crime  
ಬೆಂಗಳೂರು

ಶೂಟೌಟ್ ಪ್ರಕರಣ 16 ವಿಶೇಷ ತಂಡ ರಚನೆ

ವಾರ ಕಳೆದರೂ ಬಿಹಾರಿ ಗ್ಯಾಂಗ್ ಸುಳಿವಿಲ್ಲ, ವಕೀಲ ಮಂಜುನಾಥ್ ಹಣೆಗೆ ಗುಂಡು, ಹತ್ಯೆ

ಬೆಂಗಳೂರು: ಮನೆ ಬಾಡಿಗೆ ಹಣದ ವಿಚಾರವಾಗಿ ವಕೀಲ ಮಂಜುನಾಥ್ ಎಂಬುವರ ಹಣೆಗೆ ಕಂಟ್ರಿಮೆಡ್ ಪಿಸ್ತೂಲ್‌ನಿಂದ ಹತ್ಯೆಗೈದು ಪಾರಾರಿಯಾಗಿರುವ ಬಿಹಾರಿ ಗ್ಯಾಂಗ್ ಪತ್ತೆಗೆ 16 ವಿಶೇಷ ತಂಡ ರಚನೆ ಮಾಡಲಾಗಿದೆ. ವಾರ ಕಳೆದರೂ ಆರೋಪಿಗಳ ಸುಳಿವಿಲ್ಲದಂತಾಗಿದೆ.

ವೈಟ್‌ಫೀಲ್ಡ್ ಠಾಣೆ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರ ನಿವಾಸಿ ವಕೀಲ ಮಂಜುನಾಥ್(42) ಹತ್ಯೆಯಾದವರು. ಕೃತ್ಯ ಎಸಗಿ ಪರಾರಿಯಾಗಿರುವ ಬಿಹಾರ ಮೂಲದ ಅಮಿತ್ ಅಲಿಯಾಸ್ ಅಂಕಿತ್ ದುಬೆ ಮತ್ತು ಪವನ್ ದುಬೆ ಎಂಬುವರ ಪತ್ತೆಗೆ ಪೊಲೀಸರು ಶೋಧಕಾರ್ಯ ಮುಂದುವರೆಸದಿದ್ದಾರೆ. ಹೆಸರು, ವಿಳಾಸ, ಸಿಸಿ ಕ್ಯಾಮರಾ ದೃಶ್ಯಾವಳಿಗಳು ಇದ್ದರೂ ಆರೋಪಿಗಳು ಇದುವರೆಗೆ ಪತ್ತೆಯಾಗಿಲ್ಲ.

ತನಿಖೆ ಚುರುಕು:

ನಗರದಲ್ಲಿ ಡೆಲಿವರಿ ಬಾಯ್‌ಗಳಾಗಿ ಕೆಲಸ ಮಾಡಿಕೊಂಡಿದ್ದ ಆರೋಪಿಗಳ ಪತ್ತೆಗೆ ನಗರದಲ್ಲಿ 12 ತಂಡಗಳು ಪರಿಶೀಲನೆ ನಡೆಸುತ್ತಿದ್ದರೆ, ಬಿಹಾರ ಸೇರಿ ಇತರೆ ರಾಜ್ಯಗಳಿಗೆ 4 ವಿಶೇಷ ತಂಡಗಳನ್ನು ಕಳುಹಿಸಲಾಗಿದೆ. ಆರೋಪಿಗಳು ಬಳಕೆ ಮಾಡುತ್ತಿದ್ದ ಮೊಬೈಲ್ ಲೊಕೇಷನ್, ಅವರ ಜತೆ ಕೆಲಸ ಮಾಡುತ್ತಿದ್ದವರ ಮಾಹಿತಿ ಆಧಾರಿಸಿ ತನಿಖೆ ಚುರುಕುಗೊಳಿಸಿರುವ ಪೊಲೀಸರು ವಾರದಿಂದ ತನಿಖೆ ಕೈಗೊಂಡಿದ್ದಾರೆ.

ಹೊರಾಜ್ಯದಿಂದ ಪಿಸ್ತೂಲ್ ಸಾಗಣೆ

ಹೊರಾಜ್ಯದಿಂದ ಬೆಂಗಳೂರು ನಗರಕ್ಕೆ ಕೆಲಸ ಅರಸಿಕೊಂಡು ಬಂದವರಿಂದ ಇಂತಹ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿವೆ. ಬಿಹಾರದಿಂದ ಸಲಿಸಾಗಿ ಕಂಟ್ರಿಮೆಡ್ ಪಿಸ್ತೂಲ್‌ಗಳನ್ನು ತೆಗೆದುಕೊಂಡು ಬರುತ್ತಿರುವ ಆರೋಪಿಗಳು ನಗರದಲ್ಲಿ ಹತ್ಯೆ, ಗಲಾಟೆಗಳಂತಹ ಗಂಭೀರ ಪ್ರಕರಣಗಳಲ್ಲಿ ತೋಡಗುತ್ತಿದ್ದಾರೆ. ಕೆಲದಿನಗಳ ಹಿಂದೆ ಮಧ್ಯಪ್ರದೇಶದಿಂದ 50 ಸಾವಿರದಿಂದ 1 ಲಕ್ಷ ರೂ. ಕಂಟ್ರಿಮೆಡ್ ಪಿಸ್ತೂಲ್ ಪೂರೈಕೆ ಮಾಡುತ್ತಿದ್ದವರನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಬಿಹಾರದಿಂದಲೂ ಅಕ್ರಮವಾಗಿ ಪಿಸ್ತೂಲ್‌ಗಳು ನಗರಕ್ಕೆ ತರಲಾಗುತ್ತಿದೆ. ಕಂಟ್ರಿಮೆಡ್ ಪಿಸ್ತೂಲ್‌ಗಳು ಎಲ್ಲಿಂದ ಹೇಗೆ ತರಲಾಗುತ್ತಿದೆ ಎಂಬುದು ಪೊಲೀಸರಿಗೆ ಸವಾಲಾಗಿದೆ.