ರಾಜ್ಯ ಎಸ್ಸಿ, ಎಸ್ಟಿ ಪತ್ರಿಕಾ ಸಂಪಾದಕರ ಸಂದ ವತಿಯಿಂದ ಗುರುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರನ್ನು ಅಭಿನಂದಿಸಲಾಯಿತು. ನಿಕಟಪೂರ್ವ ಸಿಎಂ ಸಿದ್ದರಾಮಯ್ಯ, ಕೆಯುಡಬ್ಲುಜೆ ಅಧ್ಯಕ್ಷ ಶಿವಾನಂದ ತಗಡೂರು ಇತರರಿದ್ದರು.
ಬೆಂಗಳೂರು: ಅಸತ್ಯವನ್ನು ಬಿಂಬಿಸಿ ವರದಿ ಪ್ರಕಟ ಮಾಡುವ ಪದ್ಧತಿ ಬದಲಾಗಬೇಕು. ಇಲ್ಲದಿದ್ದರೆ ಅಸತ್ಯವನ್ನೇ ಸತ್ಯ ಎಂದು ತಿಳಿಯುತ್ತಾರೆ. ಮಾಧ್ಯಮದಲ್ಲಿ ಬದಲಾವಣೆ ಕಂಡಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯ ಎಸ್ಸಿ, ಎಸ್ಟಿ ಪತ್ರಿಕಾ ಸಂಪಾದಕರ ಸಂದ ವತಿಯಿಂದ ಗುರುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಮಾದ್ಯಮಗಳಲ್ಲಿ ಊಹಾ ವರದಿಗಳಿಗೆ ಅವಕಾಶ ಇರಬಾರದು. ಯಾವುದೇ ಊಹೆಯೂ ಸತ್ಯಕ್ಕೆ ಹತ್ತಿರವಾಗಿರಬೇಕು. ಸತ್ಯಕ್ಕೆ ಹತ್ತಿರವಾಗದ ಮಾಹಿತಿಯನ್ನು ಜನರಿಗೆ ನೀಡಿದರೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ ಎಂದರು.
ಪತ್ರಿಕಾರಂಗದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ ಅವಕಾಶಗಳು ದೊರೆಯುತ್ತಿಲ್ಲ. ಸಮುದಾಯದ ಪತ್ರಕರ್ತರಲ್ಲೂ ಬುದ್ಧಿ, ಪ್ರಾವಿಣ್ಯತೆ, ವ್ಯಕ್ತಿತ್ವ ಇದೆ. ಐತಿಹಾಸಿಕವಾಗಿ ಅಕ್ಷರ ಸಂಸತಿ, ಶಿಕ್ಷಣದ ಅವಕಾಶಗಳಿಂದ ವಂಚಿತರಾಗಿರುವ ಕಾರಣದಿಂದಾಗಿ ಈ ರಂಗದಲ್ಲಿ ಅವರ ಸಂಖ್ಯೆ ಕಡಿಮೆಯಾಗಿದೆ ಎಂದು ತಿಳಿಸಿದರು.
ಡಾ.ಬಿ.ಅರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮೀಸಲಾತಿ ನೀಡಿದ್ದಾರೆ. ಆದರೆ ಪತ್ರಿಕಾರಂಗದಲ್ಲಿ ಇಲ್ಲವಾಗಿರುವುದರಿಂದ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಇನ್ನಾದರೂ ಸಮಾನ ಅವಕಾಶಗಳು ದೊರೆಯುವಂತೆ ಮಾಡಬೇಕಿದೆ ಎಂದರು.
ನಾನು ಪತ್ರಿಕಾರಂಗಕ್ಕೆ ಹೋಗಬೇಕಾಗಿತ್ತು ಎಂಬ ಭಾವನೆ ಈಗ ಮೂಡುತ್ತಿದೆ. ಆದರೆ, ಕಾಲ ಮಿಂಚಿ ಹೋಗಿದೆ. ಶಿವಕುಮಾರ್ ಅವರು ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ಮುಖ್ಯ ವರದಿಗಾರರಾಗಿದ್ದರು. ಸಂಪಾದಕರು ಹಾಗೂ ಪತ್ರಕರ್ತರು ಯಾರಿಗೂ ಕಡಿಮೆಯಿಲ್ಲ. ಅವರಲ್ಲಿ ಪ್ರಾಮಾಣಿಕತೆ ಇದೆ. ಸತ್ಯವಾದ ಸುದ್ದಿಗಳನ್ನು ಜನರ ಮುಂದಿಡುವ ಪ್ರಯತ್ನವನ್ನು ಪತ್ರಕರ್ತರು ಮಾಡಬೇಕು ಎಂದು ಕಿವಿಮಾತು ಹೇಳಿದರು.
ಅಸಮಾನತೆ, ಜಾತಿ, ಮೇಲುಕೀಳು ಭಾವನೆ ಸಮಾಜದಲ್ಲಿ ತುಂಬಿ ತುಳುಕುತ್ತಿದೆ. ಸಂವಿಧಾನದ ಆಶಯಗಳು ಉತ್ತಮವಾಗಿದ್ದರೂ, ಅದನ್ನು ಜಾರಿಗೊಳಿಸುವವರು ಸಂವಿಧಾನದಲ್ಲಿ ನಂಬಿಕೆ ಹೊಂದಿರಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ಸಂವಿಧಾನದಲ್ಲಿ ನಂಬಿಕೆ ಇಲ್ಲದಿದ್ದರೆ ಅದರ ಆಶಯಗಳು ಈಡೇರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.
ಜಾತಿ ವ್ಯವಸ್ಥೆ ನಿಮೂರ್ಲನೆಯಾಗಿ ಜಾತ್ಯತಿತ ಸಮಾಜ ನಿರ್ಮಾಣ ಆಗಬೇಕು ಎಂಬುದು ಬಸವಣ್ಣನವರ ಉದ್ದೇಶವಾಗಿತ್ತು. ಗೊಡ್ಡು ಸಂಪ್ರದಾಯ, ಮೌಢ್ಯ ದೂರವಾಗಬೇಕು ಎಂದು ಪ್ರತಿಪಾದಿಸಿದ್ದರು ಎಂದು ತಿಳಿಸಿದರು.
ನಾನು ಸಿಎಂ ಆಗಿದ್ದಾಗ ಸಂವಿಧಾನದ ಪ್ರಸ್ತಾವನೆಯನ್ನು ಶಾಲಾ&-ಕಾಲೇಜುಗಳಲ್ಲಿ ಓದುವಂತೆ ಆದೇಶಿಸಿದೆ. ಆದರೆ ಪ್ರಜಾಪ್ರಭುತ್ವದ ಕೆಲ ವಿರೋಧಿಗಳು ಅಧಿಕಾರದಲ್ಲಿದ್ದರೆ ಸಂವಿಧಾನದ ಆಶಯಗಳು ಹೇಗೆ ಈಡೇರಲು ಸಾಧ್ಯ.
- ಸಿದ್ದರಾಮಯ್ಯ, ನಿಕಟಪೂರ್ವ ಮುಖ್ಯಮಂತ್ರಿ.