solid-waste 
ಬೆಂಗಳೂರು

ಘನತ್ಯಾಜ್ಯ ಸಂಗ್ರಹಣೆ, ಸಾಗಣೆ 5 ಪಾಲಿಕೆಗಳ ತೆಕ್ಕೆಗೆ

ಪ್ರಮುಖ ಮುಖ್ಯಾಂಶಗಳು

  • ಜಿಬಿಎ ಮುಖ್ಯ ಆಯುಕ್ತರಿಂದ ಆದೇಶ ಪ್ರಕಟ
  • ಶುಲ್ಕ ಸಂಗ್ರಹಿಸುತ್ತಿರುವ ಕಾರಣ ಬಿಲ್ ಬಟವಾಡೆಗೂ ಅವಕಾಶ

ಬೆಂಗಳೂರು: ಘನತ್ಯಾಜ್ಯ ನಿರ್ವಹಣೆ ಘಟಕಗಳಾದ ಸಂಗ್ರಹಣೆ ಹಾಗೂ ಸಾಗಣೆಯ ಜವಾಬ್ದಾರಿಯನ್ನು ಐದು ನಗರ ಪಾಲಿಕೆಗಳು ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮಕ್ಕೆ (ಬಿಎಸ್‌ಡಬ್ಲ್ಯುಎಂಎಲ್) ಹಂಚಿಕೆ ಮಾಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಜಿಬಿಎ ಮುಖ್ಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಬಿಬಿಎಂಪಿ ಅಸ್ತಿತ್ವದಲ್ಲಿದ್ದಾಗ ಪಾಲಿಕೆಯೇ ಘನತ್ಯಾಜ್ಯದ ಎಲ್ಲ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿತ್ತು. ಜಿಬಿಎ ರಚನೆಯಾದ ಬಳಿಕ ಈ ಹೊಣೆಯನ್ನು ಬಿಎಸ್‌ಡಬ್ಲ್ಯುಎಂಎಲ್‌ಗೆ ವಹಿಸಲಾಗಿತ್ತು. ಆದರೀಗ ಪಾಲಿಕೆಗಳೇ ಘನತ್ಯಾಜ್ಯ ನಿರ್ವಹಣಾ ಉಪಕರ (ಎಸ್‌ಡಬ್ಲ್ಯುಎಂ ಸೆಸ್) ಹಾಗೂ ಘನತ್ಯಾಜ್ಯ ನಿರ್ವಹಣಾ ಬಳಕೆದಾರರ ಶುಲ್ಕ (ಸೇವಾ ಶುಲ್ಕ) ಸಂಗ್ರಹಿಸುತ್ತಿರುವುದರಿಂದ ಘನತ್ಯಾಜ್ಯ ನಿರ್ವಹಣೆಯ ಜವಾಬ್ದಾರಿಯನ್ನು ನಿಗಮದ ಜತೆಗೆ ಸಮಾನ ಹಂಚಿಕೆ ಮಾಡಲಾಗಿದೆ. ಇದರಿಂದಾಗಿ ಪಾಲಿಕೆ ಸಂಗ್ರಹಿಸಿದ ಸೆಸ್/ಶುಲ್ಕದ ಹಣದಲ್ಲೇ ಮಾಸಿಕ ಬಿಲ್‌ಗಳನ್ನು ಭರಿಸಬೇಕಿದೆ.
ಇದಕ್ಕಾಗಿ ಮೇಲುಸ್ತುವಾರಿ ವಹಿಸಲು ಆಯಾ ಪಾಲಿಕೆಯ ಆಯುಕ್ತರು ಕಾರ್ಪೋರೇಷನ್‌ವಾರು ಜಂಟಿ ಆಯುಕ್ತರ ವೃಂದಕ್ಕಿಂತ ಕಡಿಮೆಯಿಲ್ಲದ ಅಧಿಕಾರಿಯ ನಿಯೋಜನೆ, ಕಾರ್ಯಾಚರಣೆ ಹಾಗೂ ನಿರ್ವಹಣೆ, ಬಿಲ್ ಪಾವತಿ ಕಾರ್ಯಕ್ಕೆ ನೇಮಕ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಇದರ ಹೊರತಾಗಿಯೂ ನಿಗಮವು ಘನತ್ಯಾಜ್ಯದ ಪ್ರಾಥಮಿಕ ಸಂಗ್ರಹಣೆ ಹಾಗೂ ದ್ವಿತೀಯ ಹಂತದ ಸಾಗಣೆಯ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಉಸ್ತುವಾರಿಯನ್ನು ತನ್ನ ಸಂಪನ್ಮೂಲದಿಂದ ನಿರ್ವಹಿಸುವಂತೆ ನಿರ್ದೇಶನ ನೀಡಲಾಗಿದೆ.

ಎಜಿಎಂ ಅಧಿನದಡಿ ಕಾರ್ಯನಿರ್ವಹಣೆ:

ಆಯಾ ನಗರ ಪಾಲಿಕೆಯ ಆರೋಗ್ಯ ಮತ್ತು ನೈರ್ಮಲ್ಯ ಶಾಖೆಯ ಆರೋಗ್ಯ ಮೇಲ್ವಿಚಾರಕರು, ಹಿರಿಯ ಆರೋಗ್ಯ ನಿರೀಕ್ಷಕರು, ಕಿರಿಯ ಆರೋಗ್ಯ ಪರಿವೀಕ್ಷಕರು, ಮಾರ್ಷಲ್ಸ್, ಸಂಪರ್ಕ ಕಾರ್ಯಕರ್ತೆಯರು, ಸಮುದಾಯ ಸಂಚಾಲಕರು ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ/ಕಾರ್ಯಪಾಲಕ ಅಭಿಯಂತರರ ಅಧೀನದಲ್ಲಿ ಕೆಲಸ ಮಾಡುವಂತೆ ಸೂಚಿಸಲಾಗಿದೆ.