forms-distributed 
ಬೆಂಗಳೂರು

ಎಸ್​​ಐಆರ್​​: ರಾಜಧಾನಿಯಲ್ಲಿ 82 ಲಕ್ಷ ನಮೂನೆ ವಿತರಣೆ

ಆರ್.ತುಳಸಿಕುಮಾರ್

ಪ್ರಮುಖ ಮುಖ್ಯಾಂಶಗಳು

  • ಮತದಾರರನ್ನು ತಲುಪಲು ಗಣತಿ ಸಿಬ್ಬಂದಿ ಸುಸ್ತು
  • ಬಾಡಿಗೆ ಮನೆಗಳ ವಿಳಾಸ ಪತ್ತೆಕಾರ್ಯವೇ ಸವಾಲು
ಬೆಂಗಳೂರು: ರಾಜಧಾನಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಅರ್) ಕಾರ್ಯದಲ್ಲಿ ವೋಟರ್ಸ್‌ಗೆ ನಮೂನೆ ವಿತರಿಸುವಿಕೆ ಶೇ.79 ಪ್ರಗತಿ ಸಾಧಿಸಲಾಗಿದೆ. ಒಟ್ಟು 1.03 ಕೋಟಿ ಮತದಾರರ ಪೈಕಿ ಈವರೆಗೆ 82.94 ಲಕ್ಷ ಫಾರ್ಮ್‌ಗಳನ್ನು ಬಿಎಲ್‌ಒಗಳು ವಿತರಿಸಿದ್ದಾರೆ.
ಮಹಾನಗರದಲ್ಲಿ ಸ್ವಂತ ಮನೆಗಳಿಗಿಂತ ಬಾಡಿಗೆ ಮನೆಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಅಂತಹ ಮತದಾರರನ್ನು ತಲುಪಲು ಗಣತಿ ಸಿಬ್ಬಂದಿ ಹೈರಾಣರಾಗಿದ್ದಾರೆ. ನಮೂನೆ ವಿತರಣೆ ಕಾರ್ಯ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಹಲವು ಪ್ರದೇಶಗಳಲ್ಲಿ ಹಾಲಿ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ, ಅಂತಹ ಮನೆಗಳಿಗೆ ನಮೂನೆ ವಿತರಿಸಲು ಹೋದ ವೇಳೆ ಮತದಾರರು ಬೇರೆಡೆ ಸ್ಥಳಾಂತರಗೊಂಡಿರುವ ಪ್ರಕರಣಗಳು ವರದಿಯಾಗಿವೆ. ಮನೆ ಮಾಲೀಕರ ಮೂಲಕ ವಲಸೆ ಹೋದ ಕಡೆಗಳಿಗೆ ದೂರವಾಣಿ ಕರೆ ಮಾಡುವ ಅಥವಾ ಅನ್ಯರಿಂದ ಮಾಹಿತಿ ಪಡೆಯುವ ಯತ್ನವೂ ಫಲಪ್ರದವಾಗುತ್ತಿಲ್ಲ.
ಬಾಡಿಗೆಮನೆಯಲ್ಲಿದ್ದವರು ವಿವಿಧ ಕಾರಣಗಳಿಂದ ತಮ್ಮ ವಾಸ್ತವ್ಯವನ್ನು ಬದಲಿಸಿದ್ದಾರೆ. ಹಲವರು ಹೊಸ ಮತಪಟ್ಟಿಗೆ ಸೇರದಿದ್ದರೂ, ಹಿಂದಿನ ವೋಟರ್ಸ್‌ ಲಿಸ್ಟ್‌ನಲ್ಲಿರುವ ವಿಳಾಸದಲ್ಲಿ ನಮೂನೆ ಪಡೆಯಲು ಮುಂದಾಗುತ್ತಿಲ್ಲ. ಕೆಲವರು ಮಾತ್ರ ತಮ್ಮ ಬಂಧುಗಳನ್ನು ಕಳುಹಿಸಿ ನಮೂನೆ ಪಡೆದುಕೊಂಡಿದ್ದಾರೆ. ಇನ್ನೊಂದೆಡೆ ನಮೂನೆ ಭರ್ತಿ ಮಾಡಲು ಚುನಾವಣಾ ಆಯೋಗ ಕಲ್ಪಿತ ಫಾರ್ಮ್ ತುಂಬುವ ವಿಧಾನವನ್ನು ಪ್ರಚುರಪಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲೂ ಕೆಲವರು ಫಾರ್ಮ್ ತುಂಬುವ ಬಗೆಯನ್ನು ವಿಡೀಯೊ ಮಾಡಿ ಅಪ್‌ಲೋಡ್ ಮಾಡಿದ್ದಾರೆ. ಇವುಗಳನ್ನು ವೀಕ್ಷಿಯಾದರೂ, ನಮೂನೆ ಪಡೆದು ಮಾಹಿತಿ ಭರ್ತಿ ಮಾಡಿ ವಾಪಸ್ ಮಾಡುವಂತೆ ಬಿಎಲ್‌ಎಗಳು ಮತದಾರರನ್ನು ಮನವೋಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ನಮೂನೆ ವಿತರಣೆ ಪ್ರಗತಿ ವಿವರ:

ಜಿಲ್ಲೆ ನಮೂನೆ ವಿತರಣೆ ಶೇಕಡವಾರು
ಉತ್ತರ 19.64 ಲಕ್ಷ 84.21
ದಕ್ಷಿಣ 16.95 ಲಕ್ಷ 79.03
ಕೇಂದ್ರ 15.57 ಲಕ್ಷ 82.43
ಬೆಂ.ನಗರ 30.77 ಲಕ್ಷ 76.53
ಒಟ್ಟು 82.94 ಲಕ್ಷ 79.84