂದು ಎಲ್ಲರು ಆಗಮಿಸಿದ್ದರು. ಸ್ಮಶಾನಕ್ಕೆ ಹೆಣ ಸಾಗಿಸಿದ್ದರು. ಇನ್ನೇನು ಅಂತ್ಯಕ್ರಿಯೆ ಮಾಡಬೇಕೆನ್ನುವಷ್ಟರಲ್ಲಿ ಯಾರೋ ನೀಡಿದ ಮಾಹಿತಿ ಮೇರೆಗೆ 112 ಪೊಲೀಸರು ಸ್ಥಳಕ್ಕೆ ದಾವಿಸಿ ಅಂತ್ಯಕ್ರಿಯೆ ತಡೆದಿದ್ದರು.
ಪೊಲೀಸರ ಮೇಲೆ ಮುಗಿಬಿದ್ದಿದ್ದ ಕುಟುಂಬಸ್ಥರು: ಕೊಲೆ ಅನುಮಾನದಡಿ ಪೊಲೀಸರು ಅಂತ್ಯಕ್ರಿಯೆ ತಡೆದಿದ್ದರು. ಇದ್ದಕ್ಕೆ ಎಲ್ಲ ಕುಟುಂಬಸ್ಥರು, ಪೊಲೀಸರ ಮೇಲೆ ಮುಗಿಬಿದ್ದಿದ್ದರು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಪೊಲೀಸರು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಬಳಿಕ ಕುಟುಂಬಸ್ಥರಿಗೆ ಒಪ್ಪಿಸಿದರು. ಮರಣೋತ್ತರ ವರದಿಯಲ್ಲಿ ಕೊಲೆ ಎಂಬುದು ದೃಢವಾದ ಬಳಿಕ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಸದ್ಯ ಆರೋಪಿಯನ್ನು ತನಿಖೆಗೆ ಒಳಪಡಿಸಿದ್ದು, ಕೃತ್ಯದ ಬಗ್ಗೆ ವಿವರಿಸುತ್ತಿದ್ದಾನೆ.
ಆರೋಪಿ ಬಾಲಾಜಿ ಪೊಲೀಸರ ಬಳಿ ತಾಯಿ ಹತ್ಯೆಯ ಬಗ್ಗೆ ಕೆಲ ಕಾರಣಗಳನ್ನು ಹೇಳಿದ್ದು, ‘ಭಾಗ್ಯಮ್ಮ ಅವರ ಮನೆ ಬಳಿ ವ್ಯಕ್ತಿಯೊಬ್ಬ ಆಗಾಗ್ಗೆ ಕುಳಿತುಕೊಳ್ಳುತ್ತಿದ್ದ ಹಾಗೂ ಈ ವಿಚಾರವಾಗಿ ಸ್ಥಳೀಯರು ತಾಯಿ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರಿಂದ ತಾನು ಕೋಪಗೊಂಡಿದ್ದಾಗಿ ಬಾಲಾಜಿ ಹೇಳಿದ್ದಾನೆ ಎನ್ನಲಾಗಿದೆ.
ಇದಲ್ಲದೆ, ಪತಿಯ ಸಾವಿನ ಬಳಿಕ ಭಾಗ್ಯಮ್ಮ ಮದ್ಯಪಾನ ಮಾಡುತ್ತಿದ್ದರು ಹಾಗೂ ಇದರಿಂದ ಮನೆಯಲ್ಲಿ ಸಮಸ್ಯೆ ಉಂಟಾಗುತ್ತಿತ್ತು ಮತ್ತು ಮೃತ ಭಾಗ್ಯಮ್ಮಳ 32 ಗ್ರಾಂ ಚಿನ್ನಾಭರವನ್ನು ಅಡವಿಟ್ಟಿದ್ದೆ. ಅದನ್ನು ಬಿಡಿಸಿ ಕೊಡುವಂತೆ ತಾಯಿ ಪೀಡಿಸುತ್ತಿದ್ದಳು. ಆಗ ಇಬ್ಬರ ನಡುವೆ ಗಲಾಟೆ ಆದಾಗ ಹಲ್ಲೆ ಮಾಡಿದ್ದೆ ತಾಯಿ ಮೃತಪಟ್ಟಿದ್ದಾಳೆ ಎಂದು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.