ಬೆಂಗಳೂರು: ಹಿರಿಯ ವಿಜ್ಞಾನಿಯೊಬ್ಬರು ಅಪಾರ್ಟ್ಮೆಂಟ್ನ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶ ಮೂಲದ ಶರತ್ ಕಟಿಯಾರ್ (47) ಮೃತ ವಿಜ್ಞಾನಿ. ಈ ಸಂಬಂಧ ಕೆ.ಆರ್ ಪುರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಬೆಂಗಳೂರಿನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಪ್ರೋಗ್ರಾಮಿಂಗ್ ವಿಭಾಗದಲ್ಲಿ ಗ್ರೇಡ್ ‘ಎಫ್’ ಹಿರಿಯ ವಿಜ್ಞಾನಿಯಾಗಿದ್ದ ಇವರು, ಅಕ್ಟೋಬರ್ 21ರ ಸಂಜೆ 7.30ರ ವೇಳೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ 15 ವರ್ಷಗಳಿಂದ ಬೆಂಗಳೂರಲ್ಲೇ ವೃದ್ಧ ತಂದೆ-ತಾಯಿ ಹಾಗೂ ಹೆಂಡತಿ ಮಕ್ಕಳೊಂದಿಗೆ ಕೆ.ಆರ್. ಪುರದಲ್ಲಿನ ಸ್ವಂತ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. ಈ ನಡುವೆ ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು.
ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಶರತ್ ಕಟಿಯಾರ್, ಮಣಿಪಾಲ್ ಹಾಗೂ ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಪಡೆದಿದ್ದರು. ಸಾಯುವ ದಿನ ಮುಂಜಾನೆ ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದು ಕೆಲ ಹೊತ್ತು ವಿಶ್ರಾಂತಿ ಪಡೆದಿದ್ದರು.
ಮನೆಯಲ್ಲಿ ಸುತ್ತಾಡುತ್ತಿದ್ದ ಶರತ್, ಸಂಜೆ ಆಗುತ್ತಿದ್ದಂತೆ ಏಕಾಏಕಿ ಅಪಾರ್ಟ್ಮೆಂಟ್ನ ಮೆಟ್ಟಿಲು ಏರಿ 5ನೇ ಮಹಡಿಗೆ ಹೋಗುತ್ತಿದ್ದರು. ಇದನ್ನು ಕಂಡು ಗಾಬರಿಗೊಂಡ ವೃದ್ಧ ತಂದೆ, ಮಗನನ್ನು ತಡೆಯಲು ಆತನ ಹಿಂದೆಯೇ ಓಡಿದ್ದರು. ಆದರೆ ವಯಸ್ಸಾದ ಕಾರಣ ಮೆಟ್ಟಿಲು ಹತ್ತಲಾಗದೆ ಅವರು ಆಯಾಸಗೊಂಡರು. ಅಷ್ಟರಲ್ಲಿ ಶರದ್ 5ನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲು ಕುಟುಂಬಸ್ಥರು ಹಾಗೂ ಸ್ಥಳೀಯರು ಮುಂದಾದರಾದರೂ ಮಾರ್ಗಮಧ್ಯದಲ್ಲೇ ಅವರು ಸಾವನ್ನಪ್ಪಿದ್ದಾರೆ.